ಸಮಸ್ಯೆ ಶೀಘ್ರ ಪರಿಹರಿಸಿ
ಹಿರೇಕೆರೂರು: ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಸಹಾನುಭೂತಿಯಿಂದ ಮಾನವೀಯ ನೆಲಗಟ್ಟಿನ ಮೇಲೆ ಗಮನಿಸಿ, ಶೀಘ್ರಗತಿಯಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂದು ಶಾಸಕ ಯು.ಬಿ. ಬಣಕಾರ ಕರೆ ನೀಡಿದರು.
ಅವರು ತಾಲೂಕಿನ ಗಡಿ ಗ್ರಾಮ ದಾಸನಕೊಪ್ಪದಲ್ಲಿ ತಾಲೂಕು ಆಡಳಿತದ ವತಿಯಿಂದ ಜರುಗಿದ ಜನಸ್ಪಂದನ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಜನತೆಯ ಮನೆ ಬಾಗಿಲಿಗೆ ಹೋಗಿ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಜನಸ್ಪಂದನ ಜಾರಿಗೆ ತಂದಿದೆ. ಕಾರಣ ತಾಲೂಕು ಅಧಿಕಾರಿಗಳು ಭಾಗವಹಿಸಿ ಗ್ರಾಮೀಣರಿಗೆ ಅನುಕೂಲ ಕಲ್ಪಿಸಬೇಕು, ಅವರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಂಡು ಹಿಡಿದು ಅನುಕೂಲ ಕಲ್ಪಿಸಿದಾಗ ಕಾರ್ಯಕ್ರಮ ಜನಮಾನಸದಲ್ಲಿ ಉಳಿಯುತ್ತದೆ ಹಾಗೂ ಸರ್ಕಾರದ ಕಾರ್ಯಕ್ರಮ ಸದುಪಯೋಪವಾಗಲು ಸಾಧ್ಯ ಎಂದರು.
ಸಾರ್ವಜನಿಕರಾಗಲಿ ಇಲ್ಲವೆ ಇಲಾಖೆಗಳ ಅಧಿಕಾರಿಗಳಾಗಲಿ ತಮ್ಮ ಸಮಸ್ಯೆಗಳ ಬಗ್ಗೆ ನೇರವಾಗಿ ನಮ್ಮ ಗಮನಕ್ಕೆ ತರಬೇಕು. ಇಲಾಖೆಗಳಿಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳಿದ್ದರೆ ನಾವು ವಿರೋಧ ಪಕ್ಷದ ಶಾಸಕರಾಗಿದ್ದರಿಂದ ವಿಧಾನಸಭೆಯಲ್ಲಿ ನೇರವಾಗಿ ಸರ್ಕಾರದೊಡನೆ ಚರ್ಚಿಸಿ ಸೂಕ್ತಪರಿಹಾರ ಕಂಡುಹಿಡಿಯಲು ಸಾಧ್ಯವಾಗುತ್ತದೆ. ಜನಸ್ಪಂದನ ಕಾರ್ಯಕ್ರಮದಲ್ಲಿ ಸಲ್ಲಿಸುವ ಅರ್ಜಿಗಳನ್ನು ತ್ವರಿತವಾಗಿ ಪರಿಶೀಲಿಸಿ ಅವುಗಳಿಗೆ ಪರಿಹಾರ ಕಂಡು ಹಿಡಿಯಬೇಕು. ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಸಲ್ಲಿಸಲಾಗುವ ಅರ್ಜಿಗಳನ್ನು ಪಾರದರ್ಶಕವಾಗಿ ಗಮನಿಸಿ ಆಯ್ಕೆ ಮಾಡಲಾಗುವುದು, ಶಾಲಾ -ಕಾಲೇಜುಗಳ ವಿದ್ಯಾರ್ಥಿಗಳು ಸುಗಮವಾಗಿ ಉತ್ತಮ ಶಿಕ್ಷಣ ಪಡೆಯಲು ಅವಕಾಶ ಮಾಡಿಕೊಡಬೇಕು ಎಂದರು. ತಾಲೂಕಿನಲ್ಲಿ ಇರುವ ಶಿಕ್ಷಕರ ಕೊರತೆಯನ್ನು ಕೊರತೆಯನ್ನು ನೀಗಿಸಲು ಪ್ರಯತ್ನಿಸಲಾಗುವುದು ಎಂದರು.
ಸಭೆಯಲ್ಲಿ ತಹಸೀಲ್ದಾರ್ ಹನುಮಂತಪ್ಪ ಬಡದಾಳೆ, ಟಿ. ಬಿ. ಹೊಸೂರ, ತಾಲೂಕು ಪಂಚಾಯಿತಿ ಸದಸ್ಯೆ ಅನ್ನಪೂರ್ಣ ಗಾಳಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರೇಖಾ ಉಪ್ಪಾರ, ಸದಸ್ಯರಾದ ಮಹೇಶ ಮಾನಿಬಣಕಾರ, ಚೆನ್ನಬಸಪ್ಪ ಬಣಕಾರ, ಲಕ್ಷ್ಮಪ್ಪ ತಳವಾರ, ಕಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ವಿವಿಧ ಗ್ರಾಮಗಳ ಸಾರ್ವಜನಿಕರು ಭಾಗವಹಿಸಿದ್ದರು.