ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪ್ರಜಾಪ್ರಭುತ್ವ ಮೇಲೆ ನಂಬಿಕೆ ಕ್ಷೀಣ

Lingaraj Badiger
Updated On : 9 Jul 2013, 11:54 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜು. 8
ಸುಳ್ಳು ಭರವಸೆಗಳ ಮೇಲೆ ರಾಜಕಾರಣ ಮಾಡುವ ಜನರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಜನರಿಗೆ ನಂಬಿಕೆ ಕಡಿಮೆಯಾಗುತ್ತಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ವಿಷಾದಿಸಿದರು.
ಪಟ್ಟಣದ ಮಾರುತಿ ದೇವಸ್ಥಾನ ಮಂಡಳಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ದೇಶದ ಆಡಳಿತ ಹಾಗೂ ಕಾನೂನು ವ್ಯವಸ್ಥೆ ಮೇಲೆ ಜನರು ನಂಬಿಕೆಯನ್ನಿಟ್ಟಿದ್ದಾರೆ. ಹೀಗಾಗಿ ರಾಜಕಾರಣ ಇಂದಿಗೂ ಮುಂದುವರಿದಿದೆ. ಪೊಳ್ಳು ಮಾತುಗಳಿಂದ ಜನರನ್ನು ತಪ್ಪು ದಾರಿಗೆಳೆಯುವ ಕೆಲಸವನ್ನು ಇನ್ನಾದರೂ ರಾಜಕಾರಣಿಗಳು ಬಿಡಬೇಕು ಎಂದು ಸಲಹೆ ನೀಡಿದರು.
ಅಧಿಕಾರ, ಹಣ, ಹುದ್ದೆಗಳು ರಾಜಕಾರಣದಲ್ಲಿ ಶಾಶ್ವತವಲ್ಲ. ಎಲ್ಲದಕ್ಕೂ ಜನತಾ ಜನಾರ್ದನನ ತೀರ್ಮಾನವೇ ಅಂತಿಮ. ಕಳೆದ ಬಾರಿ ನನ್ನನ್ನು ತಿರಸ್ಕರಿಸಿದ್ದ ಕ್ಷೇತ್ರದ ಮತದಾರರು ಈ ಬಾರಿ ಚುನಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಜನತೆಗೆ ಸಮರ್ಪಕವಾದ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಮೆಣಸಿನಕಾಯಿಗೆ ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಗಳಿಸಿದ ಬ್ಯಾಡಗಿ ಪಟ್ಟಣಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಪ್ರತಿನಿತ್ಯ ಸಾವಿರಾರು ಜನರು ಬರುತ್ತಿದ್ದು, ಅವರಿಗೆ ಅಗತ್ಯವಾದ ಬಸ್ ಸೌಲಭ್ಯಗಳನ್ನು ಕಲ್ಪಿಸುವ ಜತೆಗೆ ಅಗತ್ಯವಿರುವ ವೇಗದ ರೈಲುಗಳ ನಿಲುಗಡೆಗೆ ಪ್ರಯತ್ನಿಸುವುದಾಗಿ ಹೇಳಿದರು.
ಪಟ್ಟಣದ ಮಾರುತಿ ದೇವಸ್ಥಾನಕ್ಕೆ ಇತಿಹಾಸವಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರ ಅನುದಾನದಲ್ಲಿ ರು. 5 ಲಕ್ಷ ನೀಡುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು. ಮಾರುತಿ ದೇವಸ್ಥಾನ ಸಮಿತಿ ಅಧ್ಯಕ್ಷ ಪಾಂಡಪ್ಪ ವೇರ್ಣೇಕರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ, ವಾಣಿಜ್ಯರತ್ನ ಪ್ರಶಸ್ತಿ ಪುರಸ್ಕೃತ ಬಾಬಣ್ಣ ಮೇಲಗಿರಿ, ಪುರಸಭೆ ಮಾಜಿ ಅಧ್ಯಕ್ಷ ಕೃಷ್ಣಾಜಿ ಶಿಂದೆ, ವರ್ತಕರಾದ ಎಂ.ಬಿ. ಶಿವಾನಂದಪ್ಪ, ಸುರೇಶ್ ಮೇಲಗಿರಿ, ಗಜಾನನ ರಾಯ್ಕರ್, ನಾಗರಾಜ ಬಾರ್ಕಿ ಇದ್ದರು. ಎಸ್.ಟಿ. ಜಾಧವ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement