ಮಹಿಳೆಯರ ಮೇಲಿನ ಕಿರುಕುಳ ಆತಂಕಕಾರಿ
ಹಾವೇರಿ: ಮಹಿಳೆಯರ ರಕ್ಷಣೆಗಾಗಿ ದೇಶದಲ್ಲಿ ಪ್ರಬಲ ಕಾನೂನುಗಳು ಇದ್ದಾಗಲೂ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ ಎಂದು ಜಿಲ್ಲಾ ಸಷೆನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಚ್.ಪಿ. ಸಂದೇಶ ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ನಡೆದ ಮಾದಕ ಪದಾರ್ಥ ಹಾಗೂ ಲೈಂಗಿಕ ಶೋಷಣೆಯಿಂದ ಮಕ್ಕಳನ್ನು ತಡೆಗಟ್ಟುವ ಕುರಿತ ಕಾನೂನು ಅರಿವು ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ನಡೆಯುವ ಬಹುತೇಕ ಲೈಂಗಿಕ ಕಿರುಕುಳಗಳು ಯುವತಿಯರ ಮೇಲೆ ನಡೆಯುತ್ತಿವೆ. ಇದಕ್ಕೆ ಯುವ ಜನರಲ್ಲಿ ಲೈಂಗಿಕ ಶಿಕ್ಷಣ ಇಲ್ಲದಿರುವುದೇ ಪ್ರಮುಖ ಕಾರಣವಾಗಿದೆ. ಅದಕ್ಕಾಗಿ ಪ್ರೌಢಶಾಲಾ ಹಂತದಿಂದಲೇ ಲೈಂಗಿಕ ಶಿಕ್ಷಣ ನೀಡುವುದರ ಮೂಲಕ ಯುವ ಸಮುದಾಯದಲ್ಲಿ ಲೈಂಗಕತೆ ಬಗ್ಗೆ ತಿಳಿವಳಿಕೆ ನೀಡಿ ಇಂತಹ ಅಪರಾಧಗಳನ್ನು ತಡೆಗಟ್ಟಬಹುದಾಗಿದೆ ಎಂದು ಅಭಿಪ್ರಾಯಪಟ್ಟರು. ಯಾವುದೇ ವಿಷಯದ ಬಗ್ಗೆ ಗೌಪ್ಯತೆ ಹೆಚ್ಚಾದಂತೆ ಅದರ ಬಗ್ಗೆ ಆಸಕ್ತಿಯೂ ಹೆಚ್ಚಾಗುತ್ತದೆ. ನಮ್ಮ ದೇಶದಲ್ಲಿ ಲೈಂಗಿಕ ವಿಷಯದಲ್ಲಿ ಗೌಪ್ಯತೆ ಇರುವುದರಿಂದಲೇ ಲೈಂಗಿಕತೆ ಬಗ್ಗೆ ತಪ್ಪು ತಿಳಿವಳಿಕೆ ಮೂಡಿಸಿಕೊಂಡು ಇಂತಹ ಅಹಿತಕರ ಘಟನೆಗಳಿಗೆ ಕಾರಣವಾಗುತ್ತಿದ್ದಾರೆ ಎಂದರು.
ಪಾಶ್ಚಾತ್ಯ ಜೀವನ ಶೈಲಿಗೆ ಮಾರು ಹೋಗಿರುವ ಯುವ ಸಮುದಾಯ ಸಣ್ಣ ವಯಸ್ಸಿನಲ್ಲಿಯೇ ಮಾದಕ ವಸ್ತುಗಳ ದಾಸರಾಗುವ ಮೂಲಕ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರಲ್ಲದೇ, ತಮ್ಮ ಚಟಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಕೊಲೆ, ಸುಲಿಗೆಯಂತಹ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ. ಇದು ದೇಶದ ಭವಿಷ್ಯದ ದೃಷ್ಟಿಯಿಂದ ಆಘಾತಕಾರಿಯಾಗಿದೆ ಎಂದರು. ಯುವಕರು ದುಶ್ಚಟಗಳಿಂದ ದೂರವಿದ್ದು, ವಿದ್ಯಾರ್ಥಿ ದೆಸೆಯಿಂದಲೇ ಓದುವ ಹಾಗೂ ವೈಚಾರಿಕತೆ ಬೆಳೆಸಿಕೊಳ್ಳುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಪ್ರತಿಯೊಬ್ಬರೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದ ಅವರು, ಗಾಂಧಿ ಹಾಗೂ ವಿವೇಕಾನಂದರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ಸಾಮಾಜಿಕ ಕಾರ್ಯಕರ್ತ ಡಾ ಗುಹೇಶ್ವರ ಪಾಟೀಲ, ಮಾದಕ ಪದಾರ್ಥ ಹಾಗೂ ಲೈಂಗಿಕ ಕಿರುಕುಳದಿಂದ ಮಕ್ಕಳನ್ನು ರಕ್ಷಿಸುವ ಕುರಿತು ಉಪನ್ಯಾಸ ನೀಡಿದರು. ಪ್ರಾಚಾರ್ಯ ಜೆ.ಸಿ. ಹಾದಿಮನಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶ ಎನ್.ಎಸ್. ಪಾಟೀಲ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಉಪ ನಿರ್ದೇಶಕಿ ಚನ್ನಮ್ಮ ಹೊಳೆಹೊಸೂರ, ವಕೀಲ ಪಿ.ಆರ್. ಮುಂಜೋಜಿ, ವಕೀಲರ ಸಂಘದ ಅಧ್ಯಕ್ಷ ಎಸ್.ಎ. ಹುದ್ದಾರ, ಕಾರ್ಯದರ್ಶಿ ಎಸ್.ಎಸ್. ಹಿರೇತನದ, ನಗರ ಠಾಣೆ ಸಿಪಿಐ ಎಂ.ಜೆ. ಪಂಪಾಪತಿ ಮುಂತಾದವರು ಹಾಜರಿದ್ದರು. ಪ್ರೊ ರಮೇಶ ಎನ್. ತವರಿ ಸ್ವಾಗತಿಸಿ, ವಂದಿಸಿದರು.