ಗೊಂದಲ ಗೂಡಾದ ಮಲ್ಲೂರು ಗ್ರಾಮಸಭೆ
ಬ್ಯಾಡಗಿ: ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಯಂತ್ರಗಳನ್ನು ಬಳಸಿ ಕೂಲಿಕಾರ್ಮಿಕರ ಹೆಸರಿನಲ್ಲಿ ಹಣ ತೆಗೆದಿರುವ ಕುರಿತು ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ಮಲ್ಲೂರು ಗ್ರಾಮದಲ್ಲಿ ಗುರುವಾರ ಜರುಗಿದ ವಿಶೇಷ ಗ್ರಾಮಸಭೆ ಗೊಂದಲದ ಗೂಡಾಯಿತು.
ಗ್ರಾಪಂ ಕಚೇರಿಯಲ್ಲಿ ಲೆಕ್ಕ ಪರಿಶೋಧನಾ ವಿಶೇಷ ಸಭೆಯನ್ನು ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮದ ಶಂಭು ಕುಲಕರ್ಣಿ, ಗ್ರಾಮದಲ್ಲಿ ಬಹುತೇಕ ಕಾಮಗಾರಿಗಳನ್ನು ಯಂತ್ರಗಳ ಮೂಲಕ ನಡೆಸಲಾಗಿದ್ದು, ಕೆಲಸ ಮಾಡದಿರುವ ಕೂಲಿಕಾರ್ಮಿಕರ ಹೆಸರಿನಲ್ಲಿ ಖರ್ಚು ಹಾಕಲಾಗಿದೆ. ಈ ಕುರಿತು ಕೂಲಿ ಕಾರ್ಮಿಕರ ವಿವರಗಳನ್ನು ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರಲ್ಲದೇ ಕಾಮಗಾರಿಗಳ ವಿವರಗಳನ್ನು ಕೂಡ ಸಮರ್ಪಕವಾಗಿ ನೀಡುತ್ತಿಲ್ಲ ಎಂದು ಆರೋಪಿಸಿದ ಅವರು ಸಂಪೂರ್ಣ ತನಿಖೆ ನಡೆಸುವಂತೆ ಒತ್ತಾಯಿಸಿದರು.
ನಿರ್ಲಕ್ಷ್ಯ: ಫಕ್ಕೀರಪ್ಪ ಬಣಕಾರ ಮಾತನಾಡಿ, ಪಂಚಾಯತಿಯಲ್ಲಿ ಗ್ರಾಮಸ್ಥರಿಗೆ ಯೋಜನೆಗಳ ಕುರಿತು ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ. ಮಾಹಿತಿ ಕೇಳಲು ಹೋದವರನ್ನು ತಿರಸ್ಕಾರ ಮನೋಭಾವನೆಯಿಂದ ನೋಡಲಾಗುತ್ತಿದೆ. ಅರ್ಜಿಗಳನ್ನು ಪಡೆಯದೇ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದರಲ್ಲದೇ ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ಸಭೆಯಲ್ಲಿ ಗ್ರಾಮಸ್ಥರು ಆಗ್ರಹಿಸಿದರು.
ಗ್ರಾಪಂ ಅಧ್ಯಕ್ಷ ಎನ್.ಜಿ. ಕೆಂಗನವರ ಮಾತನಾಡಿ, ಕೂಲಿಕಾರ್ಮಿಕರು ಅರ್ಜಿ ನೀಡಿದಲ್ಲಿ 15 ದಿನಗಳಲ್ಲಿ ಕೂಲಿಕೆಲಸ ನೀಡಲಾಗುವುದು. ಸಣ್ಣ ಹಿಡುವಳಿದಾರರಿಗೆ ಬದು ನಿರ್ಮಾಣ, ಹೊಲಗಳಿಗೆ ರಸ್ತೆ, ಇನ್ನಿತರ ಕಾಮಗಾರಿಗಳಿಗೆ ಅನುದಾನ ಒದಗಿಸಲಾಗುವುದು ಯೋಜನೆಗಳ ಸದುಪಯೋಗಪಡಿಸಿಕೊಳ್ಳಲು ತಿಳಿಸುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಯೋಜನೆ ಸಂಯೋಜಕ ಸಂಪತ್‌ಕುಮಾರ ಮಾತನಾಡಿ, ಸನ್ 2012-13ನೇ ಸಾಲಿನಲ್ಲಿ ಒಟ್ಟು ರು. 24.78.125 ಖರ್ಚು ಮಾಡಲಾಗಿದೆ. ಕೂಲಿಗಾಗಿ ರು. 12,25,125 ಹಾಗೂ ಸಾಮಗ್ರಿ ಖರೀದಿಗೆ ರು. 12. 53 ಲಕ್ಷ ವೆಚ್ಚ ಮಾಡಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರಲ್ಲದೇ ವಾರ್ಷಿಕ ವೆಚ್ಚದ ವಿವರ ನೀಡಿದರು.
ಗ್ರಾಪಂ ಉಪಾಧ್ಯಕ್ಷೆ ಶಾಂತವ್ವ ವಾಲ್ಮೀಕಿ, ಸದಸ್ಯರಾದ ಶಂಕ್ರಣ್ಣ ಅಕ್ಕಿ, ಪ್ರಕಾಶ ಕಾಟೇನಹಳ್ಳಿ, ರತ್ನವ್ವ ಛಲವಾದಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಜಿ.ಎಸ್. ಗಡ್ಡದ, ಕಿರಿಯ ಅಭಿಯಂತರ ಕೃಷ್ಣ, ಪಶುವೈದ್ಯಾಧಿಕಾರಿ ಡಾ. ನಾಗರಾಜ ಹಾಗೂ ಪ್ರೇಮವ್ವ ಹೊಂಡದಮಠ ಇದ್ದರು.