ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಜಾತಿ ಆಧಾರದಲ್ಲಿ ನ್ಯಾಯ ಒದಗಿಸಿ

Lingaraj Badiger
Updated On : 15 Jul 2013, 11:47 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜು. 14
ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಸರ್ಕಾರ ಇಂದಿಗೂ ಜೋಳಿಗೆ ಭಿಕ್ಷೆಯಿಂದಲೇ ಬದುಕು ನಡೆಸುತ್ತಿರುವ ಜಂಗಮರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದು, ಜಾತಿಗಳ ಆಧಾರದಲ್ಲಿ ಸಾಮಾಜಿಕ ನ್ಯಾಯ ಪರಿಗಣಿಸಿ ನ್ಯಾಯ ಒದಗಿಸಿ ಎಂದು ಜೋತಿಷ್ಯರತ್ನ ಪುರಸ್ಕೃತ ಗಂಗಾಧರಯ್ಯ ಹಿರೇಮಠ ಆಗ್ರಹಿಸಿದರು.
ಭಾನುವಾರ ಸಂಜೆ ಪಟ್ಟಣದ ವೀರ ಮಾಹೇಶ್ವರ ಪತ್ತಿನ ಸಹಕಾರ ಸಂಘದಲ್ಲಿ ಪಂಚಾಚಾರ್ಯ ಯುವ ವೇದಿಕೆ ಜಂಗಮ ಸಮಾಜದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಾರ್ವತ್ರಿಕ ಸತ್ಯವನ್ನು ವಿಶ್ವಕ್ಕೆ ಸಾರಿ ಹೇಳಿದ ಆದಿ ರೇಣುಕಾಚಾರ್ಯರು ಮಹಾ ಮಾನವತಾವಾದಿ ಹಾಗೂ ಧರ್ಮಶ್ರೇಷ್ಟತೆಯನ್ನು ಪ್ರತಿಪಾದನೆ ಮಾಡಿದ್ದಾರೆ ಎಂದರು. ಅವರ ಅನುಯಾಯಿಗಳಾಗಿರುವ ಜಂಗಮ ವರ್ಗ ಇಂದಿಗೂ ಅವರು ಹಾಕಿಕೊಟ್ಟ ಹಾದಿಯಲ್ಲೇ ನಡೆಯುತ್ತಾ ಬಂದಿದೆ ಎಂದರು.
ನುಂಗಲಾರದ ತುತ್ತು: ವೀರಶೈವ ಪದ್ಧತಿ ಮೇಲೆ ನಂಬಿಕೆಯಳ್ಳವರು ಜಂಗಮರಿಗೆ ಗುರುವಿನ ಸ್ಥಾನ ನೀಡಿದ್ದಾರೆ. ಆದರೆ, ಅದನ್ನೇ ಹಿನ್ನೆಲೆಯನ್ನಾಗಿಟ್ಟುಕೊಂಡ ಸರ್ಕಾರ ಬಹುಸಂಖ್ಯಾತ ವೀರಶೈವರ ಸಾಲಿನಲ್ಲಿ ಜಂಗಮರನ್ನು ನಿಲ್ಲಿಸುವ ಮೂಲಕ ಮೇಲ್ವರ್ಗಕ್ಕೆ ಸೇರಿದವರೆಂದು ಪರಿಗಣಿಸುತ್ತಿರುವುದು ಸಮಾಜಕ್ಕೆ ನುಂಗಲಾರದ ತುತ್ತಾಗಿದೆ ಎಂದರು.
ಖಂಡನೆ: ಜಂಗಮರನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಕುರಿತ ಕಡತಗಳು ಸರ್ಕಾರಿ ಕಚೇರಿಗಳಲ್ಲಿ ಮಾಯವಾಗಿವೆ ಎಂದು ಆರೋಪಿಸಿದ ಅವರು, ಬೇಡ ಜಂಗಮರೆಂದು ಪರಿಶಿಷ್ಟ ಜಾತಿ ವ್ಯಾಪ್ತಿಗೊಳಪಡಿಸಿದ್ದಲ್ಲದೇ ಅದೂ ಬಿಜಾಪುರ ಜಿಲ್ಲೆಯಲ್ಲಿದ್ದವರಿಗಷ್ಟೇ ಸೌಲಭ್ಯಗಳನ್ನು ನೀಡುತ್ತಿರುವುದನ್ನು ಖಂಡಿಸಿದರು.
ಎಸ್.ಎಸ್. ಹಿರೇಮಠ ಮಾತನಾಡಿ, ಜಂಗಮ ಸಮಾಜವು ಇಂದಿಗೂ ವೈದಿಕ ಪಾಠಶಾಲೆಗಳು ಸರ್ಕಾರದ ಅನುದಾನವಿಲ್ಲದೇ ಬಡ ಜಂಗಮ ವಿದ್ಯಾರ್ಥಿಗಳಿಗೆ ವೈದಿಕ ಉಪನಿಷತ್ತು ಹಾಗೂ ಜ್ಯೋತಿಷ್ಯಗಳನ್ನು ತಿಳಿಸಿಕೊಡುವ ಮೂಲಕ ಇಂದಿಗೂ ಪೌರೋಹಿತ್ಯ ಜೀವಂತವಾಗಿಟ್ಟುಕೊಂಡಿದ ಜಂಗಮ ಸಮಾಜ ರಾಜ್ಯದಲ್ಲಿ 65 ಲಕ್ಷ ಜನಸಂಖ್ಯೆಯಿದೆ. ಆದರೆ ಸಂಘಟನೆ ಕೊರತೆಯಿಂದ ಈವರೆಗೂ ಸರ್ಕಾರ ಸೌಲಭ್ಯಗಳು ಸಮಾಜಕ್ಕೆ ಲಭ್ಯವಾಗಿಲ್ಲ ಎಂದರು.
ಪಂಚಾಚಾರ್ಯ ಯುವವೇದಿಕೆ ಅಧ್ಯಕ್ಷ ಶರಣಬಸಯ್ಯ ಬೂದಿಹಾಳಮಠ ಮಾತನಾಡಿ, ಸಮಾಜದಲ್ಲಿನ ಸಾಕಷ್ಟು ಪ್ರತಿಭಾವಂತರು ಆರ್ಥಿಕ ಕೊರತೆಯಿಂದ ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ. ಶೈಕ್ಷಣಿಕ ಸಹಾಯಕ್ಕಾಗಿ ಯುವವೇದಿಕೆ ತಾಲೂಕಿನ ಪ್ರತಿಭಾವಂತರನ್ನು ಗುರುತಿಸಿ, ಆರ್ಥಿಕ ಸಹಾಯ ಹಾಗೂ ಪ್ರೋತ್ಸಾಹ ನೀಡುವ ಮಹತ್ವದ ಕಾರ್ಯಕ್ರಮ ಹಾಕಿಕೊಂಡಿದೆ. ಪ್ರತಿವರ್ಷವೂ ಪ್ರತಿಭಾ ಪುರಸ್ಕಾರ ನೀಡಲಾಗುವುದೆಂದು ಸಭೆಯಲ್ಲಿ ತಿಳಿಸಿದರು.
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಜಯಶೀಲಾ ಹಿರೇಮಠ, ವಿಜಯಕುಮಾರ ಹಿರೇಮಠ, ಗುಣಾ ಕಂಬಾಳಿಮಠ, ಸರೋಜಾ ಮುಂದಿನಮನಿ, ಪೂಜಾ ಹಿರೇಮಠ, ತೇಜಸ್ವಿನಿ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.
ಯುವ ವೇದಿಕೆಯ ಗೌರವಾಧ್ಯಕ್ಷ ಎಂ.ಎಂ. ಹಿರೇಮಠ, ಮುಖಂಡರಾದ ಸಿ.ಆರ್. ಹಿರೇಮಠ, ಕೆ.ಆರ್. ಹಿರೇಮಠ, ಶಿವಲೀಲಾ ಹಿರೇಮಠ, ಬಿ.ಜಿ. ಆರಾಧ್ಯಮಠ, ಮುತ್ತು ಹಿರೇಮಠ, ವಿ.ಸಿ. ಸೊಪ್ಪಿನಮಠ, ರತ್ನವ್ವ ಬೂದಿಹಾಳಮಠ, ಗಿರೀಜಾ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು. ರಾಜಶೇಖರ ಹಾಲೇವಾಡಿಮಠ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement