ರಟ್ಟಿಹಳ್ಳಿ: ಸರ್ಕಾರಿ ಪ್ರೌಢಶಾಲೆ ಆರಂಭಿಸಿ
ಹಿರೇಕೆರೂರು: ಹಿರೇಕೆರೂರು ತಾಲೂಕಿನ ಹೋಬಳಿ ಕೇಂದ್ರವಾಗಿರುವ ರಟ್ಟಿಹಳ್ಳಿಯಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಿಸುವಂತೆ ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆ ಕಾರ್ಯಕರ್ತರು ಉಪ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ಮಹ್ಮದ್ ಯೂಸೂಫ್ ಸೈಕಲ್‌ಗಾರ ಮಾತನಾಡಿ, ರಟ್ಟಿಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯವಿದೆ. ಆದರೆ, ಸರ್ಕಾರ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡದಿರುವುದು ಅಚ್ಚರಿಯ ಸಂಗತಿಯಾಗಿದೆ. ಗ್ರಾಮದ ಸುತ್ತಲಿರುವ ಅನೇಕ ಗ್ರಾಮಗಳಲ್ಲಿ ಸರ್ಕಾರಿ ಪ್ರೌಢಶಾಲೆಗಳು ಈಗಾಗಲೇ ಆರಂಭಗೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗಿದೆ. ಆದರೆ, ಸರ್ಕಾರಿ ಹೋಬಳಿ ಕೇಂದ್ರವಾಗಿರುವ ರಟ್ಟಿಹಳ್ಳಿಯ ವಿದ್ಯಾರ್ಥಿಗಳ ಶ್ರಯೋಭಿವೃದ್ಧಿಗಾಗಿ ಹಾಗೂ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯಲು ತಕ್ಷಣವೇ ಗಮನಹರಿಸಿ ಸರ್ಕಾರಿ ಪ್ರೌಢಶಾಲೆ ಅರಂಭಿಸಬೇಕೆಂದು ಆಗ್ರಹಿಸಿದರು.
ಈ ಕುರಿತ ಮನವಿಯನ್ನು ಉಪ ತಹಸೀಲ್ದಾರ್ ಕಚೇರಿಯ ಕಂದಾಯ ನಿರೀಕ್ಷಕ ಎಸ್.ಬಿ. ಬಿದರಿಯವರಿಗೆ ಮನವಿ ಸಲ್ಲಿಸಿದರು. ಕಂದಾಯ ನಿರೀಕ್ಷಕರು ಈ ಕುರಿತ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಜಕೀರ ಹುಸೇನ ಮಕಾನದಾರ, ಕಪಿಲದೇವ ಗಾಳೆಮ್ಮನವರ, ಸೈಯದ್ ಗಾಣಿಗೇರ, ಶೌಕತ ಕಲಂಕಲ್, ಲಕ್ಷ್ಮಣ ಚಲವಾದಿ, ತೌಸೀಫ್ ಮುಲ್ಲಾ, ಜಬೀವುಲ್ಲಾ ಕಲಂಕಲ್, ಫಾರೂಕ್ ಜಮಖಾನಿ, ಇನಾಯತಲಿ ಬಳ್ಳಾರಿ, ಜಮೀರ ಸೈಕಲ್‌ಗಾರ, ಮಹ್ಮದ್ ಹುಸೇನ ಖಾಜಿ, ಜಾಫರ್ ರಿಕಾರ್ಟಿ ಇನ್ನಿತರರಿದ್ದರು.