ಸರ್ಕಾರಿ ಯೋಜನೆ ಸದುಪಯೋಗವಾಗಲಿ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಜು. 20
ಸರ್ಕಾರ ಶಾಲಾ ಮಕ್ಕಳಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿ ಗುಣಮಟ್ಟದ ಶಿಕ್ಷಣಕ್ಕಾಗಿ ಶ್ರಮಿಸುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಕಲಿಕೆಯಲ್ಲಿ ಉತ್ತಮ ಸಾಧನೆ ತೋರುವ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಮುಖ್ಯೋಪಾಧ್ಯಾಯ ಟಿ. ಶಿವಕುಮಾರ್ ಹೇಳಿದರು.
ತಾಲೂಕಿನ ಅರಳೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮವಸ್ತ್ರ ಮತ್ತು ಬ್ಯಾಗುಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಾಲಕರಿಗೆ ಮಕ್ಕಳ ವಿದ್ಯಾಭ್ಯಾಸ ಆರ್ಥಿಕ ಹೊರೆಯಾಗಬಾರದೆಂಬ ಉದ್ದೇಶದಿಂದ ಉಚಿತ ಬಟ್ಟೆ, ಪುಸ್ತಕ, ನೋಟ್ಬುಕ್, ಬ್ಯಾಗ್ಗಳು, ಬಿಸಿಯೂಟ, ಬೈಸಿಕಲ್ಲುಗಳನ್ನು ವಿತರಿಸುತ್ತಿದೆ. ಈ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ಗಮನ ಹರಿಸಬೇಕಿದೆ.
ಪಾಲಕರು ಶಾಲೆ ಹಾಗೂ ಶಿಕ್ಷಕರ ಮೇಲಷ್ಟೆ ಅವಲಂಬಿತರಾಗದೆ ತಮ್ಮ ಜವಾಬ್ದಾರಿ ಅರಿತು ಮಕ್ಕಳ ಶಿಕ್ಷಣಕ್ಕೆ ಗಮನಹರಿಸಬೇಕು ಎಂದು ಮನವಿ ಮಾಡಿದರು.
ಅರಳೇಶ್ವರ ಕ್ಲಸ್ಟರ್ನ ಸಂಪನ್ಮೂಲ ವ್ಯಕ್ತಿ ಪಿ.ಎಂ. ಚಲವಾದಿ ಮಾತನಾಡಿ, ಮಗು ಕಲಿಕೆಯಲ್ಲಿ ಮುನ್ನಡೆಯಬೇಕಾದರೆ ಪಾಲಕರು ಮನೆಯಲ್ಲಿ ಅಭ್ಯಾಸಕ್ಕೆ ಉತ್ತಮ ವಾತಾವರಣವನ್ನು ನಿರ್ಮಿಸಿಕೊಡಬೇಕು. ಗ್ರಾಮೀಣ ಪ್ರದೇಶದಲ್ಲಿಯೇ ಅನೇಕ ಪ್ರತಿಭಾವಂತಹ ವಿದ್ಯಾರ್ಥಿಗಳಿದ್ದು, ಅವರಿಗೆ ಉತ್ತಮ ಮಾರ್ಗದರ್ಶನ ನೀಡಿದಲ್ಲಿ ನಾಡಿನಲ್ಲಿ ಗುರುತಿಸುವಂತಹ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಕೂಡಾ ಸರ್ಕಾರದ ಶೈಕ್ಷಣಿಕ ಪರಿಕರಗಳ ನೀಡಿಕೆ, ಪಾಲಕರ ಸಮಸ್ಯೆಗಳನ್ನು ಗಂಭೀರವಾಗಿ ಅರಿತು ಸತತ ಅಧ್ಯಯನ ಮಾಡಿ ಯಶಸ್ಸು ಗಳಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಚಿತ ಬ್ಯಾಗ್, ಸಮವಸ್ತ್ರ, ಜಾಮಿಟ್ರಿ ಬಾಕ್ಸ್ಗಳನ್ನು ವಿತರಿಸಲಾಯಿತು.
ಇದೇ ಸಂದರ್ಭ ವಿವಿಧ ಸಂಘಗಳನ್ನು ಉದ್ಘಾಟಿಸಲಾಯಿತು. ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ತಾಲೂಕು ಮಟ್ಟದ ಚಿತ್ರಕಲೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದ ನಿಮಿತ್ತ ಸದಸ್ಯರಾದ ಬಸವಣ್ಣೆಪ್ಪ ದೇಸೂರು ವಹಿಸಿದ್ದರು. ಗ್ರಾಮದ ಹಿರಿಯರಾದ ಹನಮಂತಪ್ಪ ದೇವಗಿರಿ, ಮೂಕಪ್ಪ ಚಿಕ್ಕೇರಿ, ಅನಿಲಕುಮಾರ್ ಗೊಣ್ಣೆಣ್ಣನವರ್, ಪ್ರಭಾ ಪಾಂಡುರಂಗ, ಬಿ.ಎಂ. ಉದ್ದೇಗೌಡ್ರ, ದೀಪಾ ಜಾಂಬೇಕರ್, ಅಕ್ಷಯ ಗುನಗಾ, ರೇಷ್ಮಾ ನದಾಫ್, ಕೆ.ಎಸ್. ಗಾಯತ್ರಿ ಇತರರಿದ್ದರು.