ಕಟ್ಟಡ ಕಾಮಗಾರಿ ಕಳಪೆ: ಕ್ರಮಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಜು. 5
ಕರ್ನಾಟಕ ಭೂ ಸೇನಾ ನಿಗಮ ಮತ್ತು ನಿರ್ಮಿತಿ ಕೇಂದ್ರದವರು ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಟ್ಟಿರುವ ಕಟ್ಟಡಗಳು ಕಳಪೆಯಾಗಿವೆ ಎಂದು ತಾಪಂ ಹಾಗೂ ಜಿಪಂ ಸದಸ್ಯರು ಆರೋಪಿಸಿದ ಕಾರಣ ಶಾಸಕ ಕೆ.ಬಿ. ಕೋಳಿವಾಡರು ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡ ಘಟನೆ ಶುಕ್ರವಾರ ತಾಪಂ ಸಭಾ ಭವನದಲ್ಲಿ ಕರೆದಿದ್ದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ನಡೆಯಿತು.
ಆರೋಪ: 2011-12ನೇ ಸಾಲಿನಲ್ಲಿ ಸರ್ಕಾರದ ವಿವಿಧ ಯೋಜನೆಯಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕರ್ನಾಟಕ ಭೂ ಸೇನಾ ನಿಗಮದವರು ಕಟ್ಟಿರುವ ಅಂಗನವಾಡಿ ಕೇಂದ್ರಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ ಆರೋಪಿಸಿದರು.
ತರಾಟೆ: ನಿರ್ಮಿತಿ ಕೇಂದ್ರದವರು ಲಂಬಾಣಿ ತಾಂಡಾ ಅಭಿವೃದ್ಧಿ ಯೋಜನೆ ಅಡಿಯಲ್ಲಿ ತಾಲೂಕಿನ ಲಂಬಾಣಿ ತಾಂಡಾಗಳಲ್ಲಿ ಕಟ್ಟಿರುವ ಸೇವಾಲಾಲ ಭವನಗಳು ಮತ್ತು ಕಾಂಕ್ರಿಟ್ ರಸ್ತೆಗಳು ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದ್ದಾವೆಂದು ಜಿಪಂ ಸದಸ್ಯೆ ಲಲಿತಾ ಜಾಧವ ಆರೋಪಿಸಿದ ಕಾರಣ ಸಭೆ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಬಿ. ಕೋಳಿವಾಡರು, ಎರಡು ಇಲಾಖೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು ಕಳಪೆ ಗುಣಮಟ್ಟದಿಂದ ಕೂಡಿರುವವೆಂದು ಹೇಳಲಾದ ಕಟ್ಟಡ ಮತ್ತು ರಸ್ತೆಗಳನ್ನು 20 ದಿನದೊಳಗಾಗಿ ಸರಿಪಡಿಸದಿದ್ದಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಸಮೀಕ್ಷೆ ನಡೆಸಿ ವರದಿ ನೀಡಿ: ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಕಟ್ಟಿರುವ ಕಟ್ಟಡ ಪರಿಶೀಲನೆ ನಡೆಸಿ ವರದಿ ನೀಡಲು ಜಿಪಂ ಸಹಾಯಕ ಕಾರ್ಯಪಾಲಕ ಅಭಿಯಂತರ ಮತ್ತು ಕಾಕೂಳ ಗ್ರಾಮದಲ್ಲಿ ಕಟ್ಟಿರುವ ಶಾಲಾ ಕಟ್ಟಡದ ಸಮೀಕ್ಷೆ ನಡೆಸಿ ವರದಿ ನೀಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅಧಿಕಾರ ನೀಡಿರುವುದಾಗಿ ಕೋಳಿವಾಡ ಹೇಳಿದರು.
ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ನಿರ್ಮಿಸಿರುವ ವಿದ್ಯಾರ್ಥಿ ವಸತಿ ನಿಲಯಕ್ಕೆ ನೀರು ಪೂರೈಸುವಂತೆ ತಿಳಿಸಿದರು.
ದೇವರಗುಡ್ಡ ಗ್ರಾಮದ ಸಾರ್ವಜನಿಕರಿಗೆ ಕಿರು ನೀರು ಸರಬರಾಜು ಯೋಜನೆ ಅಡಿಯಲ್ಲಿ ಕೈಗೊಂಡಿರುವ ಯೋಜನೆಯಡಿಯಲ್ಲಿ ದೇವರಗುಡ್ಡ ಗ್ರಾಮಕ್ಕೆ ಕಳುಹಿಸಿರುವ ಪೈಪ್ಲೈನ್ ಮೂಲಕ ವಸತಿ ನಿಲಯಕ್ಕೆ ನೀರೊದಗಿಸುವುದಾಗಿ ಜಿಪಂ ಅಧಿಕಾರಿಗಳು ತಿಳಿಸಿದರು.
ತುಂಗಾ ಮೆಲ್ದಂಡೆ ನೀರಾವರಿ ಯೋಜನಾಧಿಕಾರಿ ಮಾತನಾಡಿ, ಯೋಜನೆ ವ್ಯಾಪ್ತಿಗೆ ಬರುವ ರಾಣಿಬೆನ್ನೂರು, ಬ್ಯಾಡಗಿ, ಹಿರೇಕೆರೂರು, ಹಾವೇರಿ ತಾಲೂಕಿನ ಒಟ್ಟು 21.500 ಹೆಕ್ಟೇರ್ ಪ್ರದೇಶಕ್ಕೆ 2013ನೇ ವರ್ಷದಲ್ಲಿ ನೀರು ಪೂರೈಸುವುದಾಗಿ ತಿಳಿಸಿದರು.
ರಾಷ್ಟ್ರೀಕೃತ ಬ್ಯಾಂಕ್ ಮೂಲಕ ರೈತರಿಗೆ ಹಣಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಾತನಾಡಿ, 2011-12ನೇ ಸಾಲಿನಲ್ಲಿ ಬೆಳೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿರುವ ಬ್ಯಾಡಗಿ ತಾಲೂಕಿನ 15.900 ರೈತರಿಗೆ ರು. 13 ಕೋಟಿ, ರಾಣಿಬೆನ್ನೂರು ತಾಲೂಕಿನ 16.678 ರೈತರಿಗೆ ರು. 21 ಕೋಟಿ ಕೇಂದ್ರ ಸರ್ಕಾರದಿಂದ ಬರಬೇಕಾಗಿದ್ದು, 15 ದಿನದೊಳಗೆ ಹಣ ಕಳುಹಿಸುವುದಾಗಿ ಮೇಲಧಿಕಾರಿಗಳು ತಿಳಿಸಿದ್ದು, ಹಣ ಬಂದ ತಕ್ಷಣ ರಾಷ್ಟ್ರೀಕೃತ ಬ್ಯಾಂಕುಗಳ ಮುಖಾಂತರ ರೈತರಿಗೆ ಹಣವನ್ನು ನೀಡುವುದಾಗಿ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ, ತೋಟಗಾರಿಕೆ, ಪಶು ಸಂಗೋಪನಾ, ರೇಷ್ಮೆ, ಸಣ್ಣ ನೀರಾವರಿ, ಬಿಸಿಎಂ,ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯಿಂದ ಸಾಧಿಸಿರುವ ಪ್ರಗತಿ ಕುರಿತು ವಿವರಿಸಿದರು.
ತಾಪಂ ಪ್ರಭಾರಿ ಕಾರ್ಯನಿರ್ವಾಹಕಾರಿ ಡಾ ನಾಗನಗೌಡ ರೆಡ್ಡಿ, ಜಿಪಂ ಸದಸ್ಯರಾದ ಜ್ಯೋತಿ ರಾಮಲಿಂಗಣ್ಣನವರ, ಮಂಜುಳಾ ಅಂಬಲಿ, ಪಿಎಸ್ಡಿ ಬ್ಯಾಂಕ್ ಅಧ್ಯಕ್ಷ ಪಾಟೀಲ ಉಪಸ್ಥಿತರಿದ್ದರು.