ಗೋವಿನ ಜೋಳಕ್ಕೆ ರೋಗ: ಬೆಳೆಗಾರರು ಚಿಂತಾಕ್ರಾಂತ
ಹಿರೇಕೆರೂರು: ತಾಲೂಕಿನ ಹಲವಾರು ಗ್ರಾಮಗಳಲ್ಲಿ ಬೆಳದಿರುವ ಒಂದುವರೆ ತಿಂಗಳ ಗೋವಿನ ಜೋಳ ಬೆಳೆಗೆ ರೋಗ ಬಿದ್ದು ಬೆಳವಣಿಗೆ ಕುಂಠಿತವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಈ ಬಾರಿ ಉತ್ತಮ ಮಳೆ ಬಿದ್ದಿದ್ದು ಸಮಯಕ್ಕೆ ಸರಿಯಾಗಿ ಬಿತ್ತನೆ ಮಾಡಲಾಗಿತ್ತು. ಬೆಳೆ ಉತ್ತಮ ಮೊಳಕೆಯೊಡೆದು ಒಂದುವರೆ ತಿಂಗಳ ಬೆಳೆಗೆ ರೋಗಭಾದೆಯಾಗಿದ್ದು, ರೈತರು ಬೆಳೆ ಹಾನಿಯಾಗುವ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ.
ಪರಿಶೀಲನೆ, ಚರ್ಚೆ: ಈ ವಿಷಯ ತಿಳಿದೊಡನೆ ಶಾಸಕ ಯು.ಬಿ. ಬಣಕಾರ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ತಾಲೂಕಿನ ಹೊಸಳ್ಳಿ, ಇಂಗಳಗೊಂದಿ, ತಾವರಗಿ, ಗುಂಡಗಟ್ಟಿ, ಶಿರಗಂಬಿ, ಹಿರೇಕಬ್ಬಾರ, ಚಿಕ್ಕಬ್ಬಾರ, ಗಲಗಿನಕಟ್ಟಿ ಇನ್ನಿತರ ಗ್ರಾಮಗಳಿಗೆ ಭೇಟಿ ನೀಡಿ ಹಾನಿಗೊಳಗಾದ ರೈತರ ಹತ್ತಿ ಹಾಗೂ ಗೋವಿನ ಜೋಳದ ಬೆಳೆಗಳನ್ನು ವೀಕ್ಷಿಸಿ ರೈತರೊಂದಿಗೆ ಚರ್ಚಿಸಿದರು.
ಗೋಳು ತೋಡಿಕೊಂಡ ರೈತರು: ಕೃಷಿ ಇಲಾಖೆಯ ಹಾಗೂ ಕೆಲ ಖಾಸಗಿ ಬೀಜ ಮಾರಾಟ ಅಂಗಡಿಗಳಿಂದ ಗೋವಿನ ಜೋಳದ ತಳಿ ಸಿಪಿ818 ಹಾಗೂ ಬಿಟಿ ಹತ್ತಿ ಬೀಜಿಗಳಲ್ಲಿ ಕಲಬರಕೆ ಬೀಜಗಳನ್ನು ಪೂರೈಸಲಾಗಿದ್ದರಿಂದ ಕಳಪೆ ಬೀಜಗಳು ಸರಿಯಾಗಿ ಬೆಳೆಯದೆ ರೋಗ ಭಾಧೆಗೆ ತುತ್ತಾಗಿವೆ. ಪ್ರಸಕ್ತ ಸಾಲಿನ ಜೂನ್ ಮೊದಲ ವಾರದಿಂದ ಉತ್ತಮ ಮಳೆ ಕಾಲಕ್ಕೆ ಕಾಲಕ್ಕೆ ಆಗಿದೆ. ಅದರಂತೆ ರೈತರು ತಾವು ಸಂಗ್ರಹಿಸಿದ ತಿಪ್ಪೆ ಸಗಣಿ ಗೊಬ್ಬರ ಹಾಗೂ ರಸಾಯನಿಕ ಗೊಬ್ಬರಗಳನ್ನು ಹಾಕಿ ಬಿತ್ತನೆ ಮಾಡಲಾಗಿತ್ತು. ಔಷಧಿಗಳನ್ನು ಸಿಂಪಡಿಸಲಾಗಿದೆ. ಆದರೂ ಬೆಳೆಗಳು ಹಾನಿಯಾಗುತ್ತಿವೆ ಎಂದು ರೈತರು ಗೋಳು ತೋಡಿಕೊಂಡರು.
ಕೃಷಿ ಅಧಿಕಾರಿ ತರಾಟೆಗೆ: ಆಗ ಶಾಸಕರು ಈ ಕುರಿತ ವಿಷಯ ತಿಳಿದುಕೊಳ್ಳಲು ಕೃಷಿ ಸಹಾಯಕರನ್ನು ಕೇಳಿದಾಗ ರೈತರು ಸಮಯಕ್ಕೆ ಸರಿಯಾಗಿ ಬಿತ್ತನೆ ಕೈಗೊಂಡಿಲ್ಲ ಹಾಗೂ ಬೆಳೆ ರಕ್ಷಣೆ ಕ್ರಮಗಳಾದ ಗೊಬ್ಬರ ಹಾಗೂ ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ಸಿಪಂಡಿಸಿಲ್ಲ. ಇದರಿಂದಾಗಿ ಬೆಳೆಗಳಿಗೆ ಕಾಂಡಕೊರಕ, ಹುಳುಗಳ ಭಾಧೆ ಉಂಟಾಗಿದೆ ಎಂದು ತಿಳಿಸಿದಾಗ ರೈತರು ಕೃಷಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಶಾಸಕರ ಸೂಚನೆ: ಶಾಸಕ ಯು.ಬಿ. ಬಣಕಾರ ಮಾತನಾಡಿ, ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಹಾನಿಗೊಳಗಾದ ಗ್ರಾಮಗಳ ರೈತರ ಜಮೀನುಗಳಿಗೆ ತೆರಳಿ ಬೆಳಹಾನಿ ಬಗ್ಗೆ ಸಮಗ್ರವಾಗಿ ಪರೀಶಿಲಿಸಿ ರೋಗ ಭಾದೆ ಆದ ಬಗ್ಗೆ ಪರೀಶಿಲನೆ ನಡೆಸಿ ವರದಿ ನೀಡಬೇಕು. ಕಳಪೆ ಬೀಜಗಳನ್ನು ಮಾರಾಟ ಮಾಡಿದ್ದು ದೃಢಪಟ್ಟರೆ ಅಂತಹ ಬೀಜ ಕಂಪಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದರು. ಸಂದರ್ಭ ಬಂದರೆ ಕಳಪೆ ಬೀಜ ವಿತರಿಸಿದ ಬೀಜ ಕಂಪನಿಗಳಿಂದಲೇ ರೈತರಿಗೆ ಪರಿಹಾರ ಧನ ಕೊಡಿಸಬೇಕು ಎಂದು ತಾಕೀತು ಮಾಡಿದರು.