ಬೇಡಿಕೆ ಈಡೇರಿಕೆಗೆ ಇಂದು ಕೃಷಿ ಕಾರ್ಮಿಕರಿಂದ ಪ್ರತಿಭಟನೆ
ಹಾನಗಲ್ಲ: ಕೃಷಿ ಕೂಲಿ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಲ್ ಇಂಡಿಯಾ ಕಿಸಾನ್ ಸಭಾ ಹಾನಗಲ್ಲ ತಾಲೂಕು ಸಮಿತಿ ಜು. 8ರಂದು ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಿದೆ. ಅಕ್ರಮ ಭೂಮಿ ಸಾಗುವಳಿ ಸಕ್ರಮಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ಕೂಡಲೇ ಇತ್ಯರ್ಥಗೊಳಿಸಬೇಕು. ಮರಗಳೇ ಇಲ್ಲದ ಅರಣ್ಯ ಭೂಮಿ, ಅರಣ್ಯ ಇಲಾಖೆಗೆ ವರ್ಗಾಯಿಸಲಾದ ಕಂದಾಯ ಭೂಮಿ ಮತ್ತು ಬೇಚಾರಕ್ ಭೂಮಿಯಲ್ಲಿ ಮಾಡಿಕೊಂಡಿರುವ ಅಕ್ರಮ ಸಾಗುವಳಿ ಪ್ರಕರಣಗಳನ್ನು ಸಕ್ರಮಗೊಳಿಸುವುದು. ತಾಲೂಕಿನ ಕೆಲವು ಗ್ರಾಮಗಳಲ್ಲಿ ಅರಣ್ಯ ಭೂಮಿಯನ್ನು ಹಲವು ದಶಕಗಳಿಂದ ಸಾಗುವಳಿ ಮಾಡುತ್ತಿದ್ದು, ಅಲ್ಲಿನ ರೈತರನ್ನು ಒಕ್ಕಲೆಬ್ಬಿಸುವ ಅರಣ್ಯ ಇಲಾಖೆಯ ದೌರ್ಜನ್ಯವನ್ನು ನಿಲ್ಲಿಸಬೇಕು. ತಾಲೂಕಿನ ಕೃಷಿಯೋಗ್ಯ ಸರ್ಕಾರಿ ಭೂಮಿಯನ್ನು ಬೇಸಾಯ ಮಾಡಲು ಬಡವರಿಗೆ ನೀಡಬೇಕು ಎಂದು ಆಗ್ರಹಿಸಿ ಪಟ್ಟಣದ ವಿರಕ್ತಮಠದಿಂದ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ಗೆ ಮನವಿ ಸಲ್ಲಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಕೂಲಿ ಕಾರ್ಮಿಕರು ಪಾಲ್ಗೊಳ್ಳಬೇಕೆಂದು ತಾಲೂಕಾಧ್ಯಕ್ಷ ಸಹದೇವಪ್ಪ ಕರಬಣ್ಣವರ ಹಾಗೂ ಕಾರ್ಯದರ್ಶಿ ವಿಶ್ವನಾಥ ತುಪ್ಪದ ತಿಳಿಸಿದ್ದಾರೆ.