ಕಾಮಗಾರಿಯ ಅಲ್ಪ ಮಾಹಿತಿ: ಅಭಿಯಂತ ತರಾಟೆ
ಬ್ಯಾಡಗಿ: ಪ್ರಗತಿ ಪರಿಶೀಲನೆ ವರದಿಗಳು ನಿಮ್ಮ ಹಾಳೆಗಳಲ್ಲಿದ್ದರೆ ನಮಗೆ ಗೊತ್ತಾಗುವುದಾದರೂ ಹೇಗೆ? ಅಪೂರ್ಣ ಮಾಹಿತಿ ನೀಡುವುದನ್ನು ಮೊದಲು ನಿಲ್ಲಿಸಬೇಕು. ನೀವು ಹೇಳಿದ ಕಥೆ ಕೇಳಿ ಚಹ ಕುಡಿಯಲಿಕ್ಕೆ ಬಂದಿದ್ದೇವೆಯೇ.. ಎಂದು ಸಣ್ಣ ನೀರಾವರಿ ಅಭಿಯಂತರನ್ನು ಶಾಸಕ ಬಸವರಾಜ ಶಿವಣ್ಣನವರ ತೀವ್ರ ತರಾಟೆಗೆ ತೆಗೆದುಕೊಂಡರು.
ಶನಿವಾರ ತಾಲೂಕಿನ ಸುವರ್ಣಸೌಧದಲ್ಲಿ ಜರುಗಿದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಣ್ಣ ನೀರಾವರಿ ಇಲಾಖೆ ಮೇಲಿನ ಚರ್ಚೆ ನಡೆದ ಸಂದರ್ಭದಲ್ಲಿ ಪ್ರಗತಿ ಪರೀಶೀಲನಾ ವರದಿಯಲ್ಲಿ ಸೂಡಂಬಿ ಕೆರೆ ಸುಧಾರಣೆಗೆ ಎಂದಷ್ಟೇ ನಮೂದಿಸಿದ್ದು ಭೌತಿಕ ಆರ್ಥಿಕ ಮಂಜೂರಾತಿ ಅನುದಾನದ ವಿವರಗಳಿರದೇ ಕೊನೆಯ ಕಾಲಂನಲ್ಲಿ ಕೆರೆಯಲ್ಲಿ ನೀರು ಸಂಗ್ರಹವಾದ ಕಾರಣ ಕಾಮಗಾರಿ ಬದಲಿಸಲು ಪ್ರಸ್ತಾಪಿಸುವಂತೆ ಬರೆಯಲಾಗಿತ್ತು. ಇದರಿಂದ ಗರಂ ಆದ ಶಾಸಕ ಶಿವಣ್ಣನವರ ತಾಲೂಕಿನಲ್ಲಿ ಕೇವಲ ಒಂದೇ ಕೆರೆ ಇದೆಯೇ.. ಇನ್ನುಳಿದ ಕೆರೆಗಳ ಕುರಿತು ವಿವರಗಳನ್ನೇಕೆ ನಮೂದಿಸಿಲ್ಲ? ಸಮರ್ಪಕ ಪ್ರಗತಿ ವರದಿ ಸಲ್ಲಿಸುವಂತೆ ಸೂಚಿಸಿದರು.
ಉತ್ತಮ ಶಿಕ್ಷಣ ಕೊಡ್ರಿ: ಖಾಸಗಿ ಶಾಲೆಗಳ ಪೈಪೋಟಿ ನಡುವೆ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕುಂಠಿತವಾಗುತ್ತಿದೆ. ಹಿರೇನಂದಿಹಳ್ಳಿ ಗ್ರಾಮದ 90 ಮಕ್ಕಳಲ್ಲಿ ಕೇವಲ 27 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ದಾಖಲಾಗಿದ್ದು, ಗುಣಮಟ್ಟದ ಶಿಕ್ಷಣ ಸರ್ಕಾರಿ ಶಿಕ್ಷಕರಿಂದ ದೊರೆಯುತ್ತಿಲ್ಲವೆಂಬ ಆರೋಪಗಳಿವೆ. ಇದೀಗ ನೇಮಕವಾಗುತ್ತಿರುವ ಶಿಕ್ಷಕರು ಉತ್ತಮ ಸಾಮರ್ಥ್ಯ ಹೊಂದಿದವರಾಗಿದ್ದರೂ, ಪಾಠ ಹೇಳುವಲ್ಲಿ ನಿರಾಸಕ್ತಿ ಏಕೆ ? ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಯಾವ ಕ್ರಮ ತೆಗೆದುಕೊಂಡಿದ್ದೀರಿ ಎಂದು ಶಾಸಕ ಶಿವಣ್ಣನವರ ಪ್ರಶ್ನಿಸಿದರು. ಒಟ್ಟಾರೆ ಕಳೆದ ಸಾಲಿನಷ್ಟೆ ದಾಖಲಾತಿಯಾಗಿವೆ. ಆದರೂ ಈ ಕುರಿತು ಪ್ರತ್ಯೇಕ ಸಭೆ ಕರೆದು ಶಿಕ್ಷಕರಿಗೆ ಸಲಹೆ ನೀಡುವುದಾಗಿ ಶಿಕ್ಷಣಾಧಿಕಾರಿ ಪ್ರತಿಕ್ರಿಯಿಸಿದರು.
ಗೊಬ್ಬರ ಕೊರತೆಯಿಲ್ಲ: ಕೃಷಿ ಇಲಾಖೆ ಮೇಲಿನ ಚರ್ಚೆ ನಡೆದ ಸಂದರ್ಭದಲ್ಲಿ ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಯೂರಿಯಾ ಗೊಬ್ಬರ ಕೊರತೆ ಇರುವ ಕುರಿತು ರೈತರು ಆರೋಪಿಸುತ್ತಿದ್ದಾರೆ. ನೀವು ನೋಡಿದರೆ ತಾಲೂಕಿನ 34 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಬೇಕಾಗುವಷ್ಟು ಗೊಬ್ಬರ ದಾಸ್ತಾನು ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡುತ್ತಿದ್ದೀರಿ, ಇದರಲ್ಲಿ ಯಾರ ಮಾತುಗಳನ್ನು ನಂಬಬೇಕು.. ಎಂದು ಪ್ರಶ್ನಿಸಿದರು. ಕೃಷಿ ಅಧಿಕಾರಿ ಟಿ.ಎಚ್. ನಟರಾಜ ಪ್ರತಿಕ್ರಿಯಿಸಿ, ಪ್ರಸಕ್ತ ತಿಂಗಳಲ್ಲಿ ಯೂರಿಯಾ ಗೊಬ್ಬರದ ಅವಶ್ಯಕತೆ ಇರುವುದಿಲ್ಲ. ಮಳೆ ಹೆಚ್ಚಾಗಿದ್ದರಿಂದ ತಗ್ಗು ಪ್ರದೇಶದಲ್ಲಿರುವ ಬೆಳೆಗೆ ಯೂರಿಯಾ ಗೊಬ್ಬರ ಹಾಕಲು ರೈತರು ಮುಂದಾಗುತ್ತಿದ್ದಾರೆ. ನಿಗದಿಯಂತೆ ಗೊಬ್ಬರ ಪೂರೈಕೆಯಾಗುತ್ತಿದ್ದು, ಇದೊಂದು ಸುಳ್ಳು ವದಂತಿ ಎಂದರು.
ಮೆಕ್ಕೆಜೋಳಕ್ಕೆ ರೋಗವಿಲ್ಲ: ಕೆಲ ತಾಲೂಕುಗಳಲ್ಲಿ ಗೋವಿನ ಜೋಳಕ್ಕೆ ರೋಗವಿರುವುದಾಗಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ತಾಲೂಕಿನಲ್ಲಿ ರೋಗ ನಿಯಂತ್ರಣಕ್ಕೆ ಯಾವ ಕ್ರಮಗಳನ್ನು ತೆಗದುಕೊಂಡಿದ್ದೀರಿ ಎಂದು ಶಾಸಕ ಬಸವರಾಜ ಶಿವಣ್ಣನವರ ಕೃಷಿ ಅಧಿಕಾರಿಯನ್ನು ಪ್ರಶ್ನಿಸಿದರು.
ಕೃಷಿ ಅಧಿಕಾರಿ ಪ್ರತಿಕ್ರಿಯಿಸಿ, ತಾಲೂಕಿನಲ್ಲಿ ರೋಗದ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಈ ಬಾರಿ ಗುಣಮಟ್ಟದ ಬೀಜ ವಿತರಿಸಿದ್ದು, ಶೇ. 90ರಷ್ಟು ಮೊಳಕೆಯೊಡೆದಿವೆ (ಜೆರ್ಮಿಶನ್) ಆದರೆ ತೇವಾಂಶ ಹೆಚ್ಚಾಗಿ ಜೌಗು ಪ್ರದೇಶಗಳಿರುವ ಕೆಲ ಜಮೀನುಗಳಲ್ಲಿ ಬೆಳವಣಿಗೆ ಕುಂಠಿತವಾಗಿರುವುದಾಗಿ ಧಾರವಾಡ ಕೃಷಿ ವಿವಿ ವಿಜ್ಞಾನಿಗಳು ಮಾಹಿತಿ ನೀಡಿರುವುದಾಗಿ ಸಭೆಗೆ ತಿಳಿಸಿದರು.
ವೇದಿಕೆಯಲ್ಲಿ ಜಿಪಂ ಅಧ್ಯಕ್ಷ ಶಂಕ್ರಣ್ಣ ಮಾತನವರ, ತಾಪಂ ಉಪಾಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಸುರೇಶ್ ಯತ್ನಳ್ಳಿ, ತಹಸೀಲ್ದಾರ್ ಸುಭಾಸ್ ಪುಲಾರೆ, ಟಿಈಓ ಕೃಷ್ಣಮೂರ್ತಿ ಇನ್ನಿತರರಿದ್ದರು.