ವ್ಯಾಪಾರಸ್ಥರ ಅಭಿವೃದ್ಧಿಗೆ ಮೆಗಾ ಮಾರುಕಟ್ಟೆ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಜು. 12
ರೈತರ ಮತ್ತು ವ್ಯಾಪಾರಸ್ಥರ ಸರ್ವತೋಮುಖ ಅಭಿವೃದ್ಧಿಗಾಗಿ ನಗರದ ಹೊರ ಭಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೆಗಾ ಮಾರುಕಟ್ಟೆ ಅಭಿವೃದ್ಧಿಗೆ ಶ್ರಮಿಸುವುದಾಗಿ ಶಾಸಕ ಕೆ.ಬಿ. ಕೋಳಿವಾಡ ಹೇಳಿದರು.
ತಾಲೂಕಿನ ಹೋಲಿಹಳ್ಳಿ ಗ್ರಾಮದ ಹತ್ತಿರ ಮೆಗಾ ಮಾರುಕಟ್ಟೆ ನಿರ್ಮಿಸುವುದಕ್ಕಾಗಿ ಎಪಿಎಂಸಿಯಿಂದ ಖರೀದಿಸುವರ ಜಮೀನಿಗೆ ಕಾಂಪೌಂಡ್ ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹತ್ತಿ ವ್ಯಾಪಾರ, ಬೀಜೋತ್ಪಾದನೆಗೆ ಹೆಸರುವಾಸಿಯಾಗಿರುವ ರಾಣಿಬೆನ್ನೂರು ನಗರದಲ್ಲಿರುವ ಕಾಟನ್ ಮಾರುಕಟ್ಟೆಗೆ ನಿತ್ಯ ದೇಶದ ವಿವಿಧ ರಾಜ್ಯಗಳಿಂದ ಹತ್ತಿ ಮಾರಾಟಗಾರರು ಹಾಗೂ ಖರೀದಿದಾರರು ಬರುತ್ತಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ ವ್ಯಾಪಾರ ವಹಿವಾಟಿಗೆ ಬರುವ ವ್ಯಾಪಾರಸ್ಥರ ಸಂಖ್ಯೆಗನುಗುಣವಾಗಿ ಮತ್ತು ಹೆಚ್ಚುತ್ತಿರುವ ಅಂಗಡಿಗಳಿಗೆ ಮಳಿಗೆ ನಿರ್ಮಿಸಿಕೊಳ್ಳಲು ಸ್ಥಳಾವಕಾಶ ಇಲ್ಲದಿರುವ ಕಾರಣ ನಗರದ ಹೊರಭಾಗದಲ್ಲಿ 10 ವರ್ಷಗಳ ಹಿಂದೆಯೇ ಮೆಗಾ ಮಾರುಕಟ್ಟೆ ಸ್ಥಾಪಿಸಲು ಉದ್ದೇಶಿಲಾಗಿತ್ತು. ಈ ನಿಟ್ಟಿನಲ್ಲಿ ಜಾಗ ಖರೀದಿಸಲಾಗಿದ್ದು, ನನ್ನ ಅಧಿಕಾರವಧಿ ಮುಗಿಯುವುದರೊಳಗೆ ಮೆಗಾ ಮಾರುಕಟ್ಟೆಯಲ್ಲಿ ರೈತರು ಹಾಗೂ ವ್ಯಾಪಾರಸ್ಥರು ನೆಮ್ಮದಿಯಿಂದ ವ್ಯವಹರಿಸುವಂತೆ ಮಾಡುವುದೇ ನನ್ನ ಉದ್ದೇಶವೆಂದು ಕೋಳಿವಾಡ ತಿಳಿಸಿದರು.
ನಿರ್ಮಾಣ ಕಾರ್ಯ: ಅಧ್ಯಕ್ಷತೆ ವಹಿಸಿದ್ದ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸಣ್ಣತಮ್ಮಣ್ಣ ಬಾರ್ಕಿ ಮಾತನಾಡಿ, ಸುಮಾರು ರು. 2.7 ಕೋಟಿ ವೆಚ್ಚದಲ್ಲಿ 220 ಎಕರೆ ಮೆಗಾ ಮಾರುಕಟ್ಟೆ ಜಮೀನಿಗೆ ಕಾಂಪೌಂಡ್ ಗೋಡೆ ನಿರ್ಮಿಸಲಾಗುತ್ತದೆ. ತಾಲೂಕಿನ ದೇವಗೊಂಡನಕಟ್ಟಿಯಲ್ಲಿ 1, ಹಲಗೇರಿ ಗ್ರಾಮದ 3 ರೈತ ಸಂಪರ್ಕ ರಸ್ತೆಗಳನ್ನು ಮತ್ತು ನಗರದ ಎಪಿಎಂಪಿಸಿ ಮಾರುಕಟ್ಟೆಯ ಆವರಣದಲ್ಲಿ ಹಾಳಾಗಿರುವ ಗಟಾರಗಳ ನಿರ್ಮಾಣ ಕಾರ್ಯ ನಡೆಸಲು ಉದ್ದೇಶಿಲಾಗಿದೆ ಎಂದು ವಿವರಿಸಿದರು.
ಎಪಿಎಂಸಿ ಉಪಾಧ್ಯಕ್ಷ ಮಂಜಣ್ಣ ಹಾವನೂರು, ಮಾಜಿ ಅಧ್ಯಕ್ಷ ಬಾಬು ಹರಿಹರ, ಮಹೇಶಪ್ಪ ಮಲ್ಲಾಪುರ, ಚಂದ್ರಶೇಖರಪ್ಪ ಬಣಕಾರ, ಏಕನಾಥ ಭಾನುವಳ್ಳಿ, ಸೋಮನಗೌಡ ಸೋಮನಗೌಡ್ರ, ಮಂಜಣ್ಣ ಲಿಂಗದಹಳ್ಳಿ ಮೆಗಾ ಮಾರುಕಟ್ಟೆ ಅಭಿವೃದ್ಧಿಗೆ ಸಲಹೆ-ಸೂಚನೆಗಳನ್ನು ನೀಡಿದರು. ಬಸವಣ್ಣೆವ್ವ ಎಲಿಗಾರ, ನಂದೆಪ್ಪ ತೆಗ್ಗಿನ, ವೆಂಕಟೇಶ ಬಣಕಾರ, ಸರಿಶ್ಚಂದ್ರ ದೊಡ್ಮನಿ, ಗುತ್ತಿಗೆದಾರ ಕೃಷ್ಣಪ್ಪ ಉಪ್ಪಾರ ಉಪಸ್ಥಿತರಿದ್ದರು.
ನಗರದ ಹೊರಭಾಗದಲ್ಲಿ 10 ವರ್ಷಗಳ ಹಿಂದೆಯೇ ಮೆಗಾ ಮಾರುಕಟ್ಟೆ ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಈ ನಿಟ್ಟಿನಲ್ಲಿ ಜಾಗ ಖರೀದಿಸಲಾಗಿದ್ದು, ನನ್ನ ಅಧಿಕಾರವಧಿ ಮುಗಿಯುವುದರೊಳಗೆ ಮೆಗಾ ಮಾರುಕಟ್ಟೆಯಲ್ಲಿ ರೈತರು ಹಾಗೂ ವ್ಯಾಪಾರಸ್ಥರು ನೆಮ್ಮದಿಯಿಂದ ವ್ಯವಹರಿಸುವಂತೆ ಮಾಡುವುದೇ ನನ್ನ ಉದ್ದೇಶ.
- ಶಾಸಕ ಕೋಳಿವಾಡ