ತಂಗಡಗಿ ಕೈಬಿಟ್ಟರೆ ಪ್ರತಿಭಟನೆ
ಹಾವೇರಿ: ಭೋವಿ ಸಮಾಜದ ಶಿವರಾಜ ತಂಗಡಗಿ ಅವರನ್ನು ಸಂಪುಟದಿಂದ ಕೈಬಿಟ್ಟರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅಖಿಲ ಕರ್ನಾಟಕ ಭೋವಿ ವಡ್ಡರ ಸಂಘದ ಹಾವೇರಿ ಜಿಲ್ಲಾ ಘಟಕ ಎಚ್ಚರಿಸಿದೆ. ಸಚಿವರ ಸಹೋದರ ನಿರ್ಮಿಸಿರುವ ಕಟ್ಟಡದ ವಿಷಯದಲ್ಲಿ ಅಕ್ರಮ ಎಸಗಿದ್ದರೆ ಆ ಕುರಿತಂತೆ ತನಿಖೆ ನಡೆಸಲಿ. ಅಕ್ರಮ ಶಾಬೀತಾದರೆ ಕಾನೂನು ಕ್ರಮಕೈಗೊಳ್ಳಲಿ, ಅದನ್ನು ಬಿಟ್ಟು ತಂಗಡಿಗಿಯವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂಬ ಬೇಡಿಕೆ ಸರಿಯಲ್ಲ ಎಂದು ಸಂಘ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದೆ. ಕೊಪ್ಪಳ ಜಿಲ್ಲಾಧಿಕಾರಿ ವರ್ಗಾವಣೆ ಸರ್ಕಾರಿ ನಿಯಮಾವಳಿ ಪ್ರಕಾರವೇ ನಡೆದಿದೆ. ಜಿಲ್ಲಾಧಿಕಾರಿಯ ವರ್ಗಾವಣೆವನ್ನೇ ಮುಂದಿಟ್ಟುಕೊಂಡು ಶೋಷಿತ ಸಮುದಾಯದವೊಂದರ ರಾಜಕೀಯ ಪ್ರಾತಿನಿಧ್ಯವನ್ನು ಕಸಿದು ಕೊಳ್ಳುವುದು ಸರಿಯಲ್ಲ ಎಂದು ಸಮರ್ಥಿಸಿಕೊಂಡಿದೆ. ಅಧಿಕಾರ ವಂಚಿತ ಕೆಲವು ಕಾಂಗ್ರೆಸ್ ನಾಯಕರು ಷಡ್ಯಂತ್ರದಿಂದ ತಂಗಡಗಿಯವರ ಮೇಲೆ ಸುಳ್ಳು ಆರೋಪ ಮಾಡಿದ್ದು, ತಂಗಡಗಿ ಅವರನ್ನು ಸಮಪುಟದಿಂದ ಕೈಬಿಡಲು ಮುಂದಾದರೇ ಹೋರಾಟ ಮಾಡಬೇಕಾಗುತ್ತದೆಂದು ಜಿಲ್ಲಾ ಸಂಘದ ಅಧ್ಯಕ್ಷ ರವಿ ಪೂಜಾರ ಎಚ್ಚರಿಕೆ ನೀಡಿದ್ದಾರೆ.
ಅಭಿವೃದ್ಧಿಗೆ ಪೂರಕ ಬಜೆಟ್
ಹಾನಗಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪರ ಹಾಗೂ ಕೃಷಿಕರಿಗೆ ಹೆಚ್ಚು ಪ್ರಾಧಾನ್ಯ ನೀಡಿದ ಬಜೆಟ್ ಮಂಡಿಸಿ ರಾಜ್ಯದ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಹಾವೇರಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಸಂತಸ ವ್ಯಕ್ತಪಡಿಸಿದರು. ಬಡ್ಡಿ ರಹಿತ ಕೃಷಿ ಸಾಲ, ಕೃಷಿ ಬೆಳೆಗಳಿಗೆ ಬೆಲೆ ನಿಗದಿಗೆ ಆಯೋಗ ರಚನೆ, ನಮ್ಮ ಹೊಲ ನಮ್ಮ ರಸ್ತೆ ಯೋಜನೆ, ಶುದ್ಧ ಕುಡಿಯುವ ನೀರು ಯೋಜನೆಗಳು, ದೊಡ್ಡ ಕೆರೆಗಳ ಹೂಳೆತ್ತುವುದು ಸೇರಿದಂತೆ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.