ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ತಾಂತ್ರಿಕ ಶಿಕ್ಷಣ ಮಂಡಳಿ ನೀತಿಗೆ ವಿರೋಧ

Lingaraj Badiger
Updated On : 22 Jul 2013, 1:50 am

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಜು. 21
ರಾಜ್ಯ ತಾಂತ್ರಿಕ ಶಿಕ್ಷಣ ಮಂಡಳಿಯ ಕೆಲವು ಅವೈಜ್ಞಾನಿಕ ನೀತಿಗಳನ್ನು ವಿರೋಧಿಸಿ ತಾಲೂಕಿನ ಬಂಕಾಪುರದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಶಿಗ್ಗಾಂವಿ ತಾಲೂಕು ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮವಿ ಸಲ್ಲಿಸಿ ಆಗ್ರಹಿಸಿದರು.
ರಾಜ್ಯ ತಾಂತ್ರಿಕ ಶಿಕ್ಷಣ ಮಂಡಳಿ ಕೆಲವು ಅವೈಜ್ಞಾನಿಕ ನೀತಿಗಳಿಂದ ಸಾವಿರಾರು ಡಿಪ್ಲೊಮಾ ವಿದ್ಯಾರ್ಥಿಗಳು ಬೀದಿಪಾಲಾಗುವ ಪರಿಸ್ಥಿತಿ ಉಂಟಾಗಿದೆ. ವಿದ್ಯಾರ್ಥಿಗಳಿಗೆ ಹೊರಲಾರದಷ್ಟು ಕಠಿಣ ಮತ್ತು ಅವೈಜ್ಞಾನಿಕ ಪಠ್ಯಕ್ರಮ ಹಾಗೂ ಪರೀಕ್ಷಾ ನೀತಿಗಳನ್ನು ಜಾರಿಗೊಳಿಸಿದೆ. ಇಡೀ ರಾಜ್ಯದಲ್ಲಿ ಹೊಸ ಪಠ್ಯಕ್ರಮಕ್ಕನುಗುಣವಾಗಿ ಬೋಧನೆ ಮಾಡುವ ಅರ್ಹ ಪ್ರಾಧ್ಯಾಪಕರ ಕೊರತೆಯಿದೆ. ಅದಕ್ಕೆ ಬೇಕಾಗುವ ಅಧ್ಯಯನ ಸಾಮಗ್ರಿಗಳ ಕೊರತೆಯಿದೆ. ಪರಿಣಾಮ ರಾಜ್ಯದಲ್ಲಿ ಸಾವಿರಾರು ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುತ್ತಾರೆ. ಮುಂದಿನ ಸೆಮಿಸ್ಟರ್‌ನಲ್ಲಿ ಮುಂದುವರಿಯಲು ಅರ್ಹತೆ ಬೇಕೆಂಬ ಹೆಸರಿನಲ್ಲಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಆಟವಾಡುತ್ತಿರುವ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ(ಡಿಟಿಇ)ಯ ಈ ಕ್ರಮವನ್ನು ಎಸ್‌ಎಫ್‌ಐ ತೀವ್ರವಾಗಿ ಖಂಡಿಸಿದೆ.
ರಾಜ್ಯದಲ್ಲಿ ಪಾಲಿಟೆಕ್ನಿಕ್ ಶಿಕ್ಷಣ ಸಂಪೂರ್ಣ ಮಾರಾಟವಾಗುತ್ತಿದೆ. ಖಾಸಗೀಕರಣದ ನೀತಿಗಳನ್ನು ಜಾರಿಗೊಳಿಸಲಾಗುತ್ತಿದೆ, ವಿಪರೀತ ಶುಲ್ಕ ವಸೂಲಿ ಹಾಗೂ ಹಾಜರಾತಿ, ಆಂತರಿಕ ಅಂಕಗಳು ನೆಪವೊಡ್ಡಿ ಅನೇಕ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವುದು, ಹಣ ವಸೂಲಿ ಮಾಡುವುದು ಯೆಥೇಚ್ಛವಾಗಿ ನಡೆಯುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ರಾಜ್ಯದ ಅನೇಕ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಹೊಸದಾಗಿ ರೂಪಿಸಿರುವ ಪಠ್ಯಕ್ರಮ, ಪರೀಕ್ಷಾ ನೀತಿಗಳು, ತರಗತಿಗಳು ಮುಗಿಯುವ ಮುನ್ನವೇ ಪರೀಕ್ಷೆಗಳು ಪ್ರಾರಂಭವಾಗುವುದು, ಶೇ. 50ರಷ್ಟು ಪಠ್ಯಕ್ರಮ ಮುಗಿಯದಿದ್ದರೂ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಬೇಕಾಗಿದೆ. ಅಲ್ಲದೇ ಮೌಲ್ಯಮಾಪನ ಸರಿಯಾಗಿ ನಡೆಸದಿರುವುದು, ಈ ಎಲ್ಲಾ ಕಾರಣಗಳಿಂದಾಗಿ ರಾಜ್ಯದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದು, ಇದಕ್ಕೆ ತಾಂತ್ರಿಕ ಶಿಕ್ಷಣ ಮಂಡಳಿಯ ನೀತಿಗಳೇ ಕಾರಣ ಹೊರತು ವಿದ್ಯಾರ್ಥಿಗಳಲ್ಲ ಎಂದು ಆರೋಪಿಸಿದರು. ಪರೀಕ್ಷಾ ಮೌಲ್ಯಮಾಪನ ಸರಿಯಾಗಿ ಮಾಡಬೇಕು, ಶೀಘ್ರ ಮರುಮೌಲ್ಯಮಾಪನ ಫಲಿತಾಂಶ ಪ್ರಕಟಿಸಬೇಕು. ಏಕಕಾಲದಲ್ಲಿ 2-3 ಪರೀಕ್ಷೆಗಳನ್ನು ನಿಗದಿ ಮಾಡುವುದನ್ನು ಕೈಬಿಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಆದ್ದರಿಂದ ತಾಂತ್ರಿಕ ಶಿಕ್ಷಣ ಮಂಡಳಿಯಲ್ಲಿರುವ ಅವ್ಯವಸ್ಥೆ ಸರಿಪಡಿಸಿ, ಕಾಲೇಜುಗಳಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸಿ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಸ್‌ಎಫ್‌ಐ ಶಿಗ್ಗಾಂವಿ ತಾಲೂಕು ಸಮಿತಿ ಆಗ್ರಹಿದೆ.
ಪ್ರತಿಭಟನೆಯಲ್ಲಿ ಸುಭಾಸ ಮಾದರ, ಮಲ್ಲೇಶ ಗೋಟನವರ, ಸುಭಾನ ಸ್ಯಯ್ಯದ, ಪಂಪಾನಂದ ವೈ, ತಾಲೂಕು ಎಸ್‌ಎಫ್‌ಐ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement