2 ತಿಂಗಳಲ್ಲಿ ಕಾಂಗ್ರೆಸ್ ಭಿನ್ನಮತ ಸ್ಫೋಟ
ಕನ್ನಡಪ್ರಭ ವಾರ್ತೆ, ಹಾವೇರಿ, ಜು. 11
ಅಧಿಕಾರ ಪಡೆದು ಕೇವಲ ಎರಡೇ ತಿಂಗಳಾಗಿದೆ. ಆಗಲೇ ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತ ಸ್ಫೋಟಗೊಂಡಿದೆ.
ಪಕ್ಷದ ಮುಖಂಡರ ಕಾರ್ಯವೈಖರಿಯಿಂದಾಗಿ ಅಸಮಾಧಾನಗೊಂಡಿರುವ ಕಾಂಗ್ರೆಸ್ ಮುಖಂಡರ ಒಂದು ಗುಂಪು ಪಕ್ಷದ ಕಾರ್ಯಾಲಯದಲ್ಲಿ ಸಭೆ ನಡೆಸಿ, ಶಾಸಕರನ್ನು ರಬ್ಬರ ಸ್ಟಾಂಪ್ನ್ನಾಗಿ ಮಾಡಿಕೊಂಡು ಕೆಲ ಮುಖಂಡರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಶಾಸಕರ ಸಮ್ಮುಖದಲ್ಲಿ ಎಚ್ಚರಿಕೆ: ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಡೆಗಣಿಸಿ ಅನ್ಯ ಪಕ್ಷದವರ ಕೆಲಸ ಕಾರ್ಯಗಳನ್ನು ಮಾಡಿಕೊಡುವ ಮೂಲಕ ಮುಜುಗರವನ್ನುಂಟು ಮಾಡುತ್ತಿದ್ದು, ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಬೇಕು, ಇಲ್ಲದಿದ್ದರೆ ತಾವು ಪಕ್ಷದ ಚಟುವಟಿಕೆಗಳಿಂದ ದೂರ ಉಳಿಯುವುದಾಗಿ ಶಾಸಕ ರುದ್ರಪ್ಪ ಲಮಾಣಿ ಅವರ ಸಮ್ಮುಖದಲ್ಲಿಯೇ ಎಚ್ಚರಿಕೆ ನೀಡಿದ್ದಾರೆಂದು ಹೇಳಲಾಗಿದೆ.
ಅಹವಾಲು ಕೇಳುವವರ್ಯಾರು: ಕಾಂಗ್ರೆಸ್ ಪಕ್ಷದ ಸರ್ಕಾರ ಬಂದು ಕೇವಲ ಎರಡು ತಿಂಗಳಾಗಿದೆ. ನಮ್ಮದೇ ಶಾಸಕರಿದ್ದಾರೆ. ಆದರೆ, ನಮ್ಮ ಕೆಲಸ ಕಾರ್ಯಗಳು ಆಗುತ್ತಿಲ್ಲ. ನಾವು ಶಾಸಕರನ್ನು ಭೇಟಿಯಾಗಿ ನಮ್ಮ ಅಹವಾಲುಗಳನ್ನು ಹೇಳಿಕೊಳ್ಳಲು ಮುಖಂಡರು ಬಿಡುತ್ತಿಲ್ಲ, ಶಾಸಕರನ್ನು ಮೊಬೈಲ್ನಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರೆ ಅವರ ಮೊಬೈಲ್ ಕರೆಯನ್ನು ಸ್ವೀಕರಿಸುವುದಿಲ್ಲ, ಶಾಸಕರ ಆಪ್ತ ಕಾರ್ಯದರ್ಶಿ ಶಾಸಕರ ಬಗ್ಗೆ ಸರಿಯಾದ ಮಾಹಿತಿ ನೀಡುವುದಿಲ್ಲ, ಶಾಸಕರ ಮೊಬೈಲ್ ಸ್ವೀಚ್ ಆಫ್ ಆಗಿರುತ್ತದೆ. ಹೀಗಾದರೆ ಹೇಗೆ, ನಮ್ಮ ಅಳಲನ್ನು ಕೇಳುವವರು ಯಾರು ಎಂದು ಅನೇಕ ಕಾರ್ಯಕರ್ತರು ಹಾಗೂ ಮುಖಂಡರು ಖಾರವಾಗಿ ಪ್ರಶ್ನಿಸಿದರೆನ್ನಲಾಗಿದೆ.
ಸಾಮೂಹಿಕ ಪ್ರಯತ್ನ: ಪಕ್ಷದ ಕೆಲವೇ ಕೆಲ ಮುಖಂಡರಿಂದ ಶಾಸಕ ರುದ್ರಪ್ಪ ಲಮಾಣಿ ಚುನಾವಣೆಯಲ್ಲಿ ಆರಿಸಿ ಬಂದಿಲ್ಲ, ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಹಗಲು, ರಾತ್ರಿ ಎನ್ನದೇ ಒಗ್ಗಟ್ಟಾಗಿ ದುಡಿದ ಪರಿಣಾಮವಾಗಿ ಲಮಾಣಿ 32 ಸಾವಿರ ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ.
ಮೂಲ ಕಾರ್ಯಕರ್ತರ ಕಡೆಗಣನೆ: ಯಾರೋ ಒಬ್ಬಿಬ್ಬ ನಾಯಕರಿಂದ ಶಾಸಕ ಆಯ್ಕೆಯಾಗಿಲ್ಲ ಎಂಬುದನ್ನು ಮರೆಯಬಾರದು, ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ವಿರೋಧಿಸಿದ್ದ ಮುಖಂಡರು ಇಂದು ಶಾಸಕರ ಅಕ್ಕ-ಪಕ್ಕ ಸುಳಿದಾಡುತ್ತಾ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರನ್ನು ಅಣುಕಿಸುತ್ತಿದ್ದಾರೆ. ಲಾಭಕ್ಕಾಗಿ ಬರುವವರು ಮಧ್ಯದಲ್ಲಿಯೇ ಬಂದು ಲಾಭ ಪಡೆದು ಹೋಗುತ್ತಾರೆ. ಇಂಥವರಿಗೆ ಪಕ್ಷದ ಕೆಲವು ಮುಖಂಡರು ಮಣೆ ಹಾಕುತ್ತಿರುವುದು ಸರಿಯಲ್ಲ ಎಂದು ಅನೇಕರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರೆಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಸಮಸ್ಯೆಗೆ ಸ್ಪಂದಿಸುತ್ತಿಲ್ಲ: ಸಣ್ಣ-ಪುಟ್ಟ ಕೆಲಸಗಳಿಗಾಗಿಯೂ ಮುಖಂಡರೇ ಕಾಯುವಂತಾಗಿದೆ. ಹಾವೇರಿ ನಗರದಲ್ಲಿ 20 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಡೆಂಘೀ ಹಾವಳಿ ಹೆಚ್ಚಾಗಿದ್ದು, ಅಧಿಕಾರಿಗಳು ಮುಂಜಾಗೃತೆ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಜನತೆ ಯಾವ ನಿರೀಕ್ಷೆಗಳನ್ನು ಇಟ್ಟುಕೊಂಡು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರೋ ಆ ನಿರೀಕ್ಷೆಗಳನ್ನು ನಮ್ಮಿಂದ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಒಗ್ಗಟ್ಟು ಅಗತ್ಯ: ಜನತೆಯ ಸಮಸ್ಯೆಗಳಿಗೆ ನಾವು ಸ್ಪಂದಿಸಿ ಕೆಲಸ ಮಾಡದಿದ್ದರೆ, ಬರುವ ಲೋಕಸಭಾ ಚುನಾವಣೆಯನ್ನು ಎದುರಿಸುವುದು ತುಂಬಾ ಕಷ್ಟವಾಗುತ್ತದೆ. ಆಗಿರುವ ತಪ್ಪುಗಳನ್ನು ತಕ್ಷಣದಲ್ಲಿ ಸರಿಪಡಿಸಿಕೊಂಡು ಕಾರ್ಯಕರ್ತರನ್ನು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಸಕರು ಮುನ್ನಡೆಯಬೇಕು. ಇಲ್ಲದೇ ಹೋದರೆ ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆಗೆ ಹಿನ್ನಡೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರೆಂದು ಮೂಲಗಳಿಂದ ತಿಳಿದು ಬಂದಿದೆ.
ಕಾರ್ಯಕರ್ತರ ಹಾಗೂ ಮುಖಂಡರ ಅಭಿಪ್ರಾಯಗಳನ್ನು ಆಲಿಸಿದ ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ನಾನು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೇನೆ. ಕೆಲವೊಂದು ಸಂದರ್ಭದಲ್ಲಿ ಸಣ್ಣ-ಪುಟ್ಟ ತಪ್ಪುಗಳಾಗಿರಬಹುದು, ಅವುಗಳನ್ನು ಸರಿಪಡಿಸಿಕೊಂಡು ಮುನ್ನಡೆಯುವುದಾಗಿ ಹೇಳಿ ತಮಗೆ ಬೇರೆ ಕಡೆ ಸನ್ಮಾನ ಕಾರ್ಯಕ್ರಮವಿದೆ ಎಂದು ಹೇಳಿ ಸಭೆಯಿಂದ ನಿರ್ಗಮಿಸಿದರು.
ಈ ಬಗ್ಗೆ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಹಾಗೂ ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿ ಪಕ್ಷ ಕೆಲವು ಮುಖಂಡರ ಹಸ್ತಕ್ಷೇಪ ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಬಗ್ಗೆ ಭಾನುವಾರ ಗಡುವು ನೀಡಿ ಸಭೆಯಿಂದ ನಿರ್ಗಮಿಸಿದರೆನ್ನಲಾಗಿದೆ.
ಸಭೆಯಲ್ಲಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಹಿರೇಮಠ, ಜಿಲ್ಲಾ ಕಾಂಗ್ರೆಸ್ ವಕ್ತಾರ, ನಗರಸಭಾ ಸದಸ್ಯ ಸಂಜೀವಕುಮಾರ ನೀರಲಗಿ, ಎಸ್.ಎಫ್. ಎನ್ ಗಾಜಿಗೌಡ್ರ, ರತ್ನಾ ಭೀಮಕ್ಕನವರ, ರಮೇಶ ಕಡಕೋಳ, ಮಲ್ಲೇಶಪ್ಪ ಪಟ್ಟಣಶೆಟ್ಟಿ, ರಾಜೇಶ ಶಿವಲಾಲ ಕೊಟಕ್, ಶಿವಬಸಪ್ಪ ಹಲಗಣ್ಣವರ ಸೇರಿದಂತೆ ಕಾಂಗ್ರೆಸ್ ಪಕ್ಷ ಹಲವಾರು ಮುಖಂಡರು ಹಾಜರಿದ್ದರು.