ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸದೃಢ ರಾಷ್ಟ್ರಕ್ಕಾಗಿ ಯುವಪಡೆ ಸಂಘಟನೆ

Lingaraj Badiger
Updated On : 8 Jul 2013, 11:41 am

ಹಾನಗಲ್ಲ: ಯುವ ಸಮುದಾಯದಿಂದ ಮಾತ್ರ ದೇಶದ ಐಕ್ಯತೆ, ಭದ್ರತೆ, ಸಮಗ್ರತೆ ಕಾಪಾಡಲು ಸಾಧ್ಯವಿದ್ದು, ಸುಸಂಸ್ಕೃತ, ಜಾತ್ಯಾತೀತ ರಾಷ್ಟ್ರ ನಿರ್ಮಾಣಕ್ಕಾಗಿ ಯುವಪಡೆ ಸಂಘಟನೆಗೊಳಿಸುವುದು ನೆಹರು ಯುವ ಕೇಂದ್ರದ ಮೂಲ ಉದ್ದೇಶವಾಗಿದೆ ಎಂದು ನೆಹರು ಯುವಕೇಂದ್ರದ ಮಹಾ ನಿರ್ದೇಶಕ ಸಲೀಂ ಅಹ್ಮದ್ ಹೇಳಿದರು.
ಪಟ್ಟಣದ ಅಲ್‌ಅರಮಾನ್ ಸಭಾ ಭವನದಲ್ಲಿ ನವಭಾರತ ಯುವಸಂಘ, ಕರವೇ, ಗಜಾನನ ಯುವಕ ಮಂಡಳ, ಟಿಪ್ಪುಸುಲ್ತಾನ ಮಹಾವೇದಿಕೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಯುವ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ನಾಲ್ಕು ದಶಕಗಳಿಂದ ನೆಹರು ಯುವಕೇಂದ್ರ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಭಾಗದ ಯುವಕ, ಯುವತಿಯರ ಸಂಘಟನೆ, ಸ್ವಯಂ ಉದ್ಯೋಗ ಹಾಗೂ ನಾಯಕತ್ವ ರೂಪಿಸುವ ಹಿನ್ನೆಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.
ರಾಜ್ಯದಲ್ಲಿ 645 ನೆಹರು ಯುವಕೇಂದ್ರಗಳನ್ನು ಸ್ಥಾಪಿಸಲಾಯಿತು. ಕೇಂದ್ರ ಸರ್ಕಾರದಿಂದ ಈ ಕೇಂದ್ರಗಳಿಗಾಗಿ ಪ್ರತಿವರ್ಷ ರು. 200 ಕೋಟಿ ಅನುದಾನ ಬಿಡುಗಡೆಯಾಗುತ್ತಿದೆ. ಈ ಮೂಲಕ ಜಿಲ್ಲಾ ಸಮ್ಮೇಳನ, ಸಮಾವೇಶಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ವಸ್ತು ಪ್ರದರ್ಶನಗಳನ್ನು ನಡೆಸಲಾಗುತ್ತಿದೆ ಎಂದರು.
ನೆಹರು ಯುವಕೇಂದ್ರದಷ್ಟು ದೊಡ್ಡ ಪ್ರಮಾಣದ ಸಂಘಟನೆ ಪ್ರಪಂಚದ ಬೇರೆ ಯಾವ ದೇಶಗಳಲ್ಲೂ ಇಲ್ಲ. ಪ್ರತಿವರ್ಷ ಸ್ವಯಂ ಉದ್ಯೋಗಕ್ಕಾಗಿ 1.50 ಲಕ್ಷ ಯುವಕ, ಯುವತಿಯರಿಗೆ ತರಬೇತಿ ನೀಡಲಾಗುತ್ತಿದೆ. ಗ್ರಾಮೀಣ ಮಟ್ಟದಲ್ಲಿ ನಾಯಕತ್ವ ಬೆಳೆಸುವುದು. ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರದ ಕುರಿತು ತಿಳಿವಳಿಕೆ ನೀಡುವುದು. ಜನಜಾಗೃತಿ ಮೂಡಿಸುವುದು ಸಂಘಟನೆ ಮುಖ್ಯ ಉದ್ದೇಶವಾಗಿದೆ ಎಂದರು.
ಯುವಕರ ಜವಾಬ್ದಾರಿ ಅಗತ್ಯ: ಶಾಸಕ ಮನೋಹರ ತಹಸೀಲ್ದಾರ್ ಮಾತನಾಡಿ, ಉತ್ತರ ಭಾರತದಲ್ಲಿ ಈ ಹಿಂದೆ ನೆಹರು ಯುವಕೇಂದ್ರದ ಎಲ್ಲ ಯೋಜನೆಗಳನ್ನು ಪಡೆಯಲಾಗಿದೆ. ಸಲೀಂ ಅಹ್ಮದ್ ನೇತೃತ್ವ ವಹಿಸಿಕೊಂಡು ಸಂಘಟನೆಗೆ ಒತ್ತು ನೀಡಿದ್ದಾರೆ. ಯುವಕರ ಬದುಕಿನ ಜೀವನ ಶೈಲಿಯನ್ನು ಬದಲಿಸುವುದೆ ಈ ಕೇಂದ್ರದ ಮುಖ್ಯ ಉದ್ದೇಶವಾಗಿದ್ದು, ಪಕ್ಷಾತೀತವಾಗಿ ರಾಷ್ಟ್ರ ಕಟ್ಟುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಎಚ್.ಡಿ. ಜಮಾದಾರ, ಬಾಳೂರು ಅಡವಿಸ್ವಾಮಿ ಮಠದ ಶ್ರೀ ಕುಮಾರಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆರ್. ನಟರಾಜನ್, ಸತೀಶ ದೇಶಪಾಂಡೆ, ರಾಜಶೇಖರ್ ಸಾಲಿಮಠ, ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement