ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಾಮಾಜಿಕ ಕೊಡುಗೆಯೇ ಸಾರ್ಥಕ ಜೀವನ

Lingaraj Badiger
Updated On : 22 Jul 2013, 1:49 am

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಜು. 21
ಮನುಷ್ಯನ ಹುಟ್ಟು-ಸಾವು ಸಹಜ. ಆದರೆ, ಇವೆರಡರ ಮಧ್ಯದ ಜೀವಿತಾವಧಿಯಲ್ಲಿ ಮನುಷ್ಯ ಸಾಮಾಜಿಕವಾಗಿ ನೀಡಿದ ಕೊಡುಗೆಯಿಂದಾಗಿ ಆತನ ಬದುಕು ಸಾರ್ಥಕತೆ ಹೊಂದುತ್ತದೆ. ಅಂತಹ ಸಾರ್ಥಕ ಜೀವನ ನಡೆಸಿದವರನ್ನು ಜನ ಶಕ್ತಿಯೇ ಆಧರಿಸಿ ಗೌರವಿಸುತ್ತದೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರು ಸಿದ್ದರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ಪಟ್ಟಣದ ಆನೆಕೆರೆ ಬಳಿ ಇರುವ ಎಚ್‌ಕೆಎಚ್ ಮಾವಿನ ಮಂಡಿಯ ಸಭಾ ವೇದಿಕೆಯಲ್ಲಿ ಹಾನಗಲ್ಲ ಶಾಸಕ ಮನೋಹರ ತಹಸೀಲ್ದಾರ್ ಅವರ 67ನೇ ಹುಟ್ಟುಹಬ್ಬದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಒಬ್ಬ ವ್ಯಕ್ತಿಯನ್ನು ಗುರುತಿಸಿ ಸಮಾಜವೇ ಅವರ ಹುಟ್ಟು ಹಬ್ಬವನ್ನು ಆಚರಿಸಿದಾಗ ಸಿಗುವ ಮಹತ್ವ ತಮ್ಮ ಹುಟ್ಟು ಹಬ್ಬವನ್ನು ತಾವೇ ಆಚರಿಸಿಕೊಳ್ಳುವುದರಲ್ಲಿ ಇಲ್ಲ. ಜನಸೇವೆ ಮಾಡುವ ತುಡಿತ ಇರುವವರಿಗೆ ಈ ರೀತಿ ಸನ್ಮಾನ ಆದರ, ಗೌರವ, ಮನ್ನಣೆ ದೊರೆಯುವದೂ ಅವಶ್ಯ ಎಂದರು.
ಸಮಸ್ಯೆಗೆ ಸ್ಪಂದಿಸುವ ನಾಯಕ: ನೆಹರು ಯುವಕೇಂದ್ರದ ಮಹಾನಿರ್ದೇಶಕ ಸಲೀಂ ಅಹ್ಮದ ಮಾತನಾಡಿ, ಮನೋಹರ ತಹಸೀಲ್ದಾರ್ ರಾಜಕಾರಣದಲ್ಲಿ ಅಪರೂಪದ ವ್ಯಕ್ತಿತ್ವ ಹೊಂದಿದ್ದು, ಸಮಾಜದ ಕೆಳಸ್ತರದಿಂದ ಹಿಡಿದು ಮೇಲ್ವರ್ಗದ ಜನತೆಯೊಂದಿಗೆ ಸ್ಪಂದಿಸುವ ಗುಣ ಹೊಂದಿದವರಾಗಿದ್ದಾರೆ. ಎಂತಹ ಕಷ್ಟಗಳೇ ಎದುರಾದರೂ ಪ್ರೀತಿ, ವಿಶ್ವಾಸದಿಂದ ಸಮಸ್ಯೆಗೆ ಸ್ಪಂದಿಸುವ ಹಿರಿಯ ನಾಯಕರಾಗಿದ್ದಾರೆ ಎಂದರು.
ಬಡವರ ಬಂಧು: ಮಾಜಿ ಸಂಸದ ಐ.ಜಿ. ಸನದಿ ಮಾತನಾಡಿ, ರಾಜಕೀಯ ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡ ಮನೋಹರ ತಹಸೀಲ್ದಾರ್, ಸಿಕ್ಕ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳದೆ ಜನಪರ ಕೆಲಸ ಮಾಡಲು ವಿನಿಯೋಗಿಸುತ್ತಾರೆ. ಸೋಲು-ಗೆಲುವುಗಳನ್ನು ಸಮಾಧಾನದಿಂದ ಸ್ವೀಕರಿಸುವ ವ್ಯಕ್ತಿತವುಳ್ಳ ಆಶಾದಾಯಕ ವ್ಯಕ್ತಿಯಾಗಿದ್ದಾರೆ. ನಂಬಿದವರ, ಬಡಜನತೆ ಅಭಿವೃದ್ಧಿಗೆ ಹೋರಾಟ ನಡೆಸುವ ವ್ಯಕ್ತಿಯಾಗಿದ್ದಾರೆ ಎಂದರು.
ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ವಿಶಿಷ್ಟ ವ್ಯಕ್ತಿತ್ವದ ರಾಜಕಾರಣಿ ಮನೋಹರ ತಹಸೀಲ್ದಾರ್ ಕಟ್ಟಕಡೆಯ ಬಡಜನತೆಯ ಜನಮಾನಸದಲ್ಲಿ ಶಾಸ್ವತವಾಗಿ ಉಳಿಯುವಂತಹ ವ್ಯಕ್ತಿಯಾಗಿದ್ದಾರೆ ಎಂದರು.
ಅಭಿವೃದ್ಧಿ ಕಾರ್ಯ ಮಾಡುವೆ: ಸನ್ಮಾನ ಸ್ವೀಕರಿಸಿದ ಶಾಸಕ ಮನೋಹರ ತಹಸೀಲ್ದಾರ್ ಮಾತನಾಡಿ, ತಮ್ಮ ಮೇಲಿನ ಪ್ರೀತಿ, ವಿಶ್ವಾಸದಿಂದ ಮಾಡಿರುವ ಸನ್ಮಾನ ತಮಗೆ ಹೊಸ ಚೈತನ್ಯ ನೀಡಿದೆ. ಸಾರ್ವಜನಿಕರಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ತಮ್ಮ ಪೂರ್ವಜನ್ಮದ ಪುಣ್ಯ.
ಇಂತಹ ಸಮಾರಂಭ ಏರ್ಪಡಿಸಿದ ಜನತೆಯ ಋಣವನ್ನು ತೀರಿಸಲು ಸಾಧ್ಯವಾಗುವುದಿಲ್ಲ. ಕೊನೆ ಉಸಿರು ಇರುವವರೆಗೂ ಜನ ಸೇವೆ ಮಾಡುವ ಸೌಭಾಗ್ಯ ತಮಗೆ ಸಿಗುವಂತಾಗಲಿ. ಮುಂದಿನ ದಿನಗಳಲ್ಲಿ ಎಲ್ಲ ವರ್ಗದ ಜನರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯ ಮಾಡುವೆ ಎಂದರು.
ಬಮ್ಮನಹಳ್ಳಿಯ ಶಿವಯೋಗಿಶ್ವರ ಸ್ವಾಮೀಜಿ, ಕಣ್ವಕುಪ್ಪಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಗುಂಡೂರಿನ ತಿಪ್ಪೇರುದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಇದೇ ಸಂದರ್ಭ ಹಲವಾರು ಬಡವರಿಗೆ ತಮ್ಮ ಹುಟ್ಟುಹಬ್ಬದಂಗವಾಗಿ ಶಾಸಕ ಮನೋಹರ ತಹಸೀಲ್ದಾರ್ ವಸ್ತ್ರದಾನ ಮಾಡಿದರು. ತಾಲೂಕು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಅಭಿಮಾನಿಗಳು ಶಾಸಕ ಮನೋಹರ ತಹಸೀಲ್ದಾರ್ ದಂಪತಿ ಹಾಗೂ ನೂತನವಾಗಿ ಆಯ್ಕೆಗೊಂಡ ಕಾಂಗ್ರೆಸ್ ಪುರಸಭಾ ಸದಸ್ಯರನ್ನು ಸನ್ಮಾನಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಸ್. ಬಡಿಗೇರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅಪ್ಪುಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಜಿಪಂ ಸದಸ್ಯ ಮಹದೇವಪ್ಪ ಬಾಗಸರ ವೇದಿಕೆಯಲ್ಲಿದ್ದರು. ಕೆಪಿಸಿಸಿ ಸದಸ್ಯ ಸತೀಶ ದೇಶಪಾಂಡೆ, ರಾಜಶೇಖರ್ ಸಾಲಿಮಠ, ವಿಷ್ಣುಕಾಂತ ಜಾಧವ, ಡಾ೤ ಈರಣ್ಣ ಕಳಸದ, ಯಾಸೀರ್‌ಖಾನ್ ಪಠಾಣ, ರವಿಕುಮಾರ ಬೆಲ್ಲದ ಪಾಲ್ಗೊಂಡಿದ್ದರು. ಪುರಸಭೆ ಮಾಜಿ ಅಧ್ಯಕ್ಷ ಯಲ್ಲಪ್ಪ ಕಿತ್ತೂರ ಪ್ರಾಸ್ತಾವಿಕ ಮಾತನಾಡಿದರು. ಕೆ.ಎಲ್. ದೇಶಪಾಂಡೆ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement