ಬಿಸಿಯೂಟ ಸೇವನೆ: 150ಕ್ಕೂ ಅಧಿಕ ಮಕ್ಕಳು ಅಸ್ವಸ್ಥ
ಕನ್ನಡಪ್ರಭ ವಾರ್ತೆ, ಹಾವೇರಿ, ಜು, 5
ಬಿಸಿಯೂಟ ಸೇವಿಸಿ ಸುಮಾರು 150ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾದ ಘಟನೆ ತಾಲೂಕಿನ ಬಸಾಪುರದಲ್ಲಿ ಶುಕ್ರವಾರ ನಡೆದಿದೆ.
ಬಸಾಪುರದಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದಂತೆ 150ಕ್ಕೂ ಹೆಚ್ಚು ಮಕ್ಕಳು ವಾಂತಿ, ಭೇದಿಯಿಂದ ಬಳಲಿ ಅಸ್ವಸ್ಥರಾಗಿದ್ದಾರೆ.
ಕೂಡಲೇ ಎಲ್ಲ ಮಕ್ಕಳನ್ನು ನಾಲ್ಕು ಅಂಬ್ಯುಲೆನ್ಸ್ ಕರೆಯಿಸಿ ಗುತ್ತಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು.
ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ವೈದ್ಯಾಧಿಕಾರಿ ಚಿಕ್ಕಣ್ಣವರ ಸ್ಥಳಕ್ಕೆ ಧಾವಿಸಿ ಮಕ್ಕಳಿಗೆ ಚಿಕಿತ್ಸೆ ನೀಡಿದರು.
ವೈದ್ಯರ ಕೊರತೆಯಿಂದಾಗಿ ರಾಣಿಬೆನೂರು ತಾಲೂಕು ಆಸ್ಪತ್ರೆಯಿಂದಲೂ ವೈದ್ಯರನ್ನು ಕರೆಯಿಸಿ ಚಿಕಿತ್ಸೆ ಕೊಡಿಸಲಾಯಿತು. ಬಿಸಿಯೂಟ ಸೇವಿಸಿ ಅಸ್ವಸ್ಥರಾದ ಮಕ್ಕಳ ಸುದ್ದಿ ಕಾಡ್ಗಿಚ್ಚಿನಂತೆ ಊರೆಲ್ಲ ಹರಡಿ ಪಾಲಕರೆಲ್ಲ ಆಗಮಿಸಿ ಪ್ರತಿಭಟನೆ ನಡೆಸಲು ಆರಂಭಿಸಿದರು.
ಬಿಸಿಯೂಟ ತಯಾರಿಕೆಯಲ್ಲಿ ನಿರ್ಲಕ್ಷ್ಯ ತೋರಿದ್ದರಿಂದಲೇ ಮಕ್ಕಳು ಅಸ್ವಸ್ಥಗೊಳ್ಳುವಂತಾಗದೆ. ಇದಕ್ಕೆ ಅಡುಗೆ ತಯಾರಕರು ಹಾಗೂ ಶಿಕ್ಷಕರ ನಿರ್ಲಕ್ಷ್ಯವೇ ಕಾರಣ. ಮಕ್ಕಳಿಗೆ ಏನಾದರೂ ಹೆಚ್ಚುಕಡಿಮೆಯಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದೈವಶಾತ್ ಮಕ್ಕಳೆಲ್ಲರೂ ಆರೋಗ್ಯದಿಂದ ಇದ್ದು, ಚೇತರಿಸಿಕೊಂಡಿದ್ದಾರೆ. ಬಿಸಿಯೂಟದಲ್ಲಿ ಹಲ್ಲಿ ಬಿದ್ದಿದ್ದರಿಂದ ಈ ರೀತಿ ಆಗಿದೆ ಎಂದು ಆರೋಪಿಸಲಾಯಿತು.