ಅಪೌಷ್ಟಿಕತೆ, ತ್ಯಾಜ್ಯದಿಂದ ಸಾಂಕ್ರಾಮಿಕ ರೋಗ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಜು. 8
ದೇಶದಲ್ಲಿ ಪ್ರತಿಶತ 40ರಷ್ಟು ಮಕ್ಕಳು ಅಪೌಷ್ಟಿಕತೆಯಿಂದಾಗಿ ಬಳಲುತ್ತಿದ್ದರ ಪರಿಣಾಮವಾಗಿ ಮಕ್ಕಳಲ್ಲಿ ರಕ್ತ ಕಡಿಮೆಯಾಗಿ ಭಯಾನಕ ರೋಗಗಳಾದ ಡೇಂಘೀ, ಚಿಕುನ್ಗುನ್ಯಾ ಹಾಗೂ ಮಲೇರಿಯಾದಂತಹ ಮಹಾಮಾರಿ ರೋಗಗಳಿಗೆ ಬಲಿಯಾಗುತ್ತಿದ್ದಾರೆ ಎಂದು ತಾಲೂಕು ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಬಿ. ಕಡಕೋಳ ತಿಳಿಸಿದರು.
ಪಟ್ಟಣದ ನೌಕರರ ಭವನದಲ್ಲಿ ಯಶಸ್ವಿನಿ ಮಹಿಳಾ ಸಂಘದ ವತಿಯಿಂದ ಜರುಗಿದ ಡೆಂಘೀ ಜ್ವರ ಜಾಗೃತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕರಿಸಿ: ಪಟ್ಟಣದಲ್ಲಿ ಪಟ್ಟಣ ಪಂಚಾಯತಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯತಿ ಹಾಗೂ ಆರೋಗ್ಯ ಇಲಾಖೆಗಳೊಂದಿಗೆ ಸಾರ್ವಜನಿಕರು ಸಹಕಾರ ನೀಡಿದರೆ, ಸುಲಭವಾಗಿ ಡೇಂಘೀ ಜ್ವರ ಹರಡುವುದನ್ನು ತಡೆಗಟ್ಟಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸ್ವಚ್ಛತೆಯಿಂದ ರೋಗ ನಿವಾರಣೆ: ಸಮಾಜದಲ್ಲಿ ಜನಸಂಖ್ಯೆ ವಿಪರೀತವಾಗಿ ಬೆಳೆಯುತ್ತಿದ್ದು, ಅದಕ್ಕೆ ತಕ್ಕಂತೆ ನೀರಿನ ಬಳಕೆ ಹೆಚ್ಚಾಗುತ್ತಿದೆ. ಅಲ್ಲದೆ ಗೃಹ ಬಳಕೆಯ ತಾಜ್ಯ ವಸ್ತುಗಳನ್ನು ಮನೆಯ ಅಕ್ಕಪಕ್ಕದಲ್ಲಿ ಬೇಕಾ ಬಿಟ್ಟಿ ಚೆಲ್ಲುವುದರಿಂದ ಮತ್ತು ಗಟಾರುಗಳಲ್ಲಿ ತುಂಬುವುದರಿಂದಾಗಿ ಮಳೆಯ ನೀರು ಸುಲಭವಾಗಿ ಹರಿದು ಹೋಗದೆ ನಿಂತು ಬಿಡುತ್ತದೆ. ಅಲ್ಲಿ ವಿಷಕಾರಿಯುಕ್ತ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಇದರಿಂದಾಗಿ ಹಲವಾರು ಭಯಾನಕ ರೋಗಗಳು ಉದ್ಬವಾಗುತ್ತಿವೆ. ಹಲವಾರು ಗ್ರಾಮಗಳಲ್ಲಿ ನೀರಿನ ಅಭಾವವಿರುವುದರಿಂದಾಗಿ ನೀರನ್ನು ಹಲವಾರು ದಿನಗಳ ಕಾಲ ಸಂಗ್ರಹಿಸಿಡಲಾಗುತ್ತದೆ. ಈ ರೀತಿ ಸಂಗ್ರಹಿಸಿದ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ರೋಗಗಳನ್ನು ಹರಡುತ್ತವೆ. ಆದ್ದರಿಂದ ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡುವ ಮೂಲಕ ಇಡೀ ಕುಟುಂಬ ಮತ್ತು ಮುಂದಿನ ಪೀಳಿಗೆ ಆರೋಗ್ಯವಂಥರಾಗಲು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು. ಜಿಲ್ಲಾ ಕೇಂದ್ರದ ಆಸ್ಪತ್ರೆಯಲ್ಲಿ ಡೆಂಘೀ ಜ್ವರದ ರಕ್ತ ಪರೀಕ್ಷಾ ಘಟಕವಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಯಶಸ್ವಿನಿ ಮಹಿಳಾ ಸಂಘದ ಅಧ್ಯಕ್ಷೆ ಎಸ್.ವಿ. ಕಾರಂಜಿ, ಉಪಾಧ್ಯಕ್ಷೆ ಶೋಭಾ ಅಕ್ಕಿ ಪೂರ್ಣಿಮಾ ಕಾರಗಿ, ಶಶಿಕಲಾ ಅತ್ತಿಕಟ್ಟಿ, ರೂಪಾ ದಂಡಗಿಹಳ್ಳಿ, ಲಲಿತಾ ಕಲ್ಯಾಣಿ, ಮಂಜುಳಾ ಬಾಳಿಕಾಯಿ, ಸುಜಾತಾ ಗೋಣಗೇರಿ ಮೊದಲಾದವರು ಪಾಲ್ಗೊಂಡಿದ್ದರು.