ಸಿಟಿ ಬಸ್ ವ್ಯವಸ್ಥೆ ಕಲ್ಪಿಸಿ: ಒತ್ತಾಯ
ರಾಣಿಬೆನ್ನೂರು: ತಾಲೂಕು ಕೇಂದ್ರ ಸ್ಥಾನದಿಂದ ಸುಮಾರು 30 ಕಿಮೀ ಅಂತರದಲ್ಲಿರುವ ಕುಮಾರಪಟ್ಟಣ, ನಲವಾಗಲ, ಕೋಡಿಯಾಲ ಹೊಸಪೇಟೆ, ಮಾಕನೂರು ಗ್ರಾಮಗಳ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಣಿಬೆನ್ನೂರು-ಕುಮಾರಪಟ್ಟಣ ವರೆಗೆ ಸಿಟಿಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ, ಸಾರಿಗೆ ಸಂಸ್ಥೆಯ ಜಿಲ್ಲಾ ವ್ಯವಸ್ಥಾಪಕರಿಗೆ ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದಿರುವುದಾಗಿ ರೈತ ಸಂಘದ ಜಿಲ್ಲಾ ಸಂಚಾಲಕ ಪರಮೇಶ ಚಿನ್ನಣ್ಣನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ವ್ಯಾಪ್ತಿಗೊಳಪಟ್ಟಿರುವ ಕುಮಾರಪಟ್ಟಣ, ನಲವಾಗಲ, ಕೋಡಿಯಾಲ ಹೊಸಪೇಟೆ, ಕವಲೆತ್ತು ಗ್ರಾಮಗಳು ಹರಿಹರ ನಗರಕ್ಕೆ ಸಮೀಪದಲ್ಲಿದ್ದು, ನಿತ್ಯ ಜೀವನೋಪಾಯಕ್ಕೆ ಬೇಕಾಗಿರುವ ಎಲ್ಲ ರೀತಿಯ ಸಾಮಗ್ರಿಗಳನ್ನು ಖರೀದಿಸಲು ಸಾಮಾನ್ಯವಾಗಿ ಹರಿಹರಕ್ಕೆ ತೆರಳುತ್ತಾರೆ.
ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಕಚೇರಿಗೆ ಬರುವ ಸಾರ್ವಜನಿಕರು, ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವ ನೌಕರರು ತೊಂದರೆ ಅನುಭವಿಸುತ್ತಿದ್ದಾರೆ. ಆದಕಾರಣ ರಾಣಿಬೆನ್ನೂರು-ಕುಮಾರಪಟ್ಟಣ ಸಿಟಿ ಬಸ್ ಸಂಚಾರ ಆರಂಭಿಸಬೇಕು ಎಂದು ಆಗ್ರಹಿಸಿ, ಪತ್ರ ಬರೆದಿರುವುದಾಗಿ ಪರಮೇಶ ಚಿನ್ನಣ್ಣನವರ, ಹನುಮಂತಪ್ಪ ಎಲ್.ಕೆ., ಮಂಜುನಾಥ ಆರ್. ಕೆರೂರು, ಲಕ್ಷ್ಮಪ್ಪ ಕರೂರು, ಪರಮೇಶ ಪೂಜಾರ, ಹಾಲೇಶಪ್ಪ ಓಲೇಕಾರ, ಮಾಲತೇಶ ಸಾಲಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಆರೋಗ್ಯ ತಪಾಸಣೆ, ಆಹಾರ ಮೇಳ
ರಾಣಿಬೆನ್ನೂರು: ಬ್ಯಾಡಗಿ ನಗರದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಜು. 13ರಂದು ಉಚಿತ ಆರೋಗ್ಯ ತಪಾಸಣೆ ಮತ್ತು ಆಹಾರ ಮೇಳ ಆಯೋಗಿಸಲಾಗಿದೆ. ಬೆಳಗ್ಗೆ 9ರಿಂದ ಮಧ್ಯಾಹ್ನ 3ರ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಆಯುರ್ವೇದ ವೈದ್ಯರು ರೋಗಗಳ ತಪಾಸಣೆ ನಡೆಸುವರು. ದೇಶೀಯ ಆಹಾರ ಬೀಜಗಳ ಮಾರಾಟ ನಡೆಯಲಿದೆ. ಕಾರ್ಯಕ್ರಮದ ಸದುಪಯೋಗ ಪಡೆಯಬೇಕು ಎಂದು ಅಧ್ಯಕ್ಷ ಚನ್ನಬಸಪ್ಪ ಕೊಂಬಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೂರಕ ಪರೀಕ್ಷೆ: 116 ವಿದ್ಯಾರ್ಥಿಗಳು ಹಾಜರು
ಹಾವೇರಿ: ಜಿಲ್ಲೆಯಲ್ಲಿ ಶುಕ್ರವಾರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯು ಜಿಲ್ಲೆಯ ಎಂಟು ಪರೀಕ್ಷಾ ಕೇಂದ್ರಗಳಲ್ಲಿ ಸುವ್ಯವಸ್ಥಿತವಾಗಿ ಜರುಗಿವೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಆರ್. ಕೊಣ್ಣೂರ ತಿಳಿಸಿದ್ದಾರೆ.ಒಟ್ಟು 135 ವಿದ್ಯಾರ್ಥಿಗಳಲ್ಲಿ 116 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 19 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿರುತ್ತಾರೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ಪರೀಕ್ಷಾ ಅಕ್ರಮಗಳು ಜರುಗಿಲ್ಲ ಹಾಗೂ ಯಾವ ವಿದ್ಯಾರ್ಥಿಯೂ ಡಿಬಾರ್ ಆಗಿರುವುದಿಲ್ಲ ಎಂದು ತಿಳಿಸಿದ್ದಾರೆ.
ಜನಸಂಖ್ಯೆ ನಿಯಂತ್ರಣಕ್ಕೆ ಶ್ರಮಿಸಿ: ಪ್ರಭಾಕರ
ಹಾವೇರಿ: ದೇಶದ ಜನಸಂಖ್ಯೆ ನಿಯಂತ್ರಿಸುವಲ್ಲಿ ಯುವ ಜನಾಂಗದ ಪಾತ್ರ ಮುಖ್ಯವಾಗಿದೆ ಎಂದು ಪ್ರೊ. ಪ್ರಭಾಕರ ಎಸ್. ಮಂಟೂರ ಹೇಳಿದರು. ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ವಾಮಿ ವಿವೇಕಾನಂದ ಯುವ ಸ್ವಯಂಸೇವಾ ಸಂಘದ ಆಶ್ರಯದಲ್ಲಿ ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮ ಜರುಗಿತು. ಉಪನ್ಯಾಸಕರಾಗಿ ಭಾಗವಹಿಸಿದ್ದ ಸಹಾಯಕ ಪ್ರಾಧ್ಯಾಪಕ ಡಾ ಲೋಕೇಶ ಸಿ.ಎಸ್, ಜನಸಂಖ್ಯಾ ಬೆಳವಣಿಗೆಯು ಸಾಮಾಜಿಕವಾಗಿ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಮತ್ತು ಸರ್ಕಾರದ ಹಲವು ಯೋಜನೆಗಳನ್ನು ಸಮರ್ಪಕವಾಗಿ ಬಳಸಿದ್ದಲ್ಲಿ ಜನಸಂಖ್ಯೆ ನಿಯಂತ್ರಣ ಸಾಧ್ಯ ಎಂದರು. ಸಹಾಯಕ ಪ್ರಾಧ್ಯಾಪಕಿ ಮಂದಾಕಿನಿ ಪಾಟೀಲ, ಜನಸಂಖ್ಯಾ ಬೆಳವಣಿಗೆಯು ಆರ್ಥಿಕವಾಗಿ ಬಹಳ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಿದರು. ಪ್ರೊ ಹಾರಾಳು ಮಹಾಬಳೇಶ್ವರ, ಶೋಭಾ ತಪಶಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವಿವೈಎಸ್‌ಎಸ್ ರಾಜ್ಯಾಧ್ಯಕ್ಷ ತೇಜಪ್ಪ ಎನ್. ಮಡಿವಾಳರ ಪ್ರಾಸ್ತಾವಿಕ ಮಾತನಾಡಿದರು. ಪೂಜಾ ಪ್ರಾರ್ಥಿಸಿದರು. ಹನುಮಂತಪ್ಪ ಈಳಿಗೇರ ಸ್ವಾಗತಿಸಿದರು. ಶಶಿಧರ ಹೊಸಳ್ಳಿ ನಿರೂಪಿಸಿದರು. ಮಲ್ಲಿಕಾರ್ಜುನ ನೆಗಳೂರು ವಂದಿಸಿದರು.
ಶಂಕುಸ್ಥಾಪನಾ ಸಮಾರಂಭ
ಹಾವೇರಿ: ನ್ಯಾಯಾಂಗ ಇಲಾಖಾ ನೌಕರರ ಭವನ ಮತ್ತು ನ್ಯಾಯಾಂಗ ಇಲಾಖಾ ನೌಕರರ ವಿವಿಧೋದ್ದೇಶಗಳ ಸಹಕಾರ ಸಂಘದ ಸಹಕಾರ ಭವನದ ಶಂಕುಸ್ಥಾಪನಾ ಸಮಾರಂಭ ಜು. 13ರ ಬೆಳಗ್ಗೆ 9ಕ್ಕೆ ನಗರದ ನೂತನ ನ್ಯಾಯಾಲಯಗಳ ಸಂಕೀರ್ಣದಲ್ಲಿ ಜರುಗಲಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಚ್.ಪಿ. ಸಂದೇಶ ಅವರು ಶಂಕುಸ್ಥಾಪನೆ ನೆರವೇರಿಸುವರು. ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಸಂಘದ ಅಧ್ಯಕ್ಷ ಶಿವರಾಜ ದುಂದೂರ ಅಧ್ಯಕ್ಷತೆ ವಹಿಸುವರು. ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರು, ಮುಖ್ಯ ನ್ಯಾಯಿಕ ದಂಡಾಧಿಕಾರಿ ನಾಗಲಿಂಗನಗೌಡ ಎಸ್. ಪಾಟೀಲ್, ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಚನ್ನಕೇಶ ರೆಡ್ಡಿ ಎಂ.ವಿ, ಪ್ರಧಾನ ದಿವಾಣಿ ನ್ಯಾಯಾಧೀಶ ಶ್ರೀಪಾದ ಎನ್, ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಎಸ್.ಬಿ. ಕೆಂಭಾವಿ, ಎಚ್.ಜಿ. ಹೊನ್ನ ಗಂಗಾಧರಯ್ಯ ಹಾಗೂ ಆರ್.ಬಿ. ದೇಶಪಾಂಡೆ ಪಾಲ್ಗೊಳ್ಳುವರು.