15ರಿಂದ ಕಂಪ್ಯೂಟರ್ ತರಬೇತಿ
ಹಾವೇರಿ: ಜಿಲ್ಲೆಯ 18ರಿಂದ 45 ವರ್ಷದೊಳಗಿನ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಹಾವೇರಿಯ ವಿಜಯಾ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಜುಲೈ 15ರಿಂದ 45 ದಿನಗಳ ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ ತರಬೇತಿ ಹಮ್ಮಿಕೊಳ್ಳಲಾಗಿದೆ. ಜುಲೈ 15ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಬೇಕು. ತರಬೇತಿಯು ಊಟ ಹಾಗೂ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ- 08375-249160 ಹಾಗೂ ಮೊ. 8762721574ನ್ನು ಸಂಪರ್ಕಿಸಬಹುದೆಂದು ವಿಜಯಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕರು ತಿಳಿಸಿದ್ದಾರೆ.
14ರಂದು ವಿದ್ಯುತ್ ವ್ಯತ್ಯಯ
ಹಾವೇರಿ: ಹಾವೇರಿಯ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ 11 ಕೆವಿ ಎಪಿಎಂಸಿ ಫೀಡರ್, ಕರ್ಜಗಿ ಎಕ್ಸ್‌ಪ್ರೆಸ್ ಹಾಗೂ ಅಗಡಿ ಫೀಡರ್ ಮಾರ್ಗದಲ್ಲಿ ಅರಣ್ಯ ಇಲಾಖೆಯವರು ರಸ್ತೆ ಬದಿ ಮರಗಳನ್ನು ಕಟಾವು ಮಾಡಲು ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲು ಕೋರಿರುವುದರಿಂದ ಜು. 14ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4ರ ವರೆಗೆ ಸದರಿ ಫೀಡರ್‌ಗಳಿಗೆ ವಿದ್ಯುತ್ ವ್ಯತ್ಯಯವಾಗುವುದು. ಈ ಮಾರ್ಗದಿಂದ ವಿದ್ಯುತ್ ಪೂರೈಕೆ ಪಡೆಯುತ್ತಿರುವ ನಗರದ ಎಪಿಎಂಸಿ, ಉದಯನಗರ, ಕರ್ಜಗಿ, ಯತ್ನಳ್ಳಿ, ಗಾಂಧಿಪುರ, ಮಾಳಾಪುರ, ಕಾಟೇನಹಳ್ಳಿ, ಕಳ್ಳಿಹಾಳ, ವೀರಾಪುರ, ಭೂದಗಟ್ಟಿ, ಮಾಳಾಪುರ, ತಮ್ಮೇನಹಳ್ಳಿ, ಕರ್ಜಗಿ, ಕರ್ಜಗಿ ವಾಟರ್ ಸಪ್ಲೈ ಮತ್ತು ಅಗಡಿ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಆದ್ದರಿಂದ ಸಾರ್ವಜನಿಕರು ಹಾಗೂ ಸದರಿ ಫೀಡರ್‌ಗಳ ವ್ಯಾಪ್ತಿಗೆ ಬರುವ ಎಲ್ಲ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂನ ಹಾವೇರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಓ.ಎಸ್. ಶಶಿಧರ ವಿನಂತಿಸಿದ್ದಾರೆ.
165 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು
ಹಾವೇರಿ: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯು ಜಿಲ್ಲೆಯ ಎಂಟು ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ ಸುವ್ಯವಸ್ಥಿತವಾಗಿ ಜರುಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಆರ್. ಕೊಣ್ಣೂರ ಅವರು ತಿಳಿಸಿದ್ದಾರೆ. ಒಟ್ಟು 168 ವಿದ್ಯಾರ್ಥಿಗಳಲ್ಲಿ 165 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 29 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿರುತ್ತಾರೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ಪರೀಕ್ಷಾ ಅಕ್ರಮಗಳು ಜರುಗಿಲ್ಲ. ಯಾವ ವಿದ್ಯಾರ್ಥಿಯೂ ಡಿಬಾರ್ ಆಗಿರುವುದಿಲ್ಲ ಎಂದು ತಿಳಿಸಿದ್ದಾರೆ.
ಕ್ಯಾಂಟೀನ್ ತೆರೆಯಲು ಅರ್ಜಿ ಆಹ್ವಾನ
ಹಾವೇರಿ: ನಗರದಲ್ಲಿ ನೂತನವಾಗಿ ನಿರ್ಮಿಸಲಾದ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ಕ್ಯಾಂಟೀನ್ ತೆರೆಯಲು ಅರ್ಹ ಹೋಟೆಲ್ ಉದ್ದಿಮೆದಾರರಿಂದ ಜುಲೈ 17ರೊಳಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನಾಯಾಧೀಶರ ಕಾರ್ಯಾಲಯವನ್ನು ಸಂಪರ್ಕಿಸಬಹುದು.