ರಕ್ಷಣಾತ್ಮಕ ಕಲೆ ಎಲ್ಲರಿಗೂ ಅಗತ್ಯ: ಪುಲಾರೆ
ಬ್ಯಾಡಗಿ: ಪ್ರಕೃತಿ ವಿಕೋಪ ತಡೆಯಲು ನಮ್ಮಿಂದ ಸಾಧ್ಯವಿಲ್ಲ. ಭೂಮಿ ಮೇಲೆ ಜನಿಸಿದ ಪ್ರತಿಯೊಬ್ಬರ ಜೀವ ಅತ್ಯಮೂಲ್ಯ. ಅಂತಹ ಸಂದರ್ಭಗಳು ಎದುರಾದಾಗ ರಕ್ಷಣಾತ್ಮಕ ಕಲೆಯೊಂದನ್ನು ತಿಳಿದುಕೊಳ್ಳಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ತಹಸೀಲ್ದಾರ್ ಸುಭಾಸ ಪುಲಾರೆ ತಿಳಿಸಿದರು.
ಗುರುವಾರ ತಾಲೂಕಿನ ಕಾಗಿನೆಲೆ ಗ್ರಾಮದ ಕನಕ ಕಲಾ ವೇದಿಕೆಯಲ್ಲಿ ತಾಲೂಕಾಡಳಿತ ಹಾಗೂ ವಿಜಯವಾಡದ ರಾಷ್ಟ್ರೀಯ ವಿಪತ್ತು ನಿರ್ವಹಣೆ ಬಟಾಲಿಯನ್(10) ಆಶ್ರಯದಲ್ಲಿ ಜರುಗಿದ ವಿಪತ್ತು ನಿರ್ವಹಣೆ ಪ್ರಾಯೋಗಿಕ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಕೃತಿ ಮುನಿಸಿಕೊಂಡರೆ ನಿಗ್ರಹಿಸಲು ಸಾಧ್ಯವಿಲ್ಲ ಎಂಬುದು ಇತ್ತೀಚೆಗೆ ಉತ್ತರಾಖಂಡದಲ್ಲಿ ಜರುಗಿದ ಜಲಪ್ರಳಯವೇ ಸಾಕ್ಷಿಯಾಗಿದ್ದು, ಸಾವಿರಾರು ಜನರು ಘಟನೆಯಲ್ಲಿ ತಮ್ಮ ಜೀವ ಕಳೆದುಕೊಂಡಿದ್ದಾರೆ. ಇದನ್ನು ಅರಿತಿದ್ದ ಕೆಲವರು ಹಾಗೋ ಹೀಗೋ ಬದುಕಿದ್ದನ್ನು ಬಿಟ್ಟರೆ ಉಳಿದವರು ಜಲಸಮಾಧಿಯಾಗಿದ್ದಾರೆ ಎಂದರು.
ವಿಪತ್ತು ಸಂಭವಿಸಿದ ಸಂದರ್ಭಗಳಲ್ಲಿ ಸ್ಥಳದಲ್ಲೇ ಸಂಕಷ್ಟದಲ್ಲಿದ್ದು, ತೊಂದರೆ ಅನುಭವಿಸುತ್ತಿರುವ ವ್ಯಕ್ತಿಗಳ ಜೀವ ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಘಟನೆ ಜರುಗಿದಾಗ ಜೀವಹಾನಿ ನಿಯಂತ್ರಿಸುವ ಸುಲಭ ಮಾರ್ಗೋಪಾಯಗಳನ್ನು ತಿಳಿದುಕೊಳ್ಳುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ ಎಂದರು.
ರಾಷ್ಟ್ರೀಯ ವಿಪತ್ತು ನಿರ್ವಹಣಾದಳ ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಾಗಿದ್ದು, ತನ್ಮೂಲಕ ದೇಶದ ಯಾವುದೇ ಮೂಲೆಯಲ್ಲಿಯೂ ತೊಂದರೆಯಲ್ಲಿ ಸಿಲುಕಿದ ವ್ಯಕ್ತಿಗಳ ಜೀವ ರಕ್ಷಣೆಗೆ ಮುಂದಾಗುತ್ತದೆ. ಇವರ ಪ್ರಾಯೋಗಿಕ ಪರೀಕ್ಷೆಗಳಿಂದ ಸುಲಭವಾಗಿ ಜೀವ ರಕ್ಷಣೆಯ ಮಾಗೋಪಾಯಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಲಿದೆ ಎಂದರು.
ರಾಷ್ಟ್ರೀಯ ವಿಪತ್ತು ದಳದ ಮುಖ್ಯಸ್ಥ ಆರ್.ಪಿ. ತ್ರಿಪಾಠಿ ಮಾತನಾಡಿ, ಭೂಕಂಪ, ಸುನಾಮಿ, ಪ್ರವಾಹ ಹಾಗೂ ಜ್ವಾಲಾಮುಖಿ ಇವು ಪ್ರಕೃತಿದತ್ತ ವಿಪತ್ತುಗಳಾದರೇ, ಬಸ್, ರೈಲು, ವಿಮಾನ ಅಪಘಾತ ಮತ್ತು ಬೆಂಕಿ ಆಕಸ್ಮಿಕಗಳು ಮಾನವ ನಿರ್ಮಿತ ವಿಪತ್ತುಗಳಾಗಿವೆ.
ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಗಾಯಗೊಂಡ ವ್ಯಕ್ತಿಗೆ ಕರವಸ್ತ್ರದಿಂದ ಮೊದಲು ರಕ್ತಸ್ರಾವವನ್ನು ತಡೆಗಟ್ಟಿದ ಬಳಿಕ ವೈದ್ಯರ ಬಳಿಗೆ ಕರೆದೊಯ್ಯಬೇಕು, ಉಸಿರಾಟದ ತೊಂದರೆಯಲ್ಲಿ ಸಿಲುಕಿದ ವ್ಯಕ್ತಿಯ ಎದೆಯ ಮಧ್ಯಭಾಗದಲ್ಲಿ ಜೋರಾಗಿ 10ರಿಂದ 15 ಬಾರಿ ಕೈಗಳಿಂದ ಒತ್ತುವುದರಿಂದ ಸುಲಭವಾಗಿ ಮತ್ತೆ ಆತನ ಉಸಿರಾಟಕ್ಕೆ ಚಾಲನೆ ನೀಡಬಹುದಾಗಿದ್ದು ಇದರಿಂದ ಆತನ ಜೀವ ರಕ್ಷಣೆ ಮಾಡಿದಂತಾಗುತ್ತದೆ ಎಂದರು.
ಇದೇ ಸಂದರ್ಭ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ (ಎನ್‌ಆರ್‌ಡಿಎಫ್) ಸುಮಾರು 35ಕ್ಕೂ ಹೆಚ್ಚು ಸದಸ್ಯರು ವಿವಿಧ ಪ್ರಾಯೋಗಿಕ ಪರೀಕ್ಷೆಗಳನ್ನು ತೋರಿಸುವ ಮೂಲಕ ನೆರೆದ ಸಭಿಕರಲ್ಲಿ ಅಚ್ಚರಿ ಮೂಡಿಸಿದರು. ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷ ಅಬ್ದುಲ್ ಲತೀಪ್ ಶಮನಾಬಾಯಿ, ಪಿಎಸ್‌ಐ ಕೆ.ಎಸ್. ಕೇಶದ, ಬಿಹಾರಿ ಸಿಂಗ್, ಅಗ್ನಿ ಶಾಮಕದಳದ ಎ.ಎಂ. ಗುರುಶಾಂತಪ್ಪ, ಬಿ.ಎಸ್. ನರಸಿಂಹಮೂರ್ತಿ, ಕಂದಾಯ ನೀರೀಕ್ಷಕ ಬೋಗಾರ, ಉಪಾಧ್ಯಕ್ಷ ಕುಸುಮವ್ವ ತಳಗಿನಮನಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಜೆ.ಎಸ್. ಸೊರಟೂರು ಮುಖ್ಯ ಶಿಕ್ಷಕ ಎಂ. ಬಸವರಾಜಪ್ಪ, ವಿಶ್ವನಾಥ ಕೆಂಡದಮಠ, ಎಂ.ಎಂ. ಕಾಗಿನೆಲ್ಲಿ, ಪಿ.ಎಫ್. ಅಗಡಿ ಹಾಗೂ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.