ತ್ಯಾಜ್ಯ ವ್ಯವಸ್ಥಿತ ವಿಲೇವಾರಿಗೊಳಿಸಿ
ಹಾನಗಲ್ಲ: ಮಾಂಸ ಮಾರಾಟ ಕೇಂದ್ರಗಳಿಂದ ಹೊರಬರುವ ತ್ಯಾಜ್ಯಗಳನ್ನು ವ್ಯವಸ್ಥಿತವಾಗಿ ವಿಲೇವಾರಿಗೊಳಿಸದಿದ್ದಲ್ಲಿ ಸರ್ಕಾರದ ಆದೇಶದನ್ವಯ ಅಂಗಡಿಗಳ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ ಎನ್.ಎಫ್. ಕಮ್ಮಾರ ಎಚ್ಚರಿಕೆ ನೀಡಿದರು.
ಮಾಂಸ ಮಾರಾಟ ಕೇಂದ್ರಗಳಲ್ಲಿ ಆಹಾರಕ್ಕೆ ಬಳಕೆಯಾಗದ ವಸ್ತುಗಳ ವಿಲೇವಾರಿ ಹಾಗೂ ಮರುಬಳಕೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಂಸ ಮಾರಾಟಗಾರರು ಕುರಿ-ಕೋಳಿಗಳ ಮಾಂಸ ಮಾರಾಟ ಕೇಂದ್ರಗಳಲ್ಲಿ ಬರುವ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಆದ್ದರಿಂದ ಮಾಂಸ ಮಾರಾಟಗಾರರು ತ್ಯಾಜ್ಯವನ್ನು ವ್ಯವಸ್ಥಿತವಾಗಿ ಗುಂಡಿ ತೆಗೆದು ಅದರಲ್ಲಿ ಹಾಕಿ ಮುಚ್ಚಬೇಕು. ಬಳಿಕ ಇದನ್ನು ಗೊಬ್ಬರವಾಗಿ ಬಳಸುವ ಮೂಲಕ ಲಾಭ ಪಡೆಯಬಹುದಾಗಿದೆ ಎಂದು ಸಲಹೆ ನೀಡಿದರು.
ಇಲಾಖೆ ಸೂಚಿಸಿದಂತೆ ಮಾಡದೆ ಹೋದಲ್ಲಿ ದಂಡ ಹಾಗೂ ಶಿಕ್ಷೆ ನೀಡುವುದಲ್ಲದೇ ಲೈಸೆನ್ಸ್‌ಗಳನ್ನು ರದ್ದು ಪಡಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ ಎಂದು ಮಾಂಸದಂಗಡಿಗಳ ಮಾಲೀಕರಿಗೆ ಕಮ್ಮಾರ ಎಚ್ಚರಿಸಿದರು. ಕೂಸನೂರಿನ ಪಶುವೈದ್ಯಾಧಿಕಾರಿ ಡಾ ಗಂಗಾಧರ ಮಾತನಾಡಿ, ಪ್ರಾಣಿಗಳ ತ್ಯಾಜ್ಯವನ್ನು ಎರಡು ಮೀಟರ್ ಆಳದ ಗುಂಡಿಯಲ್ಲಿ ಹಾಕಿ ಅದರ ಮೇಲೆ ಸುಣ್ಣದ ಪೌಡರ್ ಹಾಕಿ ಮುಚ್ಚಬೇಕು. ಅದು ಭೂಮಿಯಲ್ಲಿದ್ದು ರೋಗಗಳನ್ನು ಹರಡದಂತೆ ಕಾಪಾಡುತ್ತದೆ ಎಂದರು.
ತ್ಯಾಜ್ಯವನ್ನು ಚರಂಡಿಗಳಲ್ಲಿ ಹಾಕುತ್ತಿರುವುದು ಬೆಳಕಿಗೆ ಬಂದಿದೆ. ಅದರ ಬದಲು ತ್ಯಾಜ್ಯವನ್ನು ಗುಂಡಿಯಲ್ಲಿ ಹಾಕಿ ಅದರ ಮೇಲೆ ಗೋವಿನ ಜೋಳದ ದಂಟುಗಳನ್ನು ಹಾಕಿ ಮೂರ್ನಾಲ್ಕು ತಿಂಗಳ ನಂತರ ಗೊಬ್ಬರವಾಗುತ್ತದೆ. ಅಲ್ಲದೇ ರೋಗಗಳು ಹರಡದಂತೆ ಪರಿಸರ ಸ್ವಚ್ಛವಾಗಿರುತ್ತದೆ ಎಂದು ತಿಳಿಸಿದರು.
ಮಾಂಸದಂಗಡಿಗಳಲ್ಲಿ ಕುರಿ-ಕೋಳಿಗಳ ತ್ಯಾಜ್ಯವಸ್ತುವನ್ನು ಚರಂಡಿಗಳಲ್ಲಿ ಹಾಕದೆ ಅದರ ವಿಲೇವಾರಿ ಕುರಿತು ಮಾರಾಟಗಾರರಿಗೆ ಅರಿವು ಮೂಡಿಸಲು ಹಾನಗಲ್ಲ ತಾಲೂಕು ಪಶು ವೈದ್ಯಾಧಿಕಾರಿ ಕಾರ್ಯಾಲಯದಿಂದ ಪಶುವೈದ್ಯಾಧಿಕಾರಿಗಳು ಶುಕ್ರವಾರ ಜಾಥಾ ನಡೆಸಿ ಅರಿವು ಮೂಡಿಸಿದರು. ಇದಕ್ಕೂ ಮುನ್ನ ಮಾಂಸ ಮಾರಾಟದಿಂದ ಆಹಾರಕ್ಕೆ ಬಳಕೆಯಾಗದ ವಸ್ತುಗಳ ವಿಲೇವಾರಿ ಹಾಗೂ ಮರುಬಳಕೆ ಕುರಿತು ಅರಿವು ಮೂಡಿಸುವ ಜಾಥಾಕ್ಕೆ ಹಾನಗಲ್ಲ ತಾಲೂಕು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಎನ್.ಎಫ್. ಕಮ್ಮಾರ ಚಾಲನೆ ನೀಡಿದರು. ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿ ಮಾಂಸದಂಡಿಯ ಮಾಲೀಕರಿಗೆ ತ್ಯಾಜ್ಯ ವಿಲೇವಾರಿ ಕುರಿತು ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕಿನ ಪಶು ವೈದ್ಯಾಧಿಕಾರಿ ಆರ್.ಜಿ. ಹೆಗಡೆ, ಪ್ರವೀಣ, ಚಂದ್ರಪ್ಪ ನರಸಗೊಂಡರ, ನಿಂಗಪ್ಪ ಹಕಾರೆ, ಸಿಬ್ಬಂದಿ ಬಿ.ಬಿ. ಗಾಮಣ್ಣನವರ, ಬಿ.ಬಿ. ಭಾವಿಕಟ್ಟಿ, ಆರ್.ಎಂ. ಮೀಸಿ, ಎ.ಎಂ. ಜಕಾತಿ, ಕೆ.ಬಿ. ಕುನ್ನೂರ, ಜೆ.ಡಿ ಪವಾರ, ಎಂ.ಎಫ್. ಹನಕನಹಳ್ಳಿ, ಸಿ.ಎ. ಪಾಟೀಲ, ಎಂ.ಜಿ ಜಿದ್ದಗಿ, ಶರಣಪ್ಪ ಮೇತ್ರಿ, ಎಫ್.ಎಲ್, ಶೇರಖಾನೆ ಮುಂತಾದವರು ಉಪಸ್ಥಿತರಿದ್ದರು.