ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಡೆಂಘೀ: ಆರೋಗ್ಯಾಧಿಕಾರಿ ತರಾಟೆ

Lingaraj Badiger
Updated On : 11 Jul 2013, 11:35 am

ಕನ್ನಡಪ್ರಭ ವಾರ್ತೆ, ಹಾವೇರಿ, ಜು. 10
ಡೆಂಘೀ ಸೇರಿದಂತೆ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಜಿಲ್ಲೆಯ ಜನತೆ ಬದುಕುತ್ತಿದ್ದಾರೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ವಾರಗಟ್ಟಲೇ ಆರೋಗ್ಯಾಧಿಕಾರಿಯೇ ರಜೆ ಮೇಲೆ ತೆರಳಿದರೆ ಹೇಗೆ...
ಹೀಗೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ೤ ಎಚ್.ಎಸ್. ರಾಘವೇಂದ್ರ ಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡವರು ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ.
ಬುಧವಾರ ಬೆಳಗ್ಗೆ ನಗರಕ್ಕೆ ಆಗಮಿಸಿ ಅನ್ನಭಾಗ್ಯ ಯೋಜನೆ ಚಾಲನೆ ನೀಡಿದ ನಂತರ, ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಸಚಿವ ಹುಕ್ಕೇರಿ, ವಿವಿಧ ವಾರ್ಡ್‌ಗಳಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದರು.
ಸಚಿವರು ಕೆಂಡಾಮಂಡಲ: ಡೆಂಘೀ ಜ್ವರ, ಸಾಂಕ್ರಾಮಿಕ ರೋಗಗಳ ತಡೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ತಾವು ಪ್ರಗತಿ ಪರಿಶೀಲನಾ ಸಭೆಯಲ್ಲಿ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗಿಲ್ಲ ಎಂದು ಸಚಿವ ಹುಕ್ಕೇರಿ ಕೆಂಡಾಮಂಡಲರಾದ ಪ್ರಸಂಗವೂ ನಡೆಯಿತು.
ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು, ಇರುವ ಸಿಬ್ಬಂದಿಯಲ್ಲೇ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದು, ಸಮಯ ಪರಿಪಾಲನೆ, ವಾಂತಿ, ಭೇದಿ, ಜ್ವರ ಹಾಗೂ ನೆಗಡಿಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿರುವ ಪುರುಷ ಹಾಗೂ ಮಹಿಳಾ ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ್‌ಗಳನ್ನು ರಚಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ನಿರ್ಲಕ್ಷ್ಯ ಸಲ್ಲ: ವಿವಿಧ ರೀತಿ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಚಿಕಿತ್ಸೆಗಾಗಿ ಜಿಲ್ಲೆಯ ಯಾವುದೇ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದಾಗ ವೈದ್ಯರ ನಿರ್ಲಕ್ಷ್ಯ ಧೋರಣೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸಿಬ್ಬಂದಿ ಕೊರತೆ ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿದೆ. ಇದನ್ನೇ ನೆಪ ಮಾಡಿಕೊಂಡು ಜವಾಬ್ದಾರಿಯಿಂದ ನುಣುಚಿಕೊಳ್ಳುವ ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದರು.
ಡೆಂಘೀಗೂ ಪ್ರತ್ಯೇಕ ವಾರ್ಡ್: ಮಾರಣಾಂತಿಕ ಕಾಯಿಲೆಯಾಗಿ ಏರ್ಪಟ್ಟಿರುವ ಡೆಂಘೀ ಜ್ವರದಿಂದ ಬಳಲುತ್ತಿರುವ ಮಹಿಳೆ ಹಾಗೂ ಪುರುಷರನ್ನು ತಕ್ಷಣಕ್ಕೆ ಗುಣಮಟ್ಟದ ಚಿಕಿತ್ಸೆ ನೀಡುವಂತಾಗಲೂ ಜಿಲ್ಲಾಸ್ಪತ್ರೆಯಲ್ಲೇ ಪ್ರತ್ಯೇಕ ವಾರ್ಡ್‌ಗಳನ್ನು ರಚಿಸುವಂತೆ ಆದೇಶಿಸಿದ ಅವರು, ಇಂತಹ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳನ್ನು ಒಬ್ಬೊಬ್ಬರನ್ನು ಒಂದೊಂದು ಕಡೆ ದಾಖಲಿಸುವುದರಿಂದ ಚಿಕಿತ್ಸೆ ನೀಡುವ ವೈದ್ಯರಿಗೂ ಅನಾಯಾಸ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸಲು ತಕ್ಷಣ ಕ್ರಮಕೈಗೊಳ್ಳುವಂತೆ ಸಲಹೆ ನೀಡಿದರು.
ಅವಶ್ಯಕತೆ ಇದ್ದಲ್ಲಿ: ಜಿಲ್ಲೆಯಲ್ಲಿ ಒಟ್ಟು 154 ಎಂಬಿಬಿಎಸ್ ಹಾಗೂ ಬಿಎಂಇಎಸ್ ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲೆಯ ಯಾವುದೊಂದು ಆಸ್ಪತ್ರೆಯಲ್ಲಿ ವೈದ್ಯರ ಅವಶ್ಯಕತೆ ಕಂಡು ಬಂದಾಗ, ತಾಲೂಕು ಮಟ್ಟದ ಆಸ್ಪತ್ರೆ ಮತ್ತಿತರ ಕಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಅವಶ್ಯಕತೆ ಇದ್ದ ಕಡೆ ಕರೆಯಿಸಿಕೊಂಡು ಜನರಿಗೆ ಆರೋಗ್ಯ ಸೇವೆ ಕಲ್ಪಿಸಿಕೊಡಬೇಕೆಂದೂ ಸಚಿವ ಹುಕ್ಕೇರಿ ಸೂಚಿಸಿದರು.
ರಜೆ ನೀಡಬೇಡಿ: ಡೆಂಘೀ ಹಾಗೂ ಸಾಂಕ್ರಾಮಿಕ ರೋಗಗಳು ನಿಯಂತ್ರಣಕ್ಕೆ ಬರುವವರೆಗೂ ಜಿಲ್ಲೆಯ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯನಿರ್ವಹಿಸುತ್ತಿರುವ ವೈದ್ಯರಿಗೆ ಯಾವುದೇ ಕಾರಣಕ್ಕೂ ರಜೆ ನೀಡಬೇಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ ಸಚಿವರು, ನುರಿತ ತಜ್ಞ ವೈದ್ಯರ ಅವಶ್ಯಕತೆ ಇದ್ದಲ್ಲಿ ಅಂಥವರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಆರೋಗ್ಯ ಇಲಾಖೆಗೆ ಪರವಾಣಗಿ ನೀಡಲಾಗಿದ್ದು, ಇದನ್ನು ಉಪಯೋಗಿಸಿಕೊಂಡು ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ವೈದ್ಯರು ಮುಂದಾಗಬೇಕೆಂದರು.
ಸ್ವಚ್ಛತೆ ಕಾಪಾಡಿ: ಆಸ್ಪತ್ರೆಯಲ್ಲಿನ ಶೌಚಾಲಯವನ್ನೂ ಪರಿಶೀಲಿಸಿದ ಸಚಿವರು, ಅಲ್ಲಿನ ಅವ್ಯವಸ್ಥೆ ಕಂಡು ತೀವ್ರ ಅಸಮಾಧಾನಗೊಂಡರಲ್ಲದೆ ಆಸ್ಪತ್ರೆಯ ಪ್ರತಿಯೊಂದು ವಾರ್ಡ್ ಹಾಗೂ ಆಯಾ ವಾರ್ಡ್‌ಗಳಲ್ಲಿನ ಶೌಚಾಲಯಗಳನ್ನು ಸ್ವಚ್ಛವಾಗಿಡುವಂತೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ೤ ಮಾಶಾಳರಿಗೆ ಸೂಚಿಸಿದರು.
ಆಸ್ಪತ್ರೆಯಲ್ಲೇ ಶುಚಿತ್ವ ಕಾಪಾಡಿಕೊಳ್ಳುವ ಮೂಲಕ ಡೆಂಘೀ ಮತ್ತಿತರ ಸಾಂಕ್ರಾಮಿಕ ಕಾಯಿಲೆಗಳಿಗೆ ತುತ್ತಾಗಿ ಚಿಕಿತ್ಸೆಗೆ ಬರುವ ರೋಗಿಗಳನ್ನು ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಆರೋಗ್ಯ ಭರಿತ ಜೀವನ ನಡೆಸುವಂತೆ ಪ್ರೇರೇಪಿಸಬೇಕೆಂದರು.
ಶಾಸಕರಾದ ಬಸವರಾಜ ಶಿವಣ್ಣವರ, ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ಪಾಂಡುರಂಗ ನಾಯಕ, ಜಿಪಂ ಸಿಇಓ ಉಮೇಶ ಕುಸುಗಲ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಬಸವರಾಜ ಸಜ್ಜನ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement