ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಆಂಗ್ಲ ಭಾಷೆ ವಿದ್ಯಾರ್ಥಿನಿಯ ಕನ್ನಡ ಪ್ರೇಮ

Lingaraj Badiger
Updated On : 20 Jul 2013, 11:53 am

ರಾಣಿಬೆನ್ನೂರು: ವೈದ್ಯರ ಮಕ್ಕಳು ವೈದ್ಯರಾಗುವುದು, ಶಿಕ್ಷಕರ ಮಕ್ಕಳು ಶಿಕ್ಷಕರಾಗುವುದು ಸರ್ವೆ ಸಾಮಾನ್ಯ. ವೈದ್ಯರಾಗಿರುವ ತಂದೆ, ತಾಯಿಯರ ಅಪೇಕ್ಷೆ ಮೇರೆಗೆ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತು ಬೆಂಗಳೂರು ನಗರದ ವಿಜ್ಞಾನ ಕಾಲೇಜೊಂದರಲ್ಲಿ ಓದುತ್ತಿರುವ ನಗರದ ವೈದ್ಯರ ಮಗಳೊಬ್ಬಳು ಕನ್ನಡದಲ್ಲಿ 51 ಕವನಗಳನ್ನು ಬರೆದು ಪುಸ್ತಕ ರೂಪದಲ್ಲಿ ಮುದ್ರಿಸಿ, ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತಿರುವುದನ್ನು ನೋಡಿದ ಕನ್ನಡ ಅಭಿಮಾನಿಗಳಿಗೆ ಆಶ್ಚರ್ಯವೆನಿಸದಿರಲಾರದು.
ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಕಲಿತು ವಿಜ್ಞಾನ ಕಾಲೇಜು ವಿದ್ಯಾರ್ಥಿನಿಯಾಗಿದ್ದರೂ  ಕನ್ನಡದಲ್ಲಿ ಕವನ ಬರೆಯುತ್ತಿರುವ ಹಾಗೂ ಈಗಾಗಲೆ 51 ಸ್ವ-ರಚಿತ ಕವನಗಳನ್ನು ರಚಿಸಿ ತಾನು ರಚಿಸಿರುವ ಕವನ ಸಂಕಲನಕ್ಕೆ ಭಾವ ತುಂಬಿದ ಮೇಲೆ ಎಂದು ಹೆಸರಿಟ್ಟಿರುವ ಪುಸ್ತಕವನ್ನು ಬಿಡುಗಡೆಗೊಳಿಸುತ್ತಿರುವ ವಿದ್ಯಾರ್ಥಿನಿ ಯಾರೆಂದು ಕೇಳಬೇಡಿ. ಅವಳ ಹೆಸರು ವಿಳಾಸ ಕೇಳುವುದಕ್ಕಿಂತ ಅವಳನ್ನು ನೋಡಿ ಅವಳ ಅನುಭವದ ನುಡಿಗಳನ್ನು ಅವಳಿಂದಲೆ ಕೇಳುವುದಕ್ಕಾಗಿ ಜು. 21ರಂದು ಬೆಳಗ್ಗೆ 10-30ಕ್ಕೆ ರಾಣಿಬೆನ್ನೂರು ನಗರದ ರೇಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಕರ್ನಾಟಕ ಸಂಘದ ಆಲೂರು ವೆಂಕಟರಾವ್ ರಂಗ ಮಂದಿರಕ್ಕೆ ಬನ್ನಿ.
ವೈದ್ಯ ದಂಪತಿಗಳ ಮಗಳೊಬ್ಬಳು ಆಂಗ್ಲ ಭಾಷೆಯಲ್ಲಿ ಓದಿ ಕನ್ನಡದಲ್ಲಿ 51 ಸ್ವ-ರಚಿತ ಕವನಗಳನ್ನು ರಚಿಸಿರುವ ಬೆಂಗಳೂರು ನಗರದ ನಾರಾಯಣ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಅಕ್ಷುಭಿತಾ ಎಸ್.ಎಂ, ಇಲ್ಲಿನ ಉಮಾಶಂಕರ ನಗರದಲ್ಲಿರುವ ವಿದ್ಯಾ ಆಸ್ಪತ್ರೆಯ ವೈದ್ಯ ದಂಪತಿಗಳಾದ ಡಾ೤ ವಾಸುದೇವಮೂರ್ತಿ ಎಂ.ಎಸ್ ಹಾಗೂ ಡಾ೤ ವಿದ್ಯಾ ವಾಸುದೇವ ಮೂರ್ತಿಯವರ ಮಗಳಾಗಿದ್ದಾಳೆ.
ವೈದ್ಯಳಾಗಲು ನನಗೆ ಇಷ್ಟವಿಲ್ಲ: ವಿದ್ಯಾ ಆಸ್ಪತ್ರೆಯಲ್ಲಿ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಅಕ್ಷುಭಿತಾ ಎಸ್.ವಿ ಮಾತನಾಡಿ, ವೈದ್ಯರಾಗಿರುವ ನನ್ನ ತಂದೆ ಹಾಗೂ ತಾಯಿ ನನ್ನನ್ನು ಮಹಿಳಾ ವೈದ್ಯಳನ್ನಾಗಿ ಮಾಡಬೇಕೆಂಬ ಆಸೆಯಿಂದ ರಾಣಿಬೆನ್ನೂರು ನಗರದ ಹುಣಶಿಕಟ್ಟಿ ರಸ್ತೆಯಲ್ಲಿರುವ ಸೆಂಟ್ ಲಾರೆನ್ಸ್ ಇಂಗ್ಲಿಷ್ ಮಾಧ್ಯಮದ ಶಾಲೆಗೆ ಕಳುಹಿಸಿದರು. ಸೆಂಟ್ ಲಾರೆನ್ಸ್ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದ ನಾನು ಕನ್ನಡ ಮತ್ತು ಇಂಗ್ಲಿಷನ್ನು ಚೆನ್ನಾಗಿ ಕಲಿಸಬಲ್ಲ ಉತ್ತಮ ಶಾಲೆಯಲ್ಲಿ ಕಲಿಯಬೇಕೆಂದು ನನ್ನ ಮನಸ್ಸಿನಲ್ಲಿದ್ದ ಆಸೆಯನ್ನು ನನ್ನ ತಂದೆ-ತಾಯಿಯರ ಮುಂದೆ ವ್ಯಕ್ತಪಡಿಸಿದಾಗ ಅದಕ್ಕೊಪ್ಪಿದ ಪಾಲಕರು ನನ್ನನ್ನು ಸುಳ್ಳ ತಾಲೂಕಿನ ಚೊಕ್ಕಾಡಿಯ ಸತ್ಯಸಾಯಿ ವಿದ್ಯಾ ಕೇಂದ್ರಕ್ಕೆ 5ನೇ ತರಗತಿಗೆ ಸೇರಿಸಿದರು.
ಹಾಸ್ಟೆಲ್ ಜೀವನ ಚೆನ್ನಾಗಿರುತ್ತದೆ ಎಂದು ಆಸೆ ಪಟ್ಟಿದ್ದ ನಾನು, ತಂದೆ-ತಾಯಿ, ಅಣ್ಣ, ಅಕ್ಕ ಬಂಧುಗಳನ್ನೆಲ್ಲಾ ಮರೆತು ನನ್ನೊಂದಿಗೆ ಶಾಲೆ ಕಲಿಯಲು ಇದ್ದ ವಿದ್ಯಾರ್ಥಿ-ವಿದ್ಯಾರ್ಥಿನಿ ಮಿತ್ರರೊಂದಿಗೆ 5ನೇ ತರಗತಿಯಿಂದ 7ನೇ ತರಗತಿವರೆಗೆ ಬೆರೆತು ಕನ್ನಡ ಮತ್ತು ಇಂಗ್ಲಿಷನ್ನು ಚೆನ್ನಾಗಿ ಓದುವುದನ್ನು ಸ್ವರಚಿತ ಕವನಗಳನ್ನು ಬರೆಯುವುದನ್ನು ಅಲ್ಲಿ ಕಲಿತಿದ್ದನ್ನು ನಾನೆಂದು ಮರೆಯುವುದಿಲ್ಲ ಎಂದು ಅಭಿಪ್ರಾಯ ಹಂಚಿಕೊಂಡರು. ತಂದೆ, ತಾಯಿ ಬಂಧುಗಳನ್ನು ಬಿಟ್ಟು ಹಾಸ್ಟೆಲ್‌ನಲ್ಲಿ ಓದುವುದರ ಬಗ್ಗೆ ಇಚ್ಛಿಸಿದ್ದ ನಾನು 8ನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿವರೆಗೆ ಸಾಗರ ತಾಲೂಕಿನ ಅಮಟೆಕೊಪ್ಪ ಗ್ರಾಮದಲ್ಲಿರುವ ಹೊಂಗಿರಣ ಹೈಸ್ಕೂಲ್‌ಗೆ ಸೇರಿದೆ.
ಸಾಗರದ ಅಮಟೆಕೂಪ್ಪದ ಹೊಂಗಿರಣ ಹೈಸ್ಕೂಲ್‌ನಲ್ಲಿ ಓದುತ್ತಿದ್ದ ಸಮಯ ಹಾಗೂ ಸುಳ್ಳ ತಾಲೂಕಿನ ಚೊಕ್ಕಾಡಿಯ ಇಂಗ್ಲಿಷ್ ಮಾಧ್ಯಮದ ಪ್ರಾಥಮಿಕ ಶಾಲೆಗಳಲ್ಲಿ ಕಲಿಯುವಾಗ ಗೆಳೆಯ-ಗೆಳತಿಯರ ಮಧ್ಯದಲ್ಲಿ ಓದುತ್ತ ಆಡುತ್ತಿದ್ದ ಸಮಯದಲ್ಲಿ 40 ಕವನಗಳನ್ನು ರಚಿಸಿದ್ದೇನೆ. ಈಗ ಕಾಲೇಜು ಶಿಕ್ಷಣಕ್ಕಾಗಿ ಬೆಂಗಳೂರಿನ ನಾರಾಯಣ ವಿಜ್ಞಾನ ಕಾಲೇಜಿನಲ್ಲಿ ಓದುತ್ತಿದ್ದು, ಬಿಡುವಿನ ಸಮಯದಲ್ಲಿ ರಚಿಸಿರುವ 11 ಕವನಗಳು ಸೇರಿ ಒಟ್ಟು 51 ಕವನಗಳ ಪುಸ್ತಕವನ್ನು ಮುದ್ರಿಸಿ ಅದಕ್ಕೆ 'ಭಾವ ತುಂಬಿದ ಮೇಲೆ' ಎಂದು ಹೆಸರಿಟ್ಟಿದ್ದು, 2013ರ ಜು. 21ರಂದು ಬೆಳಗ್ಗೆ 10-30ಕ್ಕೆ ಲೋಕಾರ್ಪಣೆ ಮಾಡುವುದಾಗಿ ಹಾಗೂ ವೈದ್ಯರ ಮಗಳಾದ ನನಗೆ ವೈದ್ಯಳಾಗಲು ಮನಸ್ಸಿಲ್ಲ. ಸಾಹಿತಿಯಾಗಿ ಸೇವೆ ಸಲ್ಲಿಸುತ್ತೇನೆಂದು ವಿದ್ಯಾರ್ಥಿನಿ ಅಕ್ಷುಭಿತಾ ಎಸ್.ವಿ ತಿಳಿಸಿದರು.
ವಿದ್ಯಾರ್ಥಿನಿಯ ತಂದೆ ಡಾ೤ ವಾಸುದೇವಮೂರ್ತಿ ಎಸ್.ಎಂ, ತಾಯಿ ಡಾ೤ ವಿದ್ಯಾ ವಾಸುದೇವಮೂರ್ತಿ, ಸಾಹಿತಿಗಳಾದ ಗಿರಿಜಾದೇವಿ ದುರ್ಗದಮಠ, ಮಕ್ಕಳ ಸಾಹಿತ್ಯ ವೇದಿಕೆಯ ಜಿ.ಎಂ. ದೇವಗಿರಿಮಠ ಇದ್ದರು.
- ಸಾಬ್ಜಾನ ಇಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement