ವಿವಿಧ ಬೇಡಿಕೆ ಈಡೇರಿಕೆಗೆ ಕೃಷಿಕರ ಆಗ್ರಹ
ಬ್ಯಾಡಗಿ: ಸುವರ್ಣಭೂಮಿ ಯೋಜನೆ ಮುಂದುವರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ರೈತ ಹೋರಾಟ ಸಮಿತಿ ತಾಲೂಕು ಘಟಕದ ಕಾರ್ಯಕರ್ತರು ಸೋಮವಾರ ಮನವಿ ಸಲ್ಲಿಸಿ, ಸರ್ಕಾರಕ್ಕೆ ಒತ್ತಾಯಿಸಿದರು.
ಪಟ್ಟಣದ ಸುಭಾಸ್ ವೃತ್ತದಿಂದ ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿದ ನೂರಾರು ರೈತರು ಬಳಿಕ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಮುರಿಗೆಪ್ಪ ಶೆಟ್ಟರ್ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಬೀಜ, ಗೊಬ್ಬರ ಸೇರಿದಂತೆ ಕೃಷಿ ಚಟುವಟಿಕೆ ಪ್ರಾರಂಭಕ್ಕೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಹಿಂದಿನ ಸರ್ಕಾರ ಸುವರ್ಣಭೂಮಿ ಯೋಜನೆ ಮೂಲಕ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ತಲಾ ರು. 10 ಸಾವಿರ ಅನುದಾನ ನೀಡಿದೆ. ಆದರೆ, ತಾಲೂಕಿನಲ್ಲಿ ಅರ್ಜಿ ಸಲ್ಲಿಸಿದ 11,793 ರೈತರ ಪೈಕಿ 5,703 ಫಲಾನುಭವಿಗಳಿಗೆ ಅನುದಾನ ದೊರೆತಿದ್ದರೂ ಸುಮಾರು 6,090 ರೈತರು ಇದರಿಂದ ವಂಚಿತರಾಗಿದ್ದು, ಸುವರ್ಣಭೂಮಿ ಯೋಜನೆ ಮುಂದುವರಿಸುವಂತೆ ಆಗ್ರಹಿಸಿದರು.
ರು. 10 ಸಾವಿರಕ್ಕೆ ಹೆಚ್ಚಿಸಿ: ಬಿತ್ತನೆ ಮಾಡಿದ ಮೆಕ್ಕೆಜೋಳದ ಬೀಜ ತಿನ್ನಲು ಕಾಡು ಹಂದಿಗಳು ಹಾಗೂ ಮೊಳಕೆಯೊಡೆದ ಸಸಿಗಳನ್ನು ತಿನ್ನಲು ಜಿಂಕೆಗಳು ಪ್ರಾರಂಭಿಸಿದ್ದು, ಮತ್ತೊಂದು ಸಮಸ್ಯೆಯನ್ನು ಸೃಷ್ಟಿಸಿವೆ.
ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಬೇಲಿ ಹಾಕಿ ವನ್ಯ ಮೃಗಗಳಿಂದ ರೈತನ ಬೆಳೆ ಸಂರಕ್ಷಿಸಲು ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹಾನಿಗೊಳಗಾದ ಪ್ರತಿ ಹೆಕ್ಟರ್ ಕೃಷಿಭೂಮಿಗೆ ಕೇವಲ ರು. 2 ಸಾವಿರ ಪರಿಹಾರ ನೀಡುತ್ತಿರುವ ಸರ್ಕಾರ ಪರಿಹಾರದ ಮೊತ್ತವನ್ನು ರು. 10 ಸಾವಿರಕ್ಕೆ ಹೆಚ್ಚಿಸುವಂತೆ ಆಗ್ರಹಿಸಿದರು.
ಸಾಲಮನ್ನಾ ಮಾಡಿ: ಕೃಷಿ ಚಟುವಟಿಕೆಗಳಲ್ಲಿ ತೊಡಗಿ ಆಕಸ್ಮಿಕ ಸಾವನ್ನಪ್ಪಿದ ಕೃಷಿಕನಿಗೆ ರೈತ ಸಂಜೀವಿನ ಯೋಜನೆಯಡಿ ಸಂತ್ರಸ್ತ ಕುಟುಂಬಕ್ಕೆ ಕೇವಲ ರು. 1 ಲಕ್ಷ ಪರಿಹಾರ ದೊರೆಯುತ್ತಿದೆ. ಕೃಷಿಯನ್ನು ಮುನ್ನಡೆಸಿಕೊಂಡು ಹೋಗುವುದೇ ದುಸ್ತರವಾದ ಇಂದಿನ ದಿನಗಳಲ್ಲಿ ಬಹುತೇಕ ರೈತ ಕುಟುಂಬಗಳು ಸಾಲದ ಶೂಲಕ್ಕೆ ಸಿಲುಕಿ ನಲುಗಿವೆ. ಇದ್ದಕ್ಕಿದ್ದಂತೆ ರೈತನೇ ಮೃತಪಟ್ಟರೇ ಇನ್ನಷ್ಟು ಸಮಸ್ಯೆಗಳು ಸೃಷ್ಟಿಯಾಗಲಿದ್ದು, ಈ ಹಿನ್ನೆಲೆಯಲ್ಲಿ ಪರಿಹಾರ ಮೊತ್ತವನ್ನು ರು. 5 ಲಕ್ಷಕ್ಕೆ ಹೆಚ್ಚಿಸಬೇಕು ಹಾಗೂ ಆತನ ಕೃಷಿ ಸಂಬಂಧಿತ ಸಾಲವನ್ನು ಮನ್ನಾ ಮಾಡುವಂತೆ ಆಗ್ರಹಿಸಿದರು.
ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿನ ರೈತನ ಸಾಲ ಮನ್ನಾ ಮಾಡಬೇಕು, ಹಿಂದಿನ ಸರ್ಕಾರ ಘೋಷಿಸಿದ ರು. 25 ಸಾವಿರ ಸಾಲಮನ್ನಾ ಹಣವನ್ನು ಬೇಗನೆ ಬಿಡುಗಡೆಗೊಳಿಸಬೇಕು, ಅಕ್ರಮ-ಸಕ್ರಮ ಯೋಜನೆಯಡಿ ರೈತರ ಪಂಪ್‌ಸೆಟ್‌ಗಳನ್ನು ಅಧಿಕೃತಗೊಳಿಸಿ ಗುಜರಾತ್ ಮಾದರಿಯಲ್ಲಿ ದಿನದ 24 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಒದಗಿಸಬೇಕು, ಗೋಹತ್ಯೆ ನಿಷೇಧ ಕಾಯಿದೆ ಮುಂದುವರಿಸಬೇಕು, ಸಾಲದ ಶೂಲಕ್ಕೆ ಸಿಕ್ಕು ಆತ್ಮಹತ್ಯೆ ಮಾಡಿಕೊಳ್ಳುವ ರೈತನ ಕುಟುಂಬಕ್ಕೆ ರು. 5 ಲಕ್ಷ ಪರಿಹಾರ ನೀಡಬೇಕು, 60 ವರ್ಷ ಪೂರೈಸಿದ ರೈತನಿಗೆ ಪಿಂಚಣಿ ಯೋಜನೆ ಪ್ರಾರಂಭಿಸಬೇಕು, ರೈತನ ಪ್ರತಿಯೊಂದು ಬೆಳೆಗೆ ಸರ್ಕಾರ ಬೆಂಬಲ ಬೆಲೆ ನಿಗದಿಪಡಿಸುವುದು ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಮನವಿ ಮೂಲಕ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹನುಮಂತಪ್ಪ ಮಾಗೋಡ, ನಿಂಗಪ್ಪ ಆರಳಿಮಟ್ಟಿ, ರುದ್ರಪ್ಪ ಹೊಸಮನಿ, ಈರಪ್ಪ ಸಂಕಣ್ಣನವರ, ಮುತ್ತಪ್ಪ ಸಂಕಣ್ಣನವರ, ಬಸವಂತಪ್ಪ ದಾಸರ, ಮಂಜುನಾಥ ಬೆಳಕೇರಿ, ಕಲ್ಲಪ್ಪ ತಳಮನಿ, ಈರಣ್ಣ ಚೌಟಿ, ಮಹದೇವಪ್ಪ ಎಲಿ, ರಾಜು ಚನ್ನಗೌಡ್ರ, ನಾಗರಾಜ ದೇಸೂರ ಗುರಪ್ಪ ಹೊಳಲ, ಚನ್ನಬಸಪ್ಪ ಮೋಟೆಬೆನ್ನೂರು ಇನ್ನಿತರರಿದ್ದರು.