ಸಾರ್ವಜನಿಕ ವಸ್ತು ವಶ: ಕ್ರಮಕ್ಕೆ ರಕ್ತಾಕ್ಷರ ಮನವಿ
ರಾಣಿಬೆನ್ನೂರು: ತಾಲೂಕಿನ ಹುಲ್ಲತ್ತಿ ಗ್ರಾಮಸ್ಥರು ಮತ್ತು ಹುಲ್ಲತ್ತಿ ಲಂಬಾಣಿ ತಾಂಡಾದ ಮಧ್ಯೆ ಕೇಂದ್ರ ಸರ್ಕಾರದ ಯೋಜನೆ ಅಡಿ ನಿರ್ಮಿಸಿದ್ದ ರಸ್ತೆ, ಕುಡಿಯುವ ನೀರು ಪೂರೈಕೆಗೆ ಜಿಪಂನಿಂದ ಕೊರೆಸಿದ ಬೋರ್‌ವೆಲ್-ಪಂಪ್‌ಹೌಸ್‌ನ್ನು ವಶಪಡಿಸಿಕೊಂಡಿರುವವರ ಮೇಲೆ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ಆಗ್ರಹಿಸಿರುವ ಗ್ರಾಮಸ್ಥರು ತಮ್ಮ ರಕ್ತಾಕ್ಷರಗಳಿಂದ ಬರೆದ ಪತ್ರವನ್ನು ಅಂಚೆ ಮೂಲಕ ರಾಜ್ಯಪಾಲರಿಗೆ ರವಾನಿಸಿದರು.
ಸೋಮವಾರ ಹುಲ್ಲತ್ತಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಸೇರಿದ್ದ ಗ್ರಾಮಸ್ಧರು, ಸರ್ಕಾರದ ಯೋಜನೆಯಿಂದ ಗ್ರಾಮದ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿದ್ದ ರಸ್ತೆ ಹಾಗೂ ಕುಡಿಯುವ ನೀರೋದಗಿಸುವ ಬೋರವೆಲ್‌ನ್ನು ವಶಪಡಿಸಿಕೊಂಡಿರುವ ವ್ಯಕ್ತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸಮಸ್ಯೆಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಸಂಬಧಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಮ್ಮ ರಕ್ತಾಕ್ಷರಗಳಿಂದ ರಾಜ್ಯಪಾಲರಿಗೆ ಪತ್ರ ಬರೆದು ರವಾನಿಸಿದರು.
ರಕ್ತಾಕ್ಷರಗಳಿಂದ ರಾಜ್ಯಪಾಲರಿಗೆ ಪತ್ರ ಬರೆಯುವ ಕಾರ್ಯದ ನೇತೃತ್ವ ವಹಿಸಿದ್ದ ಯುವ ಮುಖಂಡ ಜಗದೀಶ ಕೆರೂಡಿ ಮಾತನಾಡಿ, ತಾಲೂಕು ಕೇಂದ್ರ ಸ್ಥಾನದಿಂದ ಸುಮಾರು 4 ಕಿ.ಮೀ ಅಂತರದಲ್ಲಿರುವ ಹುಲ್ಲತ್ತಿ ಗ್ರಾಮ-ಹುಲ್ಲತ್ತಿ ಲಂಬಾಣಿ ತಾಂಡಾದ ಮಾರ್ಗವಾಗಿ ದೇವರಗುಡ್ಡದ ಹತ್ತಿರ ಹಾದು ಹೋಗಿರುವ ಮಾಸೂರು-ಮುಂಡರಗಿ ರಾಜ್ಯ ಹೆದ್ದಾರಿಗೆ ಸೇರುವ ಕಚ್ಚಾ ರಸ್ತೆಯನ್ನು ಪಂಚಾಯತ್ ಎಂಜಿನಿಯರಿಂಗ್ ಇಲಾಖೆಯವರು 2005-06ರಲ್ಲಿ ಸುಮಾರು ರು. 1.05 ಲಕ್ಷ ಖರ್ಚು ಮಾಡಿ ಪಕ್ಕಾ ರಸ್ತೆಯನ್ನಾಗಿ ನಿರ್ಮಿಸಿದ್ದರು.
ಸರ್ಕಾರ ಇಷ್ಟೆಲ್ಲ ಹಣ ಖರ್ಚು ಮಾಡಿ ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆ ಮತ್ತು ಕುಡಿಯುವ ನೀರೋದಗಿಸುವದಕ್ಕಾಗಿ ಬೋರ್‌ವೆಲ್ ಹಾಗೂ ಪೌಂಪ್‌ಹೌಸ್‌ನ್ನು ನಿರ್ಮಿಸುವವರೆಗೂ ಸುಮ್ಮನಿದ್ದ ರಸ್ತೆ ಪಕ್ಕದ ಜಮೀನಿನ ಮಾಲೀಕ ಪ್ರಕಾಶ ಉಜ್ಜಪ್ಪ ಕೊಪ್ಪದ ಎಂಬುವವರು ಕಳೆದ 2 ವರ್ಷಗಳಿಂದೀಚೆಗೆ ರಸ್ತೆ ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರೋದಗಿಸುವ ಬೋರ್‌ವೆಲ ವಶಪಡಿಸಿಕೊಂಡು ಹಾನಿಗೊಳಿಸಿದ್ದಾರೆ. ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಜಗದೀಶ ಕೆರೂಡಿ ಆಗ್ರಹಿಸಿದರು.
ಸೂಕ್ತ ಕ್ರಮಕ್ಕೆ ಡಿಸಿಗೆ ಮನವಿ: ಹುಲ್ಲತ್ತಿ ಗ್ರಾಮದ ಸಾರ್ವಜನಿಕ ರಸ್ತೆ ಮತ್ತು ಗ್ರಾಮಸ್ಥರಿಗೆ ಕುಡಿಯುವ ನೀರೋದಗಿಸುವ ಬೋರ್‌ವೆಲ್ ಹಾಗೂ ಪೌಂಪ್‌ಹೌಸ್‌ನ್ನು ವಶಪಡಿಸಿಕೊಂಡು ಹಾನಿಗೊಳಿಸಿರುವ ಕುರಿತು ಸಾರ್ವಜನಿಕರು ಸಲ್ಲಿಸಿದ್ದ ಅರ್ಜಿ ಆಧಾರದ ಮೇಲೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ತಹಸೀಲ್ದಾರ್ ಕೆ.ಎಚ್. ಶಿವಕುಮಾರ ತಿಳಿಸಿದರು.
ಅಂಚೆ ಮೂಲಕ ರಾಜ್ಯಪಾಲರಿಗೆ ಕಳುಹಿಸಿರುವ ಪತ್ರಕ್ಕೆ ಹುಲ್ಲತ್ತಿ ಜಗದೀಶ ಕೆರೂಡಿ, ಪರಮೇಶ ಕಾಳಮ್ಮನವರ, ಗುರುರಾಜ ತಿಳುವಳ್ಳಿ, ಹನುಮಂತಪ್ಪ ವಡ್ಡರ, ಶಿವಪ್ಪ ಹೊನ್ನಮ್ಮನವರ, ಹಾಲೇಶ ಬಸಾಪುರ, ರಾಜು ಗೋಣೆಮ್ಮನವರ, ಹನುಮಂತಪ್ಪ ಗೊಣೆಮ್ಮನವರ ರಕ್ತಾಕ್ಷರ ಸಹಿ ಮಾಡಿದ್ದಾರೆ.