ಘನತ್ಯಾಜ್ಯ ಸೂಕ್ತವಾಗಿ ವಿಲೇವಾರಿಗೊಳಿಸಿ
ಹಿರೇಕೆರೂರು: ಹಿರೇಕೆರೂರು ಪಟ್ಟಣದಲ್ಲಿ ಸುಮಾರು 10ಕ್ಕೂ ಹೆಚ್ಚು ಪ್ರಾಣಿ ಮತ್ತು ಪಕ್ಷಿಗಳ ವಧಾಗಾರಗಳಿವೆ. ಈ ವಧಾಗಾರಗಳಿಂದ ಉತ್ಪತ್ತಿಯಾಗುತ್ತಿರುವ ಘನತ್ಯಾಜ್ಯ ಸೂಕ್ತ ರೀತಿ ವಿಲೇವಾರಿಯಾಗದೆ ಸಾರ್ವಜನಿಕರಿಗೆ ಕಲುಷಿತ ಪರಿಸರ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸೂಕ್ತವಾಗಿ ಘನತ್ಯಾಜ್ಯ ವಿಲೇವಾರಿಗೊಳಿಸಬೇಕು ಎಂದು ವಧಾಗಾರಗಳ ಮಾಲೀಕರಿಗೆ ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ ಗೋಪಿನಾಥ ತಿಳಿಸಿದರು.
ಹಿರೇಕೆರೂರು ಪಟ್ಟಣದಲ್ಲಿರುವ ವಿವಿಧ ವಧಾಗಾರ ಮಾಲೀಕರಿಗೆ ಜರುಗಿದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಆದರೆ, ಒದ್ದೆಯಾದ ಪ್ರಮಾಣಗಳ ತ್ಯಾಜ್ಯವನ್ನು ಸೂಕ್ತ ರೀತಿ ವಿಲೇವಾರಿ ಮಾಡದಿರುವುದು ಪರಿಸರ ಕಲುಷಿತಗೊಳ್ಳಲು ಕಾರಣವಾಗಿದೆ. ಈ ಕುರಿತು ಮಾಲೀಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ವಧಾಗಾರಗಳ ಘನತ್ಯಾಜ್ಯವನ್ನು ಬೇಕಾಬಿಟ್ಟಿ ಎಸೆಯುತ್ತಿರುವುದರಿಂದ ಇತರ ಜೀವಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದಾಗಿ ಕುಡಿಯುವ ನೀರು, ಆಹಾರ, ಮೇವು ಮೊದಲಾದವುಗಳು ಕಲುಷಿತಗೊಂಡು ವಿವಿಧ ರೀತಿಯ ಭಯಾನಕ ರೋಗಗಳು ಉದ್ಬವವಾಗುತ್ತವೆ. ಆದ್ದರಿಂದ ಘನತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು. ವಿವಿಧ ಘೋಷಣೆಗಳೊಂದಿಗೆ ಪಟ್ಟಣದ ಮುಖ್ಯ ಬೀದಿಯಲ್ಲಿ ಜಾಥಾ ನಡೆಸುವ ಮೂಲಕ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಆರ್. ರಾಜಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಜಾಥಾದಲ್ಲಿ ಪಶುವೈದ್ಯರಾದ ಎಂ.ಎಂ. ಗವಿಯಪ್ಪನವರ, ಹಾಲೇಶ ನಾಯಕ, ರಾಘವೇಂದ್ರ ಡಾ ಹೇಮಂತಕುಮಾರ, ಮಾರಾಜ ಖತೀಬ್ ಮುಲ್ಲಾ, ಗದಿಗೆಪ್ಪ ಆರಿಕಟ್ಟಿ, ಸಿಬ್ಬಂದಿ ಕರಿಯಪ್ಪ ಲಮಾಣಿ ಆರ್.ಎಚ್. ಹಾರಗೊಪ್ಪ, ಆರ್.ಎಸ್. ಬೇವಿನಹಳ್ಳಿ. ಎಂ.ಎ. ಸಯ್ಯದ, ಎಂ.ಎಂ. ತಾಸೇದ, ಜಿ.ಎನ್. ಸೋಮಸುಂದರ, ಎಂ.ಎಸ್. ಬಡಿಗೇರ, ಇ. ನಾರಪ್ಪ, ಮರುಳಸಿದ್ದಯ್ಯ, ಎಂ.ಆರ್. ಅಂತ್ರವಳ್ಳಿ, ಪ್ರಶಾಂತ ಕಪ್ಪರದ, ಎಂ.ಕೆ. ತಳವಾರ ವಿವಿಧ ಗ್ರಾಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪಶುವೈದ್ಯ ಸಿಬ್ಬಂದಿ ಇತರರು ಪಾಲ್ಗೊಂಡಿದ್ದರು.