ಕಾರ್ಖಾನೆ ವಿಷಾನಿಲದಿಂದ ಆರೋಗ್ಯಕ್ಕೆ ಧಕ್ಕೆ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಜು. 8
ಕಾರ್ಖಾನೆಗಳು ಹೊರಸೂರುವ ವಿಷಾನಿಲ, ವ್ಯಾಪಾರಿಗಳ ನಿರ್ಲಕ್ಷ್ಯದಿಂದ ಮನುಷ್ಯನ ದೇಹದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ತಾಲೂಕು ಪಶುಪಾಲನಾ ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ ಪಿ.ಎನ್. ಹುಬ್ಬಳ್ಳಿ ಹೇಳಿದರು.
ತಾಲೂಕು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ನಗರಸಭೆ ರಾಣಿಬೆನ್ನೂರು ಆಶ್ರಯದಲ್ಲಿ ನಗರದ ವಿವಿಧ ಭಾಗಗಳಲ್ಲಿ ಕೋಳಿ, ಕುರಿ ಮಾಂಸ ಮಾರಾಟ ಮಾಡುವವರಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಮಾಡಲು ಜಾಗೃತಿ ಮೂಡಿಸುವುದಕ್ಕಾಗಿ ಜಾಗೃತಿ ಜಾಥಾ ನಡೆಸಲಾಯಿತು.
ಸಾರ್ವಜನಿಕರ ಪರದಾಟ: ಆಧುನಿಕತೆಯ ತೀವ್ರ ಬೆಳವಣಿಗೆಯಿಂದಾಗಿ ಪರಿಸರದ ಪಂಚಭೂತಗಳೆಲ್ಲಾ ವಿವಿಧ ಬೃಹತ್ ಕಾರ್ಖಾನೆಗಳಿಂದ ಹೊರಸೂಸುವ ವಿಷಾನಿಲದಿಂದ ವಾಯು ಮತ್ತು ನದಿಯಲ್ಲಿನ ನೀರು ಮಲಿನವಾಗುತ್ತಿರುವ ಕಾರಣ ವಾಯು ವಿಹಾರಕ್ಕೆ ತೆರಳಿದ ಅನೇಕರು ಶುದ್ಧ ಗಾಳಿ ಸಿಗದೆ ತತ್ತರಿಸುವಂಥ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಹುಬ್ಬಳ್ಳಿ ಹೇಳಿದರು.
ವ್ಯಾಪಾರಿಗಳ ನಿರ್ಲಕ್ಷ್ಯ: ಜನಸಂಖ್ಯೆ ಹೆಚ್ಚಾದಂತೆ ಮಾಂಸ ತಿನ್ನುವವರು ಹೆಚ್ಚಾಗಿರುವ ಕಾರಣ ಬೆಳೆಯುತ್ತಿರುವ ನಗರಗಳಲ್ಲಿ ನಿತ್ಯ ಸಾವಿರಾರು ಕೋಳಿ, ಕುರಿ, ಮೆಕೆ ಮತ್ತು ದನಗಳ ವಧೆಯಾಗುತ್ತಿದ್ದು, ವಧಾಗಾರರು (ಮಾಂಸ ಮಾರಾಟಗಾರರು) ಮಾರಾಟಕ್ಕಾಗಿ ತಾವು ಕತ್ತರಿಸಿದ ಕೋಳಿ, ಕುರಿ ಸೇರಿದಂತೆ ಇತರೆ ಪ್ರಾಣಿಗಳಿಂದ ತೆಗೆಯಲಾದ ನಿರಪಯುಕ್ತ ವಸ್ತುಗಳನ್ನು ನಗರದಲ್ಲಿ ಎಲ್ಲೆಂದರಲ್ಲಿ ಬಿಸಾಡುವುದರಿಂದ ಹಾಗೂ ಗಟಾರಗಳಲ್ಲಿ ಹಾಕುವದರೊಂದಿಗೆ ವಿವಿಧ ರೋಗಾಣುಗಳ ಉತ್ಪತ್ತಿ ಹಾಗೂ ಪರಿಸರ ಹಾನಿಗೆ ಕಾರಣವಾಗುತ್ತದೆ.
ನಿರ್ದಾಕ್ಷಿಣ್ಯ ಕ್ರಮ: ಮಾಂಸ ಉತ್ಪಾದನೆಗಾಗಿ ಕೋಳಿ ಸಾಕುವವರಾಗಲಿ- ಮಾರಾಟಗಾರರಾಗಲಿ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ತಮ್ಮ ವ್ಯವಹಾರವನ್ನು ನಡೆಸದಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿರುವುದಾಗಿ ಡಾ ಬಿ.ಎನ್. ಎಚ್ಚರಿಕೆ ನೀಡಿದರು.
ಕಾನೂನು ಕ್ರಮ: ನಗರಸಭೆ ಪರಿಸರ ಅಭಿಯಂತರಾದ ಮಂಜುಳಾದೇವಿ ಮಾತನಾಡಿ, ನಗರಾದ್ಯಂತ ಮಾಂಸ ಮಾರಾಟಗಾರರೆಂದು ಗುರುತಿಸಿರುವ ಹಾಗೂ ಅಧಿಕೃತವಾಗಿ ಲೈಸೆನ್ಸ್ ಪಡೆದಿರುವವರ ಮತ್ತು ಅನಧಿಕೃತವಾಗಿ ಮಾರಾಟ ಮಾಡುವವರ ಸಮಗ್ರ ಮಾಹಿತಿಯನ್ನು ಪೋಟೋ ಸಮೇತ ಸಂಗ್ರಹಿಸಿದ್ದು, ಕಾನೂನು ಉಲ್ಲಂಘಿಸಿ ಮಾಂಸ ಮಾರಾಟ ಮಾಡಿದಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಶಿಕ್ಷೆ: ಕೋಳಿ ಮಾಂಸ ಮಾರಾಟಗಾರರಲ್ಲಿ ಅನೇಕರು ತಮ್ಮ ಅಂಗಡಿಯ ಕಸವನ್ನು ನಗರಸಭೆಯಿಂದ ನೇಮಿಸಿರುವ ಕಸ ಸಂಗ್ರಹಗಾರರ ಗಾಡಿಗಳಿಗೆ ಹಾಕುವ ಬದಲು ಸಂಜೆ ಸಮಯದಲ್ಲಿ ನಗರದ ಸುತ್ತಲಿನ ರಸ್ತೆಗಳ ಬದಿಯಲ್ಲಿ ಚೆಲ್ಲುತ್ತಿದ್ದಾರೆಂದು ಸಾರ್ವಜನಿಕರು ತಮಗೆ ದೂರವಾಣಿ ಮೂಲಕ ತಿಳಿಸಿದ್ದು, ಸದ್ಯದಲ್ಲಿಯೇ ಅಂಥವರ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಜಾಥಾದಲ್ಲಿ ಪಾಲ್ಗೊಂಡಿದ್ದ ಪಶುಪಾಲನಾ ಇಲಾಖೆ ವೈದ್ಯರಾದ ಡಾ ಎನ್.ಬಿ. ಅಂಗಡಿ, ರಾಘವೇಂದ್ರ ಕಿತ್ತೂರು, ಡಾ ರಂಗನಾಥ, ಡಾ ರವಿ ದಾಸರ ಮತ್ತು ನಗರಸಭೆ ಸ್ವಚ್ಛತಾ ವಿಭಾಗದ ರವಿಕೀರ್ತಿ, ಉಮೇಶ ಗುಡ್ಡದ, ಜಾಗೃತಿ ಜಾಥಾ ಉದ್ದೇಶಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಡಾ ನಾಗರಾಜ ಕೋನಬೇವು, ಡಾ ಬಿ.ಎಚ್. ಜಲ್ಲೆರ, ಜಯಪ್ರಕಾಶ ವೇಂಕರೆಡ್ಡಿ ಇದ್ದರು. ನಗರದ ಮೇಡ್ಲೆರಿ ರಸ್ತೆ, ಮಟನ್ ಮಾರ್ಕೆಟ್, ತರಕಾರಿ ಮಾರ್ಕೇಟ್, ಮೀನು ಮಾರ್ಕೆಟ್ಗಳಲ್ಲಿರುವ ಮಾಂಸದಗಂಡಿಗಳಲ್ಲಿ ಕಾರ್ಯಕ್ರಮ ನಡೆಸಲಾಯಿತು.
--