ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಾಂಕ್ರಾಮಿಕ ರೋಗಗಳ ತಾಣವಾದ ಬಂಕಾಪುರ

Lingaraj Badiger
Updated On : 16 Jul 2013, 11:26 am

- ಬಸವರಾಜ ಹಿರೇಮಠ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಜು. 15
ದಿನದಿಂದ ದಿನಕ್ಕೆ ಡೆಂಘೀ ಹಾಗೂ ವಿವಿಧ ಮಾರಕ ರೋಗಗಳು ಹರಡುತ್ತಿದ್ದು, ತಾಲೂಕಿನ ಬಂಕಾಪುರದಲ್ಲಿ ಅಸ್ವಚ್ಛತೆ ಕಂಡು ಬರುತ್ತಿದ್ದು, ಬಂಕಾಪುರ ಸಾಂಕ್ರಾಮಿಕ ರೋಗಗಳ ಉತ್ಪಾದನಾ ಕೇಂದ್ರವಾದಂತಾಗಿದೆ.
ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಕಂಡಲ್ಲಿ ಕಸದ ರಾಶಿ.. ರಸ್ತೆಯಲ್ಲೇ ಸತ್ತು ಬಿದ್ದ ಹಂದಿಗಳು.. ಗಲ್ಲಿ, ಗಲ್ಲಿಗಳಲ್ಲಿ ಹರಡಿರುವ ದುರ್ವಾಸನೆ... ಇಲ್ಲಿ ಅಸ್ವಚ್ಛತೆಯೇ ಕಾಣುತ್ತಿದೆ. ಸ್ಥಳೀಯ ಸರ್ಕಾರ ಪುರಸಭೆ ಇದ್ದರೂ, ಆಟಕುಂಟು, ಲೆಕ್ಕಕ್ಕಿಲ್ಲ. ಕುಂಭಕರ್ಣನ ನಿದ್ರೆಯಲ್ಲಿ ಮುಖ್ಯಾಧಿಕಾರಿಗಳು.. ಜನಸಂಖ್ಯೆ ಅನುಗುಣವಾಗಿ ಕನಿಷ್ಠ ಮೂಲ ಸೌಕರ್ಯವೂ ಇಲ್ಲದೇ ಜನರು ಪರದಾಡುವ ಸ್ಥಿತಿ ಇದೆ. ಪಟ್ಟಣದಲ್ಲೆಡೆ ಕೊಳಚೆ ತುಂಬಿ ದುರ್ವಾಸನೆ ನೀಡುತ್ತಿರುವ ಚರಂಡಿಗಳ ಸ್ವಚ್ಛತೆಗೆ ಪುರಸಭೆ ಮುಂದಾಗಿಲ್ಲ. ತೆಗ್ಗು-ದಿನ್ನೆಗಳಿಂದ ಕೂಡಿದ ರಸ್ತೆಗಳ ಸುಧಾರಣೆ ಅಷ್ಟಕಷ್ಟೇ.
ಚರಂಡಿ ಕಾಮಗಾರಿ ಕಳಪೆ: ಲಕ್ಷಾಂತರ ರು.ಗಳ ವೆಚ್ಚದಲ್ಲಿ ನಿರ್ಮಾಣಗೊಂಡ ಚರಂಡಿಗಳ ಕಾಮಗಾರಿ ಕಳಪೆಯಿಂದ ಕೂಡಿವೆ. ಉಪಯೋಗಕ್ಕೆ ಬಾರದ ಸ್ಥಳಗಳಲ್ಲಿ ಚರಂಡಿ ನಿರ್ಮಾಣ. ಚರಂಡಿ ನಿರ್ಮಾಣದ ಹೆಸರಿನಲ್ಲಿ ಸಾಕಷ್ಟು ಅವ್ಯವಹಾರ ನಡೆದು ಹೋದ ಪರಿಣಾಮ ನಿರ್ಮಿಸಿಗೊಂಡ ಚರಂಡಿಯಲ್ಲಿಂತೂ ಇದೀಗ ಮಳೆ ನೀರು ಹರಿದು ಹೋಗುತ್ತಿಲ್ಲ.
ಸ್ವಚ್ಛತೆಗೆ ನಿರ್ಲಕ್ಷ್ಯ: ದುಸ್ಥಿತಿಯಲ್ಲಿರುವ ಚರಂಡಿಗಳ ಸ್ವಚ್ಛತೆಯಂತೂ ಕನಸಿನ ಮಾತು. ಹಂದಿಗಳು ಸತ್ತು ಬಿದ್ದು ಗಬ್ಬು ದುರ್ವಾಸನೆ. ಇತ್ತ ಸರ್ಕಾರದ ಮಂತ್ರಿ-ಮಹೋದಯರು, ಸಭೆ-ಸಮಾರಂಭಗಳಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಗಂಟೆಗಟ್ಟಲೇ ಭಾಷಣ ಮಾಡಿ ಲಕ್ಷಾಂತರ ರು.ಗಳ ಅನುದಾನ ನೀಡಿದ್ದಾಗಿ ಹೇಳುತ್ತಾರೆ. ಇಲ್ಲಿ ಸ್ವಚ್ಛತೆಗೆ ನಿರ್ಲಕ್ಷ್ಯ ಮಾಡುತ್ತಿರುವ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಐತಿಹಾಸಿಕ ಬಂಕಾಪುರ ಪಟ್ಟಣವು ಸಮಸ್ಯೆಗಳಲ್ಲಿ ಮುಂದುವರಿದು, ಅಭಿವೃದ್ಧಿಯಲ್ಲಿ ಹಿಂದುಳಿಯುತ್ತಿದೆ. ಸುಂಕದಕೇರಿ, ಹಳ್ಳಿಕೇರಿ ಬಸವಣ್ಣ ದೇವಸ್ಥಾನದ ರಸ್ತೆಗಳು ತೆಗ್ಗು, ದಿನ್ನೆಗಳಿಂದ ಕೂಡಿವೆ. ಇಲ್ಲಿ ಜನರು ಓಡಾಟ ಹರಸಾಹಸ ಪಡುವಂತಾಗಿದೆ.
ರಸ್ತೆ ಮೇಲೆ ಸತ್ತ ಹಂದಿಗಳು: ಕೊಟ್ಟಿಗೇರಿ ರಸ್ತೆ ಮೇಲೆ ಹಂದಿ ಸತ್ತು ಮೂರು ದಿನ ಗತಿಸಿದರೂ ಹೊತ್ತು ಹಾಕುವರಿಲ್ಲದೇ ಸಾರ್ವಜನಿಕರೇ ಊರು ಹೊರಗೆ ಎತ್ತಿ ಹಾಕಿದ ಪ್ರಸಂಗ ನಡೆದಿವೆ. ಹಂದಿ ಸತ್ತು ದುರ್ವಾಸನೆಯ ವಿಷಯ ಪುರಸಭೆ ಸಿಬ್ಬಂದಿಗಳಿಗೆ ಹೇಳಿದರೇ, ನಮಗೆ ಬೇರೆ ಕೆಲಸ ಇದೆ. ಸತ್ತ ಹಂದಿ ಸ್ವಚ್ಛ ಮಾಡಲು ಸಮಯವಿಲ್ಲ. ಹಂದಿ ಸತ್ತಿರುವುದು ನಿಮ್ಮ ಓಣಿಯಲ್ಲಿ, ನಾವೇನು ಮಾಡ್ಬೇಕು. ಪ್ರತ್ಯುತ್ತರ ನೀಡಿದ ಸಿಬ್ಬಂದಿ ಹೇಳಿಕೆಯಿಂದ ಜನರೇ ಸತ್ತ ಹಂದಿ ಊರು ಹೊರಗೆ ಹಾಕಬೇಕು. ದುರ್ವಾಸನೆಯಿಂದ ಅನೇಕರು ಅನಾರೋಗ್ಯಕ್ಕೊಳಗಾಗಿದ್ದಾರೆ. ನಮ್ಮ ಸಮಸ್ಯೆ ಯಾರಿಗೆ ಹೇಳ್ಬೇಕು ಎನ್ನುತ್ತಾರೆ ಪುರಸಭೆ ಮಾಜಿ ಸದಸ್ಯ ಮಲ್ಲೇಶಪ್ಪ ಬಡ್ಡಿ.
ಹದನೈದು ದಿನದಿಂದ ಮುಖ್ಯಾಧಿಕಾರಿಗಳು ಕರ್ತವ್ಯಕ್ಕೆ ಚಕ್ಕರ್ ಹೊಡೆದಿದ್ದಾರೆ. ಇದ್ದ ಸಿಬ್ಬಂದಿಗೆ ಸ್ವಚ್ಛತೆ ಕುರಿತು ಹೇಳಿದರೇ, ಸಂಬಂಧವಿಲ್ಲದಂತೆ ವರ್ತನೆ ಮಾಡುತ್ತಿದ್ದಾರೆ. ಮುಖ್ಯಾಧಿಕಾರಿಗಳಿಗೆ ದೂರುವಾಣಿ ಕರೆ ಮಾಡಿದಲ್ಲಿ ಸ್ವೀಕರಿಸಲ್ಲ. ಈ ಎಲ್ಲ ವ್ಯವಸ್ಥೆಗೆ ಜನರ ಒಗ್ಗಟ್ಟಿನ ಹೋರಾಟವೇ ಪರಿಹಾರ ಎಂದು ಬಡ್ಡಿ ಬೇಸರ ವ್ಯಕ್ತಪಡಿಸಿದರು.
ಶೆಡ್‌ನಲ್ಲಿ ಶಾಶ್ವತ: ಚರಂಡಿಗಳಲ್ಲಿರುವ ಕೊಳಚೆ ಸಾಗಿಸುವ ಮೂರು ಟ್ರ್ಯಾಕ್ಟರ್‌ಗಳಲ್ಲಿ ಒಂದು ಶಾಶ್ವತ ದುಸ್ಥಿತಿಯಲ್ಲಿ ನಿಂತಿದೆ. ಇನ್ನೊಂದು ಡೀಸೆಲ್ ಇಲ್ಲದ ನಿತ್ಯ ನೆಪದಲ್ಲಿ ಶೆಡ್‌ನಲ್ಲಿರುತ್ತದೆ. ಮತ್ತೊಂದು ಮಾತ್ರ ಕಾರ್ಯ ನಿರ್ವಹಣೆಯಲ್ಲಿದ್ದರೂ ವಿಶಾಲವಾದ ಬಂಕಾಪುರದ ಕೊಳಚೆ ಸಾಗಿಸಲು ತಿಂಗಳ ಕಾಲಾವಕಾಶ ಸಾಲದಂತಾಗಿದೆ. ದುರಸ್ತಿಗೊಳಿಸುವ ಮನಸ್ಸು ಮುಖ್ಯಾಧಿಕಾರಿ ಸೇರಿ ಉಸ್ತುವಾರಿ ನೋಡಿಕೊಳ್ಳುವ ಎಸಿ-ಡಿಸಿ ಸಾಹೇಬ್ರುರಿಗಿಲ್ಲದ ಪರಿಣಾಮ ಸಾರ್ವಜನಿಕರು ಕೊಳಚೆಯ ದುರ್ವಾಸನೆಯಲ್ಲಿ ಕಾಲ ಕಳೆಯವಂತಾಗಿದೆ. ಸಮಸ್ಯೆ ಕುರಿತು ಸ್ಥಳೀಯ ಶಾಸಕರ ಗಮನಕ್ಕೆ ತಂದರೂ ಪರಿಹಾರ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸಾರ್ವಜನಿಕರು. ಮಳೆಗಾಲದ ದಿನದಲ್ಲಿ ಹೆಚ್ಚುತ್ತಿರುವ ಸಾಂಕ್ರಾಮಿಕ ರೋಗ ತಡೆಯಲು ಸ್ವಚ್ಛತೆ ಅವಶ್ಯವಾಗಿದೆ. ಅಸ್ವಚ್ಛತೆ ತಾಂಡವಾಡುವ ಪಟ್ಟಣದಲ್ಲಿ ಪುರಸಭೆ ಇದ್ದು ಇಲ್ಲದಂತೆ ಬಾಸವಾಗುತ್ತಿರುವ ಸಾರ್ವಜನಿಕರಿಗೆ ಆರೋಗ್ಯ ಕಾಪಾಡುವ ದಿಸೆಯಲ್ಲಿ ಕುಂಭಕರ್ಣನ ನಿದ್ರೆಯಲ್ಲಿರುವ ಮುಖ್ಯಾಧಿಕಾರಿಗಳು ಇನ್ನಾದರೂ ಸ್ವಚ್ಛತೆಗೆ ಕ್ರಮಕೈಗೊಳ್ಳಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement