ಜಿಲ್ಲಾಸ್ಪತ್ರೆಗೆ ಮೂಲಸೌಲಭ್ಯ ಕಲ್ಪಿಸಿ
ಹಾವೇರಿ: ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಅವ್ಯವಸ್ಥೆ ಸರಿಪಡಿಸಿಕೊಡಬೇಕೆಂದು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಆಡಳಿತ ವ್ಯವಸ್ಥೆಯಲ್ಲಿ ಅತಿಯಾದ ಲೋಪದೋಷಗಳನ್ನು ಸರಿಪಡಿಸಬೇಕು. ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಚತಾ ವ್ಯವಸ್ಥೆ ಸರಿಯಿಲ್ಲದ ಕಾರಣ ರೋಗಿಗಳಿಗೆ ತುಂಬಾ ತೊಂದರೆ ಆಗಿದೆ. ಜಿಲ್ಲಾಸ್ಪತ್ರೆಗೆ ಈಗಾಗಲೇ ಅವಶ್ಯಕತೆಯಿರುವ ಸಿಬ್ಬಂದಿ ಕೊರತೆ ಇಲ್ಲಿಗೆ 296 ವಿವಿಧ ವಿಭಾಗಗಳ ಸೇವೆಯ ಸಿಬ್ಬಂದಿ ಅವಶ್ಯ ಇದೆ. ಆದರೀಗ ಬರಿ 60 ಜನ ಸಿಬ್ಬಂದಿ ಸೇವೆಯಲ್ಲಿದ್ದಾರೆ. ಆದ್ದರಿಂದ ಸಿಬ್ಬಂದಿ ಕೊರತೆಯಿರುವ ಸೇವಾ ಸಿಬ್ಬಂದಿ ನೇಮಕಗೊಳಿಸಿ ಜಿಲ್ಲಾ ಆಸ್ಪತ್ರೆಯಲ್ಲಿ ಸಾರ್ವಜನಿಕ ಸೇವೆ ಮಾಡಲು ಅವಕಾಶ ನೀಡಿರಿ ಎಂದು ಒತ್ತಾಯಿಸಿದರು.
ಹಾವೇರಿ ಜಿಲ್ಲಾ ನ್ಯಾಯಾಲಯದ ಹಳೆಯ ಕಟ್ಟಡಕ್ಕೆ ಹಾವೇರಿ ತಹಶೀಲ್ದಾರ ರವರ ಆಡಳಿತ ಕಚೇರಿಯನ್ನು ವರ್ಗಾಯಿಸಿರಿ ಈ ಕಾರ್ಯದಿಂದ ಹಾವೇರಿ ನಗರ ಮಧ್ಯದಲ್ಲಿ ಈ ಕಚೇರಿ ವರ್ಗಾವಣೆ ಆಗುವುದರಿಂದ ಬರುವ ಹೋಗುವ ಸಾರ್ವಜನಿಕರಿಗೆ ವಿವಿಧ ಕಚೇರಿಗಳು, ಬಸ್ ನಿಲ್ದಾಣ, ನ್ಯಾಯಾಲಯ, ಮುಖ್ಯ ಮಾರುಕಟ್ಟೆಗಳು ಅತೀ ಸಮೀಪವಾಗುತ್ತವೆ. ಆದ್ದರಿಂದ ತಹಸೀಲ್ದಾರ್ ಕಚೇರಿ ವರ್ಗಾವಣೆ ಕಾರ್ಯವನ್ನು ಶೀಘ್ರ ಕೈಗೊಳ್ಳಿ ಎಂದು ಒತ್ತಾಯಿಸಿದರು.
ಹಾವೇರಿ ನಗರದಲ್ಲಿ ದುರಸ್ಥಿ ಆಗದಿರುವ ರಸ್ತೆಗಳು ಬಹಳಷ್ಟು ಇರುತ್ತವೆ. ನಗರದ ಬಹು ಮುಖ್ಯ ಮಾರುಕಟ್ಟೆ ಕೇಂದ್ರಬಿಂದು ಆದ ಲಾಲ ಬಹದ್ದೂರ ಶಾಸ್ತ್ರಿ ಮಾರುಕಟ್ಟೆಯು ಹಲವು ದಶಕಗಳಿಂದಲೂ ದುರಸ್ಥಿ ಕಾಣದೆ ಅವ್ಯವಸ್ಥೆ ತಾಣವಾಗಿದೆ. ಆದ್ದರಿಂದ ರಸ್ತೆ ದುರಸ್ಥಿ ಕಾರ್ಯ ಶೀಘ್ರ ಕೈಗೊಳ್ಳಬೇಕು.
ಹಾವೇರಿ ನಗರದ ಮುಖ್ಯ ವೃತ್ತಗಳಲ್ಲಿ ವಿವಿಧ ಊರುಗಳಿಗೆ ಹೋಗುವ ರಸ್ತೆಗಳಿಗೆ ಸೂಚನಾ ಫಲಕಗಳು ಇಲ್ಲದಿರುವುದರಿಂದ ಆಯಾ ಊರುಗಳಿಗೆ ಹೋಗುವ ಪ್ರಯಾಣಿಕರಿಗೆ ಹಗಲು ಹಾಗೂ ರಾತ್ರಿ ವೇಳೆ ತುಂಬಾ ತೊಂದರೆಯಾಗುತ್ತದೆ. ಹೀಗಾಗಿ ಸೂಚನಾ ಫಲಕಗಳ ವ್ಯವಸ್ಥೆಯನ್ನು ಆಯಾ ವೃತ್ತಗಳಿಗೆ ಅಳವಡಿಸಲು ಸೂಚಿಸಿರಿ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.