ಪರಿಹಾರ ಮೊತ್ತ ಹೆಚ್ಚಳಕ್ಕೆ ನಿರ್ಧಾರ
ಕನ್ನಡಪ್ರಭ ವಾರ್ತೆ, ಹಾವೇರಿ, ಜು. 5
ವನ್ಯ ಜೀವಿಗಳಿಂದ ಬೆಳೆಹಾನಿ ಅನುಭವಿಸುವ ರೈತರಿಗೆ ನೀಡಲಾಗುತ್ತಿರುವ ಪರಿಹಾರ ಮೊತ್ತ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಡಳಿತ ಭವನದಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ರೈತ ಸಂಘಟನೆಗಳು, ರೈತ ಮುಖಂಡರು ಹಾಗೂ ಅಧಿಕಾರಿಗಳ ಸಭೆಯನ್ನು ಗುರುವಾರ ಸಂಜೆ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಲಾಗಿತ್ತು.
ರೈತರ ಜಮೀನಿಗೆ ನುಗ್ಗಿ ಹಾನಿ: ಧಾರವಾಡ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ ಶಿರೂರ ಮಾತನಾಡಿ, ಜಿಲ್ಲೆಯಲ್ಲಿ 11 ಸಾವಿರ ಜಿಂಕೆಗಳಿವೆ ಎಂದು ಅಂದಾಜಿಸಲಾಗಿದೆ. ಕಳೆದೆರಡು ವರ್ಷ ಬರಗಾಲ ಆವರಿಸಿದ್ದರ ಪರಿಣಾಮ ಜಿಂಕೆಗಳು ಆಹಾರ ಅರಿಸಿಕೊಂಡು ರೈತರ ಹೊಲಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ ಎಂದರು.
ಜಂಟಿ ಪರಿಹಾರಕ್ಕೂ ಅವಕಾಶ: ಬೆಳೆ ನಾಶಕ್ಕೆ ಪರಿಹಾರ ನೀಡಲು ಅವಕಾಶವಿದೆ. ಜಿಂಕೆ, ಕಾಡುಹಂದಿಯಿಂದ ಬೆಳೆ ಹಾನಿ ಸಂಭವಿಸಿದಾಗ ಅರಣ್ಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಬೆಳೆಹಾನಿ ಪರಿಶೀಲನೆ ಮಾಡಿ ಪರಿಹಾರ ನೀಡಬಹುದಾಗಿದೆ ಎಂದೂ ಶಿರೂರ ವಿವರಿಸಿದರು.
ವಿಳಂಬಕ್ಕೆ ಆಕ್ರೋಶ: ಮಾತಿನ ಮಧ್ಯೆ ಪ್ರವೇಶಿಸಿದ ರೈತರು, ಸರ್ಕಾರ ನೀಡುವ ಪರಿಹಾರ ತೀರಾ ಕಡಿಮೆವಿದ್ದು, ಒಂದು ಎಕರೆ ಪ್ರದೇಶಕ್ಕೆ ರು. 3 ಸಾವಿರ ಪರಿಹಾರವನ್ನು ಅರಣ್ಯ ಇಲಾಖೆ ನೀಡುತ್ತಿದ್ದು, ಇದು ಸಹ ಪರಿಶೀಲನೆ ಮಾಡಿ ಸರ್ಕಾರಕ್ಕೆ ಕಳುಹಿಸಿದ ನಂತರ ಒಂದು ವರ್ಷದ ನಂತರ ಪರಿಹಾರ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಹಾರ ಮೊತ್ತ ಹೆಚ್ಚಿಸಿ: ರೈತರು ಒಂದು ಎಕರೆ ಪ್ರದೇಶದಲ್ಲಿ ಬೆಳೆ ಬೆಳೆಯಲು ರು. 25ರಿಂದ ರು. 35 ಸಾವಿರ ಖರ್ಚು ಮಾಡುತ್ತಾರೆ. ಸರ್ಕಾರ ನೀಡುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಆದ್ದರಿಂದ ಪರಿಹಾರ ಮೊತ್ತ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ತಾರತಮ್ಯಕ್ಕೆ ಆಕ್ರೋಶ: ಹಳೆ ಮೈಸೂರಿನಲ್ಲಿ ವನ್ಯ ಪ್ರಾಣಿಗಳಿಂದ ಹಾನಿ ಸಂಭವಿಸಿದಾಗ ಹೆಚ್ಚಿನ ಪರಿಹಾರ ನೀಡಲಾಗುತ್ತಿದೆ. ಆದರೆ, ಉತ್ತರ ಕರ್ನಾಟಕದಲ್ಲಿ ವನ್ಯ ಜೀವಿಗಳಿಂದ ಜೀವ ಹಾನಿ, ಬೆಳೆ ಹಾನಿ ಸಂಭವಿಸಿದರೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ರೈತ ಮುಖಂಡರು ಆರೋಪಿಸಿದರು.
ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಿ: ಬರಗಾಲದಿಂದಾಗಿ ಅರಣ್ಯದಲ್ಲಿ ಜಿಂಕೆಗಳಿಗೆ ನೀರು, ಮೇವು ಸಿಗದೇ ರೈತರ ಹೊಲಗಳಿಗೆ ನುಗ್ಗಿ ದಾಳಿ ಮಾಡಿದ್ದವು. ಆದರೆ, ಇದೀಗ ಅರಣ್ಯದಲ್ಲಿ ಶೇಂಗಾ, ಹುಲ್ಲು ಬೆಳೆಯಲಾಗಿದೆ ಎಂದು ಅಧಿಕಾರಿಗಳ ಹೇಳಿಕೆ ಸುಳ್ಳಿನಿಂದ ಕೂಡಿದೆ. ಆದ್ದರಿಂದ ಜಿಲ್ಲಾಧಿಕಾರಿಗಳೇ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಬೇಕೆಂದು ಅನೇಕರು ಆಗ್ರಹಿಸಿದರು.
ಇದಕ್ಕೆ ಅಧಿಕಾರಿ ಶಿರೂರ ಉತ್ತರಿಸಿ, ಅರಣ್ಯದಲ್ಲಿ ನೀಲಗಿರಿ ಬೆಳೆಸಿ ಪ್ರಮಾದವಾಗಿದೆ. ಕಳೆದೆರಡು ವರ್ಷಗಳಿಂದ ಬರಗಾಲವಿದ್ದ ಪರಿಣಾಮ ಅರಣ್ಯದಲ್ಲಿರುವ ಕೆರೆಗಳಲ್ಲಿ ನೀರಿರಲಿಲ್ಲ. ಮೇವಿನ ಕೊರತೆ ಉಂಟಾಗಿ ಜಿಂಕೆಗಳು ಅರಣ್ಯ ಬಿಟ್ಟು ರೈತರ ಜಮೀನುಗಳಿಗೆ ಲಗ್ಗೆ ಇಟ್ಟಿವೆ ಎಂದರು.
ಪ್ರಸ್ತಾವನೆ ಸಲ್ಲಿಕೆ: ಅರಣ್ಯ ಪ್ರದೇಶ 11 ಸಾವಿರ ಎಕರೆ ವಿಸ್ತಾರವಿದೆ. ಇದಕ್ಕೆ ಬೇಲಿ ಹಾಕುವುದು ಅಸಾಧ್ಯದ ಮಾತು. ಆದರೆ, ಅರಣ್ಯದಂಚಿನ ಹೊಲಗಳಿಗೆ ಸೋಲಾರ್ ಬೇಲಿ ಹಾಕಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
ಬೆಳೆ ಹಾನಿಗೆ ಹೆಚ್ಚಿನ ಪರಿಹಾರ ನೀಡಲು ಹಾಗೂ ಕಾಡು ಪ್ರಾಣಿಗಳಿಂದ ಜೀವ ಹಾನಿ ಸಂಭವಿಸಿದಾಗ ಮತ್ತು ಗಾಯಗಳಾದ ಸಂದರ್ಭದಲ್ಲಿ ಹೆಚ್ಚಿನ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಪಾಂಡುರಂಗ ನಾಯಕ, ಜಿಂಕೆ ಹಾವಳಿಯಿಂದ ರೈತರ ಬೆಳೆಹಾನಿಯಾದ ಬಗ್ಗೆ ಪ್ರತಿಭಟನೆ ನಡೆಸಿರುವುದು ತಮ್ಮ ಗಮನಕ್ಕೆ ಬಂದ ನಂತರ ಧಾರವಾಡದಲ್ಲಿರುವ ಸಿಸಿಎಫ್ ಅಧಿಕಾರಿಯನ್ನು ಸಂರ್ಪಕಿಸಿ ಸಭೆ ಆಯೋಜಿಸಲಾಗಿದ್ದು, ರೈತರ ಸಮಸ್ಯೆಗೆ ಶೀಘ್ರ ಪರಿಹಾರ ಕಂಡು ಹಿಡಿಯಲಾಗುವುದು ಎಂದರು.
ಪ್ರಭಾರ ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ರಾಣಿಬೆನ್ನೂರಿನಲ್ಲಿ ಹಂದಿಗಳನ್ನು ಹಿಡಿಯಲು ಕ್ರಮಕೈಗೊಳ್ಳಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನಸಿಂಗ್ ರಾಥೋರ್, ರೈತ ಮುಖಂಡರಾದ ರಾಮಣ್ಣ ಕೆಂಚಳ್ಳೇರ, ಶಿವಾನಂದ ಗುರುಮಠ, ಗಂಗಣ್ಣ ಎಲಿ, ಮಂಜುನಾಥ ಕದಂ, ಜಿ.ಎ. ಹಿರೇಮಠ, ಸುರೇಶ ಚಲವಾದಿ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ರೈತ ಸಂಘಟನೆಗಳು, ಹಸಿರು ಸೇನೆ ಪದಾಧಿಕಾರಿಗಳು ಹಾಗೂ ಇತರ ಮುಖಂಡರು ಪಾಲ್ಗೊಂಡಿದ್ದರು.