ಫಲಾನುಭವಿಯಿದ್ದರೂ ಪಡಿತರ ವಿತರಣೆ ಇಲ್ಲ!
ಹಾವೇರಿ: ಬಡಬಗ್ಗರ ಹಸಿವು ನೀಗಿಸುವ ಅನ್ನಭಾಗ್ಯ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆಯೇನೋ ನಿಜ. ಆದರೆ, ಈ ಯೋಜನೆ ಅನುಷ್ಠಾನಗೊಳಿಸಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಆವಶ್ಯಕ ಸೌಲಭ್ಯ ಒದಗಿಸಿಕೊಡುವಲ್ಲಿ ಎಡವಿದ್ದ ಪರಿಣಾಮ ಸಹಸ್ರಾರು ಕುಟುಂಬಗಳು ಪಡಿತರ ಚೀಟಿ ಪಡೆಯಲು ಪರದಾಡುವಂತಾಗಿದೆ.
ಇದಕ್ಕೆ ಹಾವೇರಿ ಜಿಲ್ಲೆಯೇ ಅತ್ಯುತ್ತಮ ಉದಾಹರಣೆಯಾಗಿದೆ. ಜಿಲ್ಲೆಗೆ ಬೇಕಾಗಿರುವಷ್ಟು ಪಡಿತರ ದವಸ-ಧಾನ್ಯ ಬಂದು ಗೋದಾಮುಗಳಲ್ಲಿ ಸಂಗ್ರಹಣೆಗೊಂಡಿದೆ. ಆದರೆ, ಫಲಾನುಭವಿಗಳಿಗೆ ವಿತರಿಸುವಂತೆ ಆಯಾ ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಮಾಡಲು ಸಾಧ್ಯವಾಗದೆ ಆಹಾರ ಇಲಾಖೆ ಪೇಚಿಗೆ ಸಿಲುಕಿ ಹಾಕಿಕೊಂಡಿದೆ.
ಎಎವೈ (ಅಂತ್ಯೋದಯ), ಬಿಪಿಎಲ್, ಎಪಿಎಲ್ ಕಾರ್ಡ್ಗಳ ಲಕ್ಷಾಂತರ ಫಲಾನುಭವಿಗಳನ್ನು ಈಗಾಗಲೇ ಗುರುತಿಸಲಾಗಿದೆಯಾದರೂ ಅವರುಗಳಿಗೆ ಪಡಿತರ ಚೀಟಿಗಳನ್ನು ಮಾತ್ರ ವಿತರಿಸಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಸಾಧ್ಯವಾಗಿಲ್ಲ ಎಂಬುದು ಕಟುವಾಸ್ತವ.
ರು. 45 ಸಾವಿರಕ್ಕೂ ಹೆಚ್ಚು: ಅನ್ನಭಾಗ್ಯ ಯೋಜನೆ ಲಾಭ ಪಡೆಯಲು ಹಾವೇರಿ ಜಿಲ್ಲೆಯ ಏಳು ತಾಲೂಕುಗಳಿಂದ ಅರ್ಜಿ ಸಲ್ಲಿಸುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹನುಮಂತನ ಬಾಲದಂತೆ ಬೆಳೆಯುತ್ತಲೇ ಸಾಗಿದೆ. ಈವರೆಗೂ 45 ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗದೇ ಬಾಕಿ ಉಳಿದುಕೊಂಡಿವೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯೂ
ಇದಕ್ಕೆ ಒಂದು ಕಾರಣವಾಗಿದೆ. ಇರುವ ಸಿಬ್ಬಂದಿಯೂ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂಬ ಆರೋಪಗಳು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ. ಇದರಿಂದಾಗಿ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ನಿತ್ಯವೂ ಪಡಿತರ ಚೀಟಿಗಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಎಡತಾಕುವಂತಾಗಿದೆಯಲ್ಲದೆ, ಆಡಳಿತ ಯಂತ್ರದ ಕಾರ್ಯ ವೈಖರಿಗೆ ಹಿಡಿಶಾಪ ಹಾಕುವಂತಹ ಸನ್ನಿವೇಶ ನಿರ್ಮಾಣವಾಗಿದೆ.
ಕೈಗೆ ಬಂದ ತುತ್ತು: ಪಡಿತರ ಚೀಟಿ ವಿತರಿಸುವ ವ್ಯವಸ್ಥೆಯಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದೇ ಇರುವ ಹಿನ್ನೆಲೆಯಲ್ಲಿ ಅನ್ನಭಾಗ್ಯ ಯೋಜನೆ ಬಡಬಗ್ಗರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಜಿಲ್ಲೆಯೊಂದರಲ್ಲೇ ಲಕ್ಷಾಂತರ ಕುಟುಂಬಗಳು ಈ ತಿಂಗಳ ಪಡಿತರ ಪಡೆಯಲು ಸಾಧ್ಯವಾಗದೆ ಇರುವಂತಹ ಸನ್ನಿವೇಶ ನಿರ್ಮಾಣಗೊಂಡಿದೆ. ಜಿಲ್ಲೆಯ ಏಳು ತಾಲೂಕಿನಿಂದ ಒಟ್ಟು 2.20 ಲಕ್ಷ ಪಡಿತರ ಚೀಟಿಗಳು ಪರಿಷ್ಕೃತ (ರಿನ್ಯೂವಲ್) ಆಗಬೇಕಿದ್ದು ಈವರೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ 60 ಸಾವಿರ ಚೀಟಿಗಳನ್ನು ರಿನ್ಯೂವಲ್ ಮಾಡಿ ಆಯಾ ಫಲಾನುಭವಿಗಳಿಗೆ ವಿತರಿಸಿದೆ. ರಿನ್ಯೂವಲ್ ಆಗಿರುವ ಪಡಿತರದಾರರಿಗೆ ಅನ್ಯಭಾಗ್ಯದ ಸೌಭಾಗ್ಯ ಲಭಿಸಿದೆ. ಮಿಕ್ಕ 1.60 ಲಕ್ಷ ಪಡಿತರದಾರರು ಮಾತ್ರ ಯಾವಾಗ ತಮಗೆ ಪರಿಸ್ಕೃತ ಪಡಿತರ ಚೀಟಿ ಕೈಸೇರುವುದೋ ಎಂಬ ಚಿಂತೆಯಲ್ಲಿದ್ದಾರೆ.
ಸರ್ವರ್ ಸಮಸ್ಯೆ: ಫಲಾನುಭವಿಗಳಿಗೆ ಪಡಿತರ ಚೀಟಿ ತಯಾರಿಸಿಕೊಡುವ ಜವಾಬ್ದಾರಿಯನ್ನು ಸರ್ಕಾರ, ಖಾಸಗಿ ಕಂಪನಿಗಳಿಗೆ ವಹಿಸಿಕೊಟ್ಟಿದೆ. ಖಾಸಗಿ ಕಂಪನಿಗಳು ಹೊಂದಿರುವ ತಂತ್ರಜ್ಞಾನದಿಂದ ಲಕ್ಷಾಂತರ ಜನರ ತ್ವರಿತಗತಿಯಲ್ಲಿ ಪಡಿತರ ಚೀಟಿಗಳನ್ನು ತಯಾರಿಸಿಕೊಡುವುದು ಅಸಾಧ್ಯದ ಮಾತಾಗಿದೆ. ಇದರಿಂದಾಗಿ, ನಿತ್ಯವೂ ನೂರಾರು ಜನರು ಪಡಿತರ ಚೀಟಿಗಾಗಿ ಆಯಾ ಕೇಂದ್ರಗಳಿಗೆ ಭೇಟಿ ನೀಡಿ ಬರಿಗೈಯಲ್ಲಿ ಮರುಳುತ್ತಿರುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ. ತಿಂಗಳ ಅವಧಿಯಲ್ಲಿ ರಿನ್ಯೂವಲ್ ಕಾರ್ಡ್ಗಳನ್ನು ತಯಾರಿಸಿಕೊಡಬೇಕಾದರೆ ದಿನವೊಂದಕ್ಕೆ ಕನಿಷ್ಠ 500ಕ್ಕೂ ಹೆಚ್ಚು ಪಡಿತರ ಕಾರ್ಡ್ಗಳ್ನು ತಯಾರಿಸುವುದು ಅತಿ ಆವಶ್ಯಕವಾಗಿದೆ. ಆದರೆ, ಸರ್ವರ್ ಸಮಸ್ಯೆ ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಗ್ರಾಮೀಣ ಭಾಗದ ಕೇಂದ್ರಗಳಲ್ಲಿ ನಿತ್ಯವೂ ಒಂದೆರಡು ಕಾರ್ಡ್ಗಳನ್ನು ತಯಾರಿಸುವಂತಾಗಿದೆ ಎಂದು ಖಾಸಗಿ ಕಂಪನಿ ಸಿಬ್ಬಂದಿಯೊಬ್ಬರು ಕನ್ನಡಪ್ರಭದೊಂದಿಗೆ ಮಾತನಾಡಿ ತಿಳಿಸಿದ್ದಾರೆ. ಸಮಾಜದ ಕಡು ಬಡವನ ಹಸಿವು ನಿಗಿಸಬೇಕೆಂಬ ಉದ್ದೇಶದಿಂದ ಆರಂಭಿಸಲಾಗಿರುವ ಅನ್ಯಭಾಗ್ಯ ಯೋಜನೆಯ ಲಾಭ ಅರ್ಹ ಫಲಾನುಭವಿಗೆ ಆದಷ್ಟು ಶೀಫ್ರದಲ್ಲೇ ಲಭಿಸುವ ಮೂಲಕ ಈ ಯೋಜನೆಗೆ ಸಾರ್ಥಕತೆ ಬರಬೇಕಾದರೆ, ತಕ್ಷಣ ಈ ಯೋಜನೆ ಅನುಷ್ಠಾನಗೊಳಿಸಲು ಬೇಕಾಗಿರುವ ಆವಶ್ಯಕ ಸಿಬ್ಬಂದಿ ಹಾಗೂ ಮೂಲ ಸೌಕರ್ಯ ಒದಗಿಸಿಕೊಡಲು ಸರ್ಕಾರ ಹಾಗೂ ಈ ಭಾಗದ ಜನಪ್ರತಿನಿಧಿಗಳು ಮುಂದಾಬೇಕಿದೆ.
ಪಡಿತರ ಚೀಟಿಗಳ ರಿನ್ಯೂವಲ್ಗಾಗಿ ಜಿಲ್ಲೆಯಿಂದ ಒಟ್ಟು 2.20 ಲಕ್ಷ ವಿವಿಧ ಕಾರ್ಡ್ಗಳು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ಬಂದಿವೆ. ಈ ಪೈಕಿ 60 ಕಾರ್ಡ್ಗಳನ್ನು ರಿನ್ಯೂವಲ್ ಮಾಡಿ ಫಲಾನುಭವಿಗಳಿಗೆ ವಿತರಿಸಲಾಗಿದೆ. ಸರ್ವರ್ ಸಮಸ್ಯೆಯಿಂದಾಗಿ ಕಾರ್ಡ್ಗಳನ್ನು ಆದಷ್ಟು ಶೀಫ್ರದಲ್ಲೇ ತಯಾರಿಸಿಕೊಡಲು ಸಾಧ್ಯವಾಗುತ್ತಿಲ್ಲ. ಈ ವಿಷಯ ಸರ್ಕಾರದ ಗಮನಕ್ಕೂ ತರಲಾಗಿದೆ. ರಾಜ್ಯದ ಆಯಾ ಜಿಲ್ಲೆಗಳಲ್ಲಿ ಆದಷ್ಟು ಶೀಫ್ರದಲ್ಲೇ ಪಡಿತರ ಕಾರ್ಡ್ಗಳನ್ನು ತಯಾರಿಸಿಕೊಡಲು ಅನುಕೂಲವಾಗುವಂತೆ ಜಿಲ್ಲೆಗೊಂದು ಪ್ರತ್ಯೇಕ ಸರ್ವರ್ ಅಳವಡಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಆದಷ್ಟು ಶೀಫ್ರದಲ್ಲೇ ಈ ಸಮಸ್ಯೆಗೆ ಪರಿಹಾರ ದೊರಕಲಿದೆ.
- ಕೆ.ವಿ. ಮದುಸೂಧನ್
ಉಪನಿರ್ದೇಶಕರು
-ಬಿ.ಕೆ. ಮಹೇಂದ್ರ