ತುಂಬಿ ಹರಿಯುತ್ತಿರುವ ನದಿ: ನೆರೆ ಭೀತಿ
ಕನ್ನಡಪ್ರಭ ವಾರ್ತೆ, ಹಾವೇರಿ, ಜು.9
ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿರುವುದು ಒಂದೆಡೆ ರೈತರ ಮೊಗದಲ್ಲಿ ಹರ್ಷ ಕಂಡು ಬರುತ್ತಿದ್ದರೆ, ಮತ್ತೊಂದಡೆ ಕೆಲ ಪ್ರದೇಶಗಳು ನದಿ ನೀರು ಯಾವುದೇ ಸಂದರ್ಭದಲ್ಲಿ ಜಲಾವೃತಗೊಳ್ಳುವ ಸ್ಥಿತಿ ಕಂಡು ಬರುತ್ತಿದ್ದು, ಶ್ರೀಸಾಮಾನ್ಯರ ಆಂತಕಕ್ಕೆ ಕಾರಣವಾಗಿದೆ.
ಸತತ ಸುರಿಯುತ್ತಿರುವ ಮಳೆಯಿಂದಾಗಿ ರಾಣಿಬೆನ್ನೂರು ತಾಲೂಕಿನಲ್ಲಿ ತುಂಗಭದ್ರೆ ಹಾಗೂ ಕುಮದ್ವತಿ ನದಿಗಳು ತುಂಬಿ ಹರಿಯುತ್ತಿದ್ದು, ತಾಲೂಕಿನ ನದಿ ತೀರದ ಬಹುತೇಕ ಗ್ರಾಮಗಳು ಪ್ರವಾಹದ ಭೀತಿ ಎದುರಿಸುತ್ತಿವೆ. ತಾಲೂಕು ಆಡಳಿತ ಪ್ರವಾಹ ಎದುರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ನದಿ ಪಾತ್ರದ ಜನತೆಯಲ್ಲಿ ಸ್ವಲ್ಪ ಮಟ್ಟಿಗೆ ವಿಶ್ವಾಸ ಹೆಚ್ಚುವಂತೆ ಮಾಡಿದೆ. ಆದರೆ, ಪ್ರಕೃತಿಯ ಮುನಿಸು ಮುಂದೆ ಯಾರು ಎಷ್ಟರ ಮಟ್ಟಿಗೆ ರಕ್ಷಿಸಿಕೊಳ್ಳಲು ಸಾಧ್ಯ ಎಂಬ ಆತಂಕದ ಮಾತುಗಳನ್ನು ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ.
ಹೊಲಗಳು ಜಲಾವೃತ: ಕುಮದ್ವತಿ, ತುಂಗಭದ್ರಾ ನದಿ ತೀರದ ಗ್ರಾಮಗಳಾದ ಚಂದಾಪುರ, ಹರನಗಿರಿ, ಚೌಡಯ್ಯದಾನಪುರ, ಚಿಕ್ಕಕುರುವತ್ತಿ, ಮುದೇನೂರು, ಬೇಲೂರು, ಮುಷ್ಟೂರ, ಮಾಕನೂರ, ನಲವಾಗಲ ಮತ್ತಿತರ ಗ್ರಾಮಗಳಲ್ಲಿನ ರೈತರ ಹೊಲಗಳಿಗೆ ಈಗಾಗಲೇ ಭಾರಿ ಪ್ರಮಾಣದಲ್ಲಿ ನೀರು ಆವರಿಸಿಕೊಂಡಿರುವುದು ಕಂಡು ಬರುತ್ತಿದೆ. ಇದು ರೈತರ ನಿರೀಕ್ಷಿತ ಬೆಳೆಯ ಮೇಲೆ ವ್ಯತ್ತಿರಿಕ್ತ ಪರಿಣಾಮವನ್ನುಂಟು ಮಾಡಲಿದೆ ಎಂದು ಬೇರೆಯಾಗಿ ಹೇಳಬೇಕಿಲ್ಲ.
ಕೆಲವೇ ಅಡಿ: ಶಿವಮೊಗ್ಗ ಬಳಿಯಿರುವ ಗಾಜನೂರು ಡ್ಯಾಂ ತುಂಬಲು ಇನ್ನೂ ನಾಲ್ಕಾರು ಅಡಿಗಳು ನೀರು ಬರಬೇಕಾಗಿರುವುದು ಬಾಕಿ ಇದ್ದು, ಹೆಚ್ಚುವರಿ ನೀರನ್ನು ಜು. 10ರಿಂದ ಡ್ಯಾಂನಿಂದ ಬಿಡಗಡೆ ಮಾಡಲು ಯೋಚಿಸಲಾಗುತ್ತಿದೆ. ಜಿಲ್ಲೆಯಲ್ಲಿ ಹರಿಯುತ್ತಿರುವ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ತಾಲೂಕಿನ ನದಿ ತೀರದ ಗ್ರಾಮಗಳಿಗೆ ನೀರು ನುಗ್ಗುವ ಲಕ್ಷಣಗಳು ಹೆಚ್ಚಾಗಿ ಕಂಡು ಬರತೊಡಗಿವೆ.
ನೂರಾರು ಎಕರೆ...: ರಾಣಿಬೆನ್ನೂರು ತಾಲೂಕಿನ ವ್ಯಾಪ್ತಿಯಲ್ಲಿ ತುಂಗಭದ್ರಾ ಮತ್ತು ಕುಮದ್ವತಿ ನದಿಗಳು ಮೈದುಂಬಿ ಹರಿಯುತ್ತಿದ್ದು, ಈ ಭಾಗದ ರೈತರು ಬೆಳೆದ ಬೆಳೆಗಳಾದ, ಹತ್ತಿ, ಗೋವಿನ ಜೋಳ, ಬತ್ತ, ಸೂರ್ಯಕಾಂತಿ, ಮಿಡಿ ಸೌತೆ ಸೇರಿದಂತೆ ಇತರ ವಾಣಿಜ್ಯ ಬೆಳೆಗಳನ್ನು ನೂರಾರು ಎಕರೆ ಪ್ರದೇಶ ರೈತರು ಬೆಳೆದಿದ್ದಾರೆ. ಈ ಭಾಗದ ಬಹಳಷ್ಟು ಹೊಲಗಳಲ್ಲಿ ನದಿ ನೀರು ತುಂಬಿಕೊಂಡಿದ್ದರಿಂದ ರೈತನ ಸ್ಥಿತಿ ಮತ್ತೆ ಅಯೋವುಯವಾಗುವಂತೆ ಮಾಡಿದೆ. ಕೈಗೆ ಬಂದ ತುತ್ತು ಬಾಯಿಗೆ ಇಲ್ಲದ ಹಾಗೆ ರೈತನ ಗೋಳಾಗಿದೆ ಎಂದು ಬೆಳೆ ಜಲಾವೃತಗೊಂಡ ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಅರೆ ಕಾಸಿದ ಮಜ್ಜಿಗೆ: ತಾಲೂಕಿನ ರೈತರು ಲಕ್ಷಾಂತರ ರು. ಬೆಳೆ ಹಾನಿ ಸಂಭವಿಸಬಹುದೆಂದು ಚಿಂತಾಕ್ರಾಂತರಾಗಿದ್ದಾರೆ. ಬಿತ್ತನೆ ಮಾಡಲು ಮಾಡಿರುವ ಸಾಲವನ್ನು ಭರಿಸುವುದು ಹೇಗೆ ಎಂಬ ಚಿಂತೆಯಲ್ಲಿ ರೈತನಿದ್ದಾನೆ. ಅಲ್ಲದೇ, ಲಕ್ಷಾಂತರ ರು. ಗಳ ಹಾನಿ ಸಂಭವಿಸಿದರೂ, ಸರ್ಕಾರದವರು ನೀಡುವ ಪರಿಹಾರ ರು. 500 ಅಥವಾ ರು. 1 ಸಾವಿರ ಸಾಲ ನೀಡಿದವರಿಂದ ತಪ್ಪಿಸಿಕೊಳ್ಳಲು ಆತ್ಮಹತ್ಯೆ ಒಂದೇ ಮಾರ್ಗವಾಗುವುದೋ ಏನೋ ಎಂಬ ಚಿಂತೆಯಲ್ಲಿ ರೈತರ ಸಿಲುಕಿಕೊಂಡಿದ್ದು ನಿಜಕ್ಕೂ ಆತಂಕದ ಸಂಗತಿಯೇ ಸರಿ.
- ಬಿ.ಕೆ. ಮಹೇಂದ್ರ