ಗ್ರಾಪಂ ಅಭಿವೃದ್ಧಿಗೆ ಎಲ್ಲರೂ ಸಹಕರಿಸಿ
ರಾಣಿಬೆನ್ನೂರು: ರಾಜ್ಯದ ಗ್ರಾಮಾಂತರ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿಯಮನುಸಾರ ಕಾಮಗಾರಿಗಳನ್ನು ನಿರ್ವಹಿಸುವುದರೊಂದಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಸಾಧಿಸಲು ಸರ್ವರು ಸಹಕರಿಸಬೇಕೆಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಅಭಿಯಂತ ಎಸ್.ಎಚ್. ಕರಡ್ಡಿ ಹೇಳಿದರು.
ತಾಲೂಕಿನ ಮುದೇನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ 2013-14ನೇ ಸಾಲಿನಲ್ಲಿ ಸಾಧಿಸಿರುವ ಸಾಧನೆಗಳ ಹಾಗೂ ವ್ಯಯಿಸಿರುವ ಅನುದಾನದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವುದಕ್ಕಾಗಿ ಮುದೇನೂರು ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಮೊದಲ ಸುತ್ತಿನ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಧಿಸಿರುವ ಸಾಧನೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ನಾವು ಮುಂದಾಗಿದ್ದ ಇಂತಹ ಸಭೆಗಳಲ್ಲಿ ಗ್ರಾಮಸ್ಥರು ಉಪಸ್ಧಿತರಿದ್ದು ಯಾವುದೇ ಮುಚ್ಚು ಮರೆಯಿಲ್ಲದೆ ಲೆಕ್ಕ ಕೇಳಬೇಕು ಹಾಗೂ ಗ್ರಾಮಾಭಿವೃದ್ಧಿಗೆ ಸರ್ವರು ಸಹಕರಿಸಬೇಕೆಂದು ಕರಡ್ಡಿ ತಿಳಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಇಲಾಖೆ ಅಧಿಕಾರಿಗಳು, ತಮ್ಮ ಇಲಾಖೆಯಿಂದ ಯೋಜನೆ ಅಡಿಯಲ್ಲಿ ಅನುದಾನ ಬಳಕೆ ಕುರಿತಂತೆ ವಿವರಿಸಿದರು.
ತಾಲೂಕು ಸಾಮಾಜಿಕ ಲೆಕ್ಕ ಪರಿಶೋಧನಾ ಸಮಿತಿಯ ತಾಲೂಕು ಸಂಯೋಜಕ ಸಿದ್ದು ಎಸ್. ಮಾತನಾಡಿ, ಯೋಜನೆ ಬಗ್ಗೆ ಮಾಹಿತಿ, ಕಾಯಿದೆ ನಿಯಮಾವಳಿ ಅನುಷ್ಠಾನ ಮಾಡುವ ವಿಧಾನ, ಕೂಲಿಕಾರ್ಮಿಕರ ಹಕ್ಕು ಹಾಗೂ ಅಧಿಕಾರಗಳ ಕುರಿತು ಸಮಗ್ರ ಮಾಹಿತಿ ನೀಡಿ ಸಾರ್ವಜನಿಕರೊಂದಿಗೆ ಚರ್ಚಿಸಿದರು.
2012-13ನೇ ಸಾಲಿನಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳ ಕುರಿತು ಸಾರ್ವಜನಿಕರಿಂದ ಅನುಮೊದನೆ ಪಡೆದರು. ಮುದೇನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಗಣೇಶ ಬಾನಿ, ಗ್ರಾಪಂ ವ್ಯಾಪ್ತಿಯ ಎಸ್ಸಿ-ಎಸ್ಟಿ ಮತ್ತು ಸಣ್ಣ ಹಿಡುವಳಿದಾರರ ಜಮೀನಿನಲ್ಲಿ ಭೂಸಮತಟ್ಟ, ಬದು ನಿರ್ಮಾಣ, ಇಂಗು ಗುಂಡಿ, ಕೃಷಿ ಹೊಂಡ, ತೋಟಗಾರಿಕೆ ಬೆಳೆಗಳ ಅಭಿವೃದ್ಧಿಗಾಗಿ ಕೈಗೊಂಡಿರುವ ಕಾಮಗಾರಿ ಮತ್ತು ವೈಯಕ್ತಿಕ ಶೌಚಾಲಯ ನಿರ್ಮಾಣ ಕಾಮಗಾರಿಗಳ ಕುರಿತು ವಿವರಿಸಿದರು.