ಕಾನೂನು ಅರಿವಿನಿಂದ ಸುಖ ಜೀವನ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಜು. 19
ಕಾನೂನಿನ ಕಟ್ಟಳೆಗಳನ್ನು ಮುರಿದು ಜೈಲಿನಲ್ಲಿ ಜೀವಿಸುವುದಕ್ಕಿಂತ, ಕಾನೂನಿನ ಅರಿವು ಪಡೆದು ಕುಟುಂಬ ಸದಸ್ಯರೊಂದಿಗೆ ಸುಖ, ಸಂತೋಷದಿಂದ ಜೀವನ ನಡೆಸಿ ಬದುಕನ್ನು ಸಾರ್ಥಕಪಡಿಸಿಕೊಳ್ಳಿ ಎಂದು ಸರ್ಕಾರಿ ಅಭಿಯೋಜಕ ಎಸ್.ಜಿ. ಕೂಡ್ಲಗಿಮಠ ಹೇಳಿದರು.
ನಗರದ ಉಪ ಕಾರಾಗೃಹದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಶಿಗ್ಗಾಂವಿ, ಸಹಾಯಕ ಸರ್ಕಾರಿ ಅಭಿಯೋಜಕರು ಶಿಗ್ಗಾಂವಿ ನ್ಯಾಯವಾದಿಗಳ ಸಂಘ ಮತ್ತು ಕಂದಾಯ ಇಲಾಖೆ ಶಿಗ್ಗಾಂವಿ ಆಶ್ರಯದಲ್ಲಿ ಜರುಗಿದ ಕಾನೂನು ಅರಿವು-ನೆರವು ಶಿಬಿರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಕೆ. ಅಕ್ಕಿ ವಹಿಸಿದ್ದರು. ಕಾರ್ಯಕ್ರಮವನ್ನುದ್ದೇಶಿಸಿ ಸರ್ಕಾರ ಅಪರಾಧ ಕಾರ್ಯಗಳನ್ನು ತಡೆಗಟ್ಟುವದಕ್ಕೊಸ್ಕರ ತಾಲೂಕು ಮಟ್ಟ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಜನರಿಗೆ ಕಾನೂನು ಅರಿವು-ನೆರವು ನಿಡಲು ಹಾಗೂ ಉಚಿತ ಸಲಹಾ ಕೇಂದ್ರಗಳನ್ನು ಮಾಡಿದೆ ಎಲ್ಲರೂ ಇದರ ಸದುಪಯೋಗ ಪಡೆದು ಸಂತೋಷಮಯವಾದ ಜೀವನ ನಡೆಸಬಹುದಾಗಿದೆ. ನಮ್ಮ ಹಕ್ಕು ಕರ್ತವ್ಯಗಳನ್ನು ನಾವು ತಿಳಿದುಕೊಂಡಾಗ ಅಪರಾಧಗಳು ಆಗಲಾರವು. ಅಪರಾಧಿಗಳಾಗಿ ಎಲ್ಲರಿಂದ ದೂರಾಗುವ ಬದಲು ಕಾನೂನಿನ ಅರಿವು ಪಡೆದು ಮುಂದಿನ ದಿನಮಾನಗಳಲ್ಲಿ ಸುಂದರ ಜೀವನ ರೂಪಿಸಿಕೊಳ್ಳಿ ಎಂದರು.
ಕಾರ್ಯಕ್ರಮದ ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ನ್ಯಾಯವಾದಿ ಜಿ.ಎನ್. ಎಲಿಗಾರ ಮಾತನಾಡಿ, ಕೈದಿಗಳ ಹಕ್ಕು ಮತ್ತು ಕಾನೂನುಗಳು ಹಾಗೂ ಶಾಶ್ವತ ಕಾನೂನು ಸೇವಾ ಕೇಂದ್ರದಲ್ಲಿ ಸಿಗುವ ಕಾನೂನು ಸಲಹೆಗಳ ಬಗ್ಗೆ ವಿವರವಾದ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಪಿಎಸ್ಐ ಎಸ್.ಜಿ. ಕುಂಬಾರ ಹಾಗೂ ಪೊಲೀಸ್ ಇಲಾಖೆಯ ಡಿ.ಜಿ. ಪಾಟೀಲ ಹಾಗೂ ಸಿಬ್ಬಂದಿ ಮತ್ತು ನ್ಯಾಯಾಲಯದ ಸಿಬ್ಬಂದಿಗಳಾದ ಎಚ್.ವೈ. ಮುಳಗುಂದ, ಅಜ್ಜಪ್ಪ ವಡ್ಡರ, ಜೈಲರ ಎಚ್.ಸಿ. ಮಾಳಾಪುರ ಉಪಸ್ಥಿತರಿದ್ದರು. ಕಾರಾಗೃಹ ಸುಪರಿಂಟೆಂಡೆಂಟ್ ಜಿ.ಕೆ. ರತ್ನಾಕರ ನಿರೂಪಿಸಿ, ವಂದಿಸಿದರು.