ಪೌರ ಕಾರ್ಮಿಕರ ಮುಷ್ಕರ: ತುಂಬಿದ ಕಸದ ರಾಶಿ
ಬ್ಯಾಡಗಿ: ವೇತನ ಪರಿಷ್ಕರಿಸುವಂತೆ ಆಗ್ರಹಿಸಿ ಸ್ಥಳೀಯ ಪುರಸಭೆಯ ಗುತ್ತಿಗೆ ಪೌರ ಕಾರ್ಮಿಕರು ಕಳೆದೊಂದು ವಾರದಿಂದ ಕೆಲಸ ಸ್ಥಗಿತಗೊಳಿಸಿದ್ದು, ಪಟ್ಟಣದ ಎಲ್ಲೆಂದರಲ್ಲಿ ಕಸದ ರಾಶಿಗಳು ಬಿದ್ದಿವೆ. ಅಲ್ಲದೇ ತುಂಬಿರುವ ಚರಂಡಿಗಳು ದುರ್ವಾಸನೆ ಹೊರ ಸೂಸುತ್ತಿವೆ.
ಡೆಂಘೀ ಜ್ವರಕ್ಕೆ ಈಗಾಗಲೇ ಪಟ್ಟಣದಲ್ಲಿ ಇಬ್ಬರು ಬಲಿಯಾಗಿದ್ದರೂ ಕೂಡ ಸ್ವಚ್ಛತೆ ಬಗ್ಗೆ ಗಮನ ನೀಡದಿರುವ ಜಿಲ್ಲಾಡಳಿತ ಮಾತ್ರ ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸ.
ನಿರ್ಲಕ್ಷ್ಯ: ಪೌರ ಕಾರ್ಮಿಕರು ಹಲವಾರು ಬಾರಿ ಪ್ರತಿಭಟನೆ ನಡೆಸಿದರೂ ಕೂಡ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಪುರಸಭೆ ಹಾಗೂ ಗುತ್ತಿಗೆ ಪೌರಕಾರ್ಮಿಕರ ನಡುವಿನ ಹಗ್ಗ-ಜಗ್ಗಾಟಕ್ಕೆ ಕೊನೆ ಎಂಬುದಿಲ್ಲವೇ.. ಇದು ಸಾರ್ವಜನಿಕರ ಮುಂದಿರುವ ಪ್ರಶ್ನೆ.
ಸಾರ್ವಜನಿಕರ ತೆರಿಗೆ ಪೋಲು: ಪಟ್ಟಣದ ವ್ಯಾಪ್ತಿಯಲ್ಲಿ ನೈರ್ಮಲ್ಯ ನಿರ್ವಹಣೆಗೆ ಕಾಯಂ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಹಿಂಜರಿಯುತ್ತಿರುವ ಪೌರಾಡಳಿತ ಇಲಾಖೆ, ಟೆಂಡರ್ ಕರೆಯುವ ಮೂಲಕ ಗುತ್ತಿಗೆ ವಹಿಸಿಕೊಡುತ್ತಿದೆ. ಇತ್ತ ನೈರ್ಮಲ್ಯ ಕಾಪಾಡಿಕೊಳ್ಳಲಾಗದೇ ಅತ್ತ ಪೌರ ಕಾರ್ಮಿಕರು ಮಾಡಿದ ಕೆಲಸಕ್ಕೆ ಸೂಕ್ತ ವೇತನ ನೀಡಲಾಗದೇ ಸಾರ್ವಜನಿಕರ ತೆರಿಗೆ ಹಣ ಮೂರನೇಯವರ ಪಾಲು ಮಾಡುತ್ತಿದೆ.
ಗುತ್ತಿಗೆದಾರ ನೀಡುತ್ತಿರುವ ವೇತನ ಸಾಕಾಗುವುದಿಲ್ಲ. ವೇತನ ಹೆಚ್ಚಿಸುವರೆಗೂ ಕೆಲಸಕ್ಕೆ ತೆರಳುವುದಿಲ್ಲ ಎಂದು ಬಿಗಿಪಟ್ಟು ಹಿಡಿದಿರುವ 36 ಗುತ್ತಿಗೆ ಪೌರಕಾರ್ಮಿಕರು ಕಳೆದೊಂದು ವಾರದಿಂದ ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿದ್ದಾರೆ. ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿಗಳಿಂದ ಪಟ್ಟಣದ ನೈರ್ಮಲ್ಯ ಹಾಳಾಗಿದೆ.
ಗೋಲ್‌ಮಾಲ್: ಪ್ರತಿದಿನಕ್ಕೆ ರು. 155ರಂತೆ (ತಿಂಗಳಿಗೆ 4,650) ಒಟ್ಟು 40 ಪೌರಕಾರ್ಮಿಕರಿಗೆ ವೇತನ ಅನ್ವಯವಾಗುವಂತೆ ಮಾರುತಿ ಹಂಜಗಿ ಎಂಬುವರು ಗುತ್ತಿಗೆ ಪಡೆದಿದ್ದರು. ಆದರೆ, ಗುತ್ತಿಗೆದಾರ ಮಾತ್ರ ಕೇವಲ ರು. 4 ಸಾವಿರ ವೇತನ ನೀಡುತ್ತಿದ್ದು, ಪೌರಕಾರ್ಮಿಕರು ಇದನ್ನು ವಿರೋಧಿಸುತ್ತಾ ಬಂದಿದ್ದಾರೆ. ಇಷ್ಟೊಂದು ಕಡಿಮೆ ಹಣದಲ್ಲಿ ಜೀವನ ನಿರ್ವಹಣೆ ಮಾಡುವುದಾದರೂ ಹೇಗೆ.. ಎಂಬುದು ಅವರ ಪ್ರಶ್ನೆ. ವೇತನ ಪರಿಷ್ಕರಿಸುವಂತೆ ಹಲವಾರು ಬಾರಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ. ಗುತ್ತಿಗೆದಾರನ ಅವಧಿ ಮುಗಿದಿದ್ದರೂ ಕೂಡ ಅವರನ್ನೇ ಮುಂದುವರೆಸಿರುವುದು ಕೂಡ ಸಾಕಷ್ಟು ಅನುಮಾನಗಳು ಮೂಡುತ್ತಿವೆ ಎನ್ನುತ್ತಾರೆ ಕುಮಾರ ಮಾಳಗಿ.
ಇಲಾಖೆ ನಿಯಮ ಉಲ್ಲಂಘನೆ: ಕಾರ್ಮಿಕ ಇಲಾಖೆಯ ಬಹುತೇಕ ನಿಯಮಗಳನ್ನು ಸ್ಥಳೀಯ ಪುರಸಭೆ ಧಿಕ್ಕರಿಸಿದೆ. ದಿನಕ್ಕೆ 8 ತಾಸು ಕೆಲಸ ನಿರ್ವಹಿಸಬೇಕೆನ್ನುವ ನಿಯಮವಿದ್ದರೂ ಗುತ್ತಿಗೆದಾರ 10ರಿಂದ 12 ತಾಸಿಗೂ ಹೆಚ್ಚು ಕಾಲ ದುಡಿಸಿಕೊಳ್ಳುತ್ತಿದ್ದಾರೆ.
ಆರೋಗ್ಯವಿಮೆ, ಭವಿಷ್ಯನಿಧಿ ಇನ್ನಿತರ ಸೌಲಭ್ಯಗಳು ಪೌರಕಾರ್ಮಿಕರಿಗೆ ಇಂದಿಗೂ ಲಭ್ಯವಾಗಿಲ್ಲ. ವಾರದಲ್ಲಿ 1 ದಿವಸ ಕಡ್ಡಾಯವಾಗಿ ರಜೆ ನೀಡಬೇಕು. ರಾಷ್ಟ್ರೀಯ ಹಬ್ಬ ಸೇರಿದಂತೆ ಇನ್ನಿತರ ರಜಾ ದಿನಗಳಲ್ಲಿಯೂ ಕೆಲಸ ನಿರ್ವಹಿಸಿದಲ್ಲಿ 2 ಪಟ್ಟು ವೇತನ ಹೆಚ್ಚುವರಿಯಾಗಿ ನೀಡಬೇಕೆಂಬ ಕಾರ್ಮಿಕ ಇಲಾಖೆ ಯಾವುದೇ ನಿಯಮಗಳು ಸ್ಥಳೀಯ ಪುರಸಭೆಯಲ್ಲಿ ಪಾಲನೆಯಾಗುತ್ತಿಲ್ಲ.
ನುಸುಳಿದ ರಾಜಕೀಯ: ನೈರ್ಮಲ್ಯ ನಿರ್ವಹಣೆ, ಕಸ ವಿಲೇವಾರಿಗೆ ನೂತನ ದರ ಅನ್ವಯವಾಗುವಂತೆ ಟೆಂಡರ್ ಕರೆಯಲಾಗಿದ್ದು, ಕಳೆದ ಮೇ 29ಕ್ಕೆ ಇಪ್ರೊಕ್ಯೂರ್‌ಮೆಂಟ್ ಮುಕ್ತಾಯಗೊಂಡಿದೆ. ಆದರೆ, ಜಿಲ್ಲಾಧಿಕಾರಿಗಳ ಕಚೇರಿಯಿಂದ ಗುತ್ತಿಗೆದಾರನಿಗೆ ಮಾತ್ರ ಈವರೆಗೂ ಕೆಲಸದ ಆದೇಶ ತಲುಪಿಲ್ಲ. ಇಲ್ಲಿಯೂ ರಾಜಕೀಯ ನುಸುಳಿರುವ ಆರೋಪ ಕೇಳಿ ಬರುತ್ತಿದ್ದು, ಹೀಗಾಗಿ ಅನಗತ್ಯ ವಿಳಂಬವಾಗುತ್ತಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನೆರಡು ದಿನಗಳಲ್ಲಿ ದಾಖಲೆಗಳ ಪರಿಶೀಲನೆ ಪೂರ್ಣಗೊಳ್ಳಲಿದ್ದು, ಬಳಿಕ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಪರಿಸರ ಅಭಿಯಂತರ ಆರ್.ಎಸ್. ಉಮೇಶ ಪತ್ರಿಕೆಗೆ ತಿಳಿಸಿದರು.