ಶಿಕ್ಷಕರಿಗೆ ಸೂಕ್ತ ನ್ಯಾಯ ಒದಗಿಸುವೆ
ರಾಣಿಬೆನ್ನೂರು: ಮತದಾನದಿಂದ ವಂಚಿತಗೊಂಡಿರುವ ಪ್ರೌಢಶಾಲೆಯ ಶಿಕ್ಷಕ ಮತದಾರರಿಗೆ ಮತದಾನದ ಹಕ್ಕನ್ನು ಒದಗಿಸುವುದೇ ನನ್ನ ಉದ್ದೇಶವಾಗಿರುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರ ತಾಲೂಕು ಸಂಘಕ್ಕೆ ಪ್ರೌಢಶಾಲಾ ಶಿಕ್ಷಕರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ವಿಜಯಕುಮಾರ ಮಹೇಂದ್ರಕರ ಹೇಳಿದರು. ಚುನಾವಣೆಯ ಫಲಿತಾಂಶ ಪ್ರಕಟಗೊಂಡ ನಂತರ ತಮ್ಮ ಅಭಿಮಾನಿಗಳೊಂದಿಗೆ ನಗರದಲ್ಲಿ ಸಂಜೆ ವಿಜಯೋತ್ಸವ ಆಚರಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಿಲ್ಲೆಯಲ್ಲಿಯೇ ದೊಡ್ಡ ತಾಲೂಕೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಣಿಬೆನ್ನೂರು ತಾಲೂಕಿನಲ್ಲಿ 16 ಸರ್ಕಾರಿ ಪ್ರೌಢ ಶಾಲೆಗಳಿದ್ದು, ಈ ಹಿಂದಿನ ಅವಧಿಯಲ್ಲಿ ಸರ್ಕಾರಿ ಹೈಸ್ಕೂಲ್ ಶಿಕ್ಷಕರ ಜನಪ್ರತಿನಿಧಿಗಳಾಗಿದ್ದವರು ಯಾವುದೇ ರೀತಿಯ ಬೇಧ ಭಾವವನ್ನೆಣಿಸದೆ ಎಲ್ಲ ಶಾಲೆಯ ಶಿಕ್ಷಕರೊಂದೆ ಎಂಬ ಮನಸ್ಧಿತಿಯಿಂದ ಕರ್ತವ್ಯ ನಿರ್ವಹಿಸದಿರುವ ಕಾರಣ ಶಾಲೆಗಳು ಹಿಂದುಳಿದೆ ಎಂದು ದೂರಿದರು. ತಾಲೂಕಿನ 16 ಪ್ರೌಢಶಾಲೆಗಳಲ್ಲಿ ಕೇವಲ 3 ಪ್ರೌಢಶಾಲೆಗಳ ಶಿಕ್ಷಕ ಮತದಾರರು, ಸೋಮವಾರ ನಡೆದ ಚುನಾವಣೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಲು ಹಾಗೂ ಉಳಿದ 13 ಪ್ರೌಢಶಾಲೆಗಳ ಶಿಕ್ಷಕ ಮತದಾರರು ಮತದಾನದಿಂದ ವಂಚಿತರಾಗಲು ಈ ಹಿಂದಿನ ಅವಧಿಯಲ್ಲಿ ಕಾರ್ಯನಿರ್ವಹಿಸಿರುವ ಶಿಕ್ಷಕರ ಪ್ರತಿನಿಧಿಗಳೆ ಕಾರಣರಾಗಿರುತ್ತಾರೆ. ಕಾರಣ ಮತದಾನದ ಹಕ್ಕಿನಿಂದ ವಂಚಿತರಾಗಿರುವ 13 ಪ್ರೌಢ ಶಾಲೆಯ ಶಿಕ್ಷಕರಿಗೆ ಮತದಾನದ ಹಕ್ಕನ್ನು ಕೂಡಿಸುತ್ತೇನೆ. ಸೋಮವಾರ ನಡೆದ ಚುನಾವಣೆಯಲ್ಲಿ 16 ಪ್ರೌಢಶಾಲೆಗೆ ಶಿಕ್ಷಕರಲ್ಲಿ 3 ಪ್ರೌಢಶಾಲೆಯ 32 ಶಿಕ್ಷಕರು ನನಗೆ ಮತ ನೀಡಿದ್ದಾರೆ. ಮತ ನೀಡಿರುವ ಗುಡಿಹೋನ್ನತ್ತಿ, ಹಿರೇಮಾಗನೂರು ಹಾಗೂ ಹೊಸ ಹೂಲಿಹಳ್ಳಿಯ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಮತದಾರರಿಗೆ ಅಭಿನಂದಿಸಿರುವುದಾಗಿ ಶಿಕ್ಷಕರ ಪ್ರತಿನಿಧಿಯಾಗಿ ಆಯ್ಕೆಯಾಗಿರುವ ವಿಜಯಕುಮಾರ ಮಹೇಂದ್ರಕರ ತಿಳಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಪ್ರತಿನಿಧ ಎಂ.ಡಿ. ದ್ಯಾಮಣ್ಣನವರ, ಜಿ.ಎಚ್. ಸಾವಂತಲವರ ಹಾಗೂ ಅಭಿಮಾನಿ ಶಿಕ್ಷಕರಾದ ಸುರೇಶ ಕರೂರು, ಎಸ್‌ಎಚ್. ಗೌಡರ, ಬಸವರಾಜ ಅಜ್ಮನಿ ಇದ್ದರು.
ಶಿಕ್ಷಕರ ಸಂಘಕ್ಕೆ ಆಯ್ಕೆ
ರಾಣಿಬೆನ್ನೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ 8 ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಆರೋಗ್ಯ ಇಲಾಖೆ ಎಸ್.ವಿ. ಹಳ್ಳೂರ್, ಅಶೋಕ ಶಿವರಡ್ಡೇರ, ಮಾಲತೇಶ ಕಡೆಮನಿ, ಶಂಭುಲಿಂಗಪ್ಪ ಕಾರಗಿ, ವಿಕ್ರಮ್ ಸಣ್ಣಮನಿ, ಜಿ.ಆರ್. ತಹಸೀಲ್ದಾರ್, ಪಿ.ಯು. ಕಲಾಲ್, ವಿಜಯಕುಮಾರ ಮಹೇಂದ್ರಕರ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳಾದ ಸಿ.ಜಿ. ಚಿಕ್ಕೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.