ಸರ್ಕಾರದ ಕಾರ್ಯಕ್ರಮ ಜನತೆಗೆ ತಲುಪಿಸಿ
ಕನ್ನಡಪ್ರಭ ವಾರ್ತೆ, ಗದಗ, ಜು. 11
ಕಾಂಗ್ರೆಸ್ ಸರ್ಕಾರದ ಪರ ದೊರೆತಿರುವ ಜನಾದೇಶ ಪಕ್ಷದ ಜವಾಬ್ದಾರಿ ಹೆಚ್ಚಿಸಿದೆ. ಚುನಾವಣಾ ಪ್ರಣಾಳಿಕೆಯಂತೆ ಪಕ್ಷ ಕಾರ್ಯನಿರ್ವಹಿಸುವ ಬದ್ಧತೆ ಪ್ರದರ್ಶಿಸುವ ಸಮಯ ಇದಾಗಿದ್ದು, ಕಾರ್ಯಕರ್ತರು ಸರ್ಕಾರದ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಕರೆ ನೀಡಿದರು.
ಅವರು ಬುಧವಾರ ಸಂಜೆ ನಗರದ ಕಾಟನ್‌ಸೇಲ್ ಸೊಸೈಟಿಯ ಆವರಣದಲ್ಲಿ ಜರುಗಿದ ಕಾರ್ಯಕರ್ತರ ಕೃತಜ್ಞತೆ ಸಮರ್ಪಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಕರ್ತರು ಹಾಗೂ ಪಕ್ಷದ ಪದಾಧಿಕಾರಿಗಳು ಸರ್ಕಾರದಲ್ಲಿರುವ ಜನಪ್ರತಿನಿಧಿಗಳನ್ನು ರಕ್ಷಿಸುವ ಪಾಲಕರು. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಆಶೋತ್ತರಗಳಿಗೆ ಸ್ಪಂದಿಸಿ ಸರ್ಕಾರ ಕಾರ್ಯನಿರ್ವಹಿಸಲಿದೆ ಎಂದು ಭರವಸೆ ನೀಡಿದರು.
ಚುನಾವಣೆಯ ಸಂದರ್ಭದಲ್ಲಿ ನೀಡಿರುವ ಪ್ರತಿಯೊಂದು ಭರವಸೆ ಈಡೇರಿಸಲು ಪಕ್ಷದ ಶಾಸಕರು ಹಾಗೂ ಸಚಿವರು ಸಂಕಲ್ಪಬದ್ಧರಾಗಿ ಕಾರ್ಯನಿರ್ವಹಿಸಬೇಕಾಗಿದೆ. ಸರ್ಕಾರದ ಮೇಲೆ ಜನತೆ ಇಟ್ಟಿರುವ ನಂಬಿಕೆ ಹಾಗೂ ವಿಶ್ವಾಸ ಉಳಿಸಿಕೊಳ್ಳುವುದು ಪ್ರಥಮ ಆದ್ಯತೆಯಾಗಬೇಕಿದೆ. ಜನತೆ ಅಪೇಕ್ಷೆ ಹಾಗೂ ಒತ್ತಡ ಸರ್ಕಾರದ ಮೇಲಿದ್ದರೂ ಅದನ್ನು ಪ್ರಾಮಾಣಿಕವಾಗಿ ಪ್ರಗತಿಪರ ಕೆಲಸಗಳ ಮೂಲಕ ನಿಭಾಯಿಸುವ ಮನೋಭಾವ ನಮ್ಮದಾಗಬೇಕಿದೆ. ಕಾರ್ಯಕರ್ತರೂ ಪಕ್ಷದ ಪ್ರತಿಯೊಂದು ಚಟುವಟಿಕೆ ಗಮನಿಸಿ ರಚನಾತ್ಮವಾಗಿರುವ ಸರ್ಕಾರದ ಕೆಲಸ ಹಾಗೂ ಜನತೆ ಸಮಸ್ಯೆಗಳನ್ನು ನಿರ್ದಾಕ್ಷಿಣ್ಯವಾಗಿ ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತರಬೇಕು. ಜನತೆಯ ವಿಶ್ವಾಸ ಹಾಗೂ ಸೌಹಾರ್ದ ಉಳಿಸಿಕೊಳ್ಳವತ್ತ ಪಕ್ಷದ ಪ್ರತಿಯೊಂದು ಚಟುವಟಿಕೆ ಕೇಂದ್ರೀಕೃತವಾಗಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಜಿ.ಎಸ್. ಗಡ್ಡದೇವರಮಠ, ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿದರು. ಈ ಸಂದರ್ಭದಲ್ಲಿ ನರಗುಂದ ಶಾಸಕ ಬಿ.ಆರ್. ಯಾವಗಲ್, ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ, ರೋಣ ಶಾಸಕ ಜಿ.ಎಸ್. ಪಾಟೀಲ, ಎಸ್.ಟಿ. ಘಟಕದ ರಾಜ್ಯಾಧ್ಯಕ್ಷ ಟಿ. ಈಶ್ವರ, ನಗರಸಭೆ ಸದಸ್ಯ ಬಿ.ಬಿ. ಅಸೂಟಿ ಮುಂತಾದವರು ಮಾತನಾಡಿದರು. ಈ ಸಂದರ್ಭ ತಾಪಂ ಅಧ್ಯಕ್ಷ ಅಬ್ದುಲ್ ಕರಿಂ ಕರೂರ, ಜಿಪಂ ಸದಸ್ಯ ರೇವಣೆಪ್ಪ ಕೊಂಡಿಕೊಪ್ಪ, ಅನ್ನಪೂರ್ಣಾ ಡಬಾಲಿ, ಶಾರದಾ ತೋಟದ, ನಗರಸಭೆ ಸದಸ್ಯ ಅನಿಲ ಶಿಂಗ್ಟಾಲಕೇರಿ, ಅನಿಲ ಗರಗ, ಬರಕತ್‌ಅಲಿ ಮುಲ್ಲಾ, ಕಮಲಾ ಹಾದಿಮನಿ, ಜ್ಯೋತಿ ಇರಾಳ, ಪೀರಸಾಬ ಕೌತಾಳ ಉಪಸ್ಥಿತರಿದ್ದರು.