ಪೋಷಕಾಂಶ ಕೊರತೆಯಿಂದ ಬೆಳೆ ಕುಂಠಿತ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜು. 23
ಸರ್ಕಾರದಿಂದ ರಿಯಾಯಿತಿ ದರದಲ್ಲಿ ವಿತರಿಸಿದ ಗೋವಿನಜೋಳದ ಬೀಜಗಳು ಉತ್ತಮ ಗುಣಮಟ್ಟದ್ದಾಗಿದ್ದು, ಆದರೆ, ಕೆಲ ಕೃಷಿಭೂಮಿಗಳಲ್ಲಿ ಸತು, ರಂಜಕ, ಪೋಟ್ಯಾಷ್ ಹಾಗೂ ಇನ್ನಿತರ ಲಘು ಪೋಷಕಾಂಶಗಳ ಕೊರತೆ ಕಂಡುಬಂದಿದೆ ಎಂದು ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಸಸ್ಯಪಾಲನಾ ತಜ್ಞ ಡಾ ವಾಲಿ ಹೇಳಿದರು.
ತಾಲೂಕಿನ ಕೆಲ ಭಾಗದಲ್ಲಿ ಗೋವಿನಜೋಳದ ಬೆಳೆ ಕಂದು ಬಣ್ಣಕ್ಕೆ ಹಾಗೂ ಎಲೆಗಳು ಹಳದಿಯಾಗಿ ಬೆಳವಣಿಗೆ ಕುಂಠಿತಗೊಂಡ ಪ್ರದೇಶಗಳಿಗೆ ಧಾರವಾಡ ಕೃಷಿ ವಿವಿಯ ವಿಜ್ಞಾನಿಗಳು ಮತ್ತು ತಾಲೂಕು ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಬ್ಯಾಡಗಿಯ ಹೆಡಿಗ್ಗೊಂಡ, ತಿಪಲಾಪುರ, ಕೆರೂಡಿ, ರಾಮಗೊಂಡನಹಳ್ಳಿ, ಬೆಳಕೇರಿ ಮತ್ತು ಬಿಸಲಹಳ್ಳಿ ಗ್ರಾಮಗಳಲ್ಲಿನ ಕೃಷಿಭೂಮಿಗಳಿಗೆ ಭೇಟಿ ನೀಡಿ ಅಲ್ಲಿನ ಬೆಳೆಯನ್ನು ಪರಿಶೀಲನೆ ನಡೆಸಿದರು.
ತಗ್ಗು ಹಾಗೂ ಜೌಗು ಪ್ರದೇಶಗಳಲ್ಲಿ ತೇವಾಂಶ ಹೆಚ್ಚಾದ ಪರಿಣಾಮ ಬೆಳೆ ಕುಂಠಿತಗೊಂಡಿದೆ. ರೈತರು ಚಿಂತಿಸುವ ಅಗತ್ಯವಿಲ್ಲ. ಹತೋಟಿಗಾಗಿ 2.5 ಗ್ರಾಂ. ಚಿಲೇಟೆಡ್ ಜಿಂಕ್ ಸಲ್ಪೇಟ್ ಹಾಗೂ 4ರಿಂದ 5 ಗ್ರಾಂ 19-19-19 ಕಾಂಪ್ಲೆಕ್ಸ್‌ನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವಂತೆ ಸಲಹೆ ನೀಡಿದರು.
ಸಸ್ಯರೋಗ ತಜ್ಞ ಡಾ ಹರ್ಲಾಪುರ ಮಾತನಾಡಿ, ಕಂದು ಚುಕ್ಕೆರೋಗದ ಬಾಧೆ ಅಲ್ಲಲ್ಲಿ ಕಂಡು ಬಂದಿದ್ದು, ಹತೋಟಿಗಾಗಿ 3 ಗ್ರಾಂ ರಿಡೋಮಿಲ್ ಎಂ. ಝಡ್ 72 ಡ. ಬ್ಲೂಪಿಯನ್ನು ಅಥವಾ 2.5 ಗ್ರಾಂ ಡೈಥೇನಂ 45(ಮ್ಯಾಂಕೋ ಜೆಬ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದರು. ಕಾಂಡಕೊರಕದ ಬಾಧೆ ಅಲ್ಲಲ್ಲಿ ಕಂಡುಬಂದಿದ್ದು, ಇದರ ಹತೋಟಿಗಾಗಿ ಕಾರ್ಬೋಪ್ಯುರಾನ್ 3ಜಿ(ಪೋರೆಟ್)2 ಹರಳನ್ನು ಪ್ರತಿಗಿಡದ ಎಲೆ ಸುಳಿಯಲ್ಲಿ ಹಾಕುವಂತೆ ತಿಳಿಸಿದರು.
ಸಸ್ಯ ಶರೀರ ತಜ್ಞ ಡಾ ಚನ್ನಪ್ಪಗೌಡ್ರ ಮಾತನಾಡಿ, ಹೈಬ್ರಿಡ್ ಹತ್ತಿ ಬೆಳೆಯಲ್ಲಿ ರಸಹೀರುವ ಕೀಟಗಳಾದ ಥ್ರಿಪ್ಸ್, ಜಿಗಿಹುಳು, ಸಸ್ಯಹೇನು, ಬಿಳಿನೋಣಗಳು ಗಿಡಗಳ ಎಲೆಯಲ್ಲಿ ರಸಹೀರುವುದರಿಂದ ಎಲೆಗಳು ಮುಟುರು ಆಗುತ್ತಿದ್ದು, ಇದರ ಹತೋಟಿಗೆ 0.20 ಮಿಲಿ ಲೀ. ಇಮಿಡಾಕ್ಲೋಪಿಡ್ 200ಎಸ್‌ಎಲ್ ಅಥವಾ 0.20 ಗ್ರಾಂ ಅಸಿಟ್ ಮಾಪ್ರಿಡ್ 20 ಎಸ್‌ಪಿ ಅಥವಾ 1 ಗಾಂ ಅಸಿಪೇಟ್‌ನ್ನು ಪ್ರತಿ ಲೀ. ನೀರಿನಲ್ಲಿ ಬೆರೆಸಿ ಬೆಳೆ ಮೇಲೆ ಸಿಂಪರಿಸಬೇಕು.
ಹತ್ತಿಬೆಳೆ 65 ದಿನಗಳ ಹಂತದಲ್ಲಿದ್ದಾಗ ಬಿಟಿ ಹತ್ತಿಯ ಎಲೆಗಳು ಕೆಂಪಾಗುವ ಸಂಭವವಿದ್ದು, 10 ಗ್ರಾಂ ಮ್ಯಾಗ್ನೇಷಿಯಂ ಸಲ್ಪೇಟ್ ಪ್ರತಿ ಲೀ. ನೀರಿಗೆ ಬೆರೆಸಿ ಸಾಮೂಹಿಕವಾಗಿ ಸಿಂಪರಿಸುವಂತೆ ತಿಳಿಸಿದರು.
ಸಹಾಯಕ ಕೃ ನಿರ್ದೇಶಕ ಟಿ.ಎಚ್. ನಟರಾಜ ಮಾತನಾಡಿ, ತಾಲೂಕಿನ ಬ್ಯಾಡಗಿ ಮತ್ತು ಕಾಗಿನೆಲೆ ರೈತ ಸಂಪರ್ಕ ಕೇಂದ್ರದಲ್ಲಿ ಸಸ್ಯ ಸಂರಕ್ಷಣಾ ಔಷಧಿಗಳಾದ ಇಮ್ಮಿಡಾಕ್ಲೋಪ್ರೀಡ್, ಮೋನೋಕ್ರೋಟೋಪಾಸ್, ಕ್ಲೋರೋಪೈರಿಫಾಸ್, ಟ್ರೈಕೋಡರ್ಮಾ ಮತ್ತು ಬೇವಿನ ಔಷಧಿಗಳು ಹಾಗೂ ವಿವಿಧ ಕಂಪನಿಗಳ ಸಸ್ಯ ಸಂರಕ್ಷಣಾ ಉಪಕರಣಗಳು, ಲಘು ಪೋಶಕಾಂಶಗಳಾದ ಜಿಪ್ಸ್‌ಂ, ಜಿಂಕ್, ಬೋರಾನ್, ರಿಯಾಯಿತಿ ದರದಲ್ಲಿ ದೊರೆಯುತ್ತಿದ್ದು, ಇದರ ಪ್ರಯೋಜನ ಪಡೆದುಕೊಳ್ಳುವಂತೆ ಇದೇ ಸಂದರ್ಭದಲ್ಲಿ ಮನವಿಮಾಡಿದರು.