ಪ್ರಜಾಪ್ರಭುತ್ವಕ್ಕೆ ಜನಾಭಿಪ್ರಾಯ ಮುಖ್ಯ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜು. 23
ವಿಶ್ವವನ್ನೇ ಗೆಲ್ಲಬೇಕೆಂಬ ಮಹಾದಾಸೆ ಹೊಂದಿದ್ದ ಹಿಟ್ಲರ್ನಿಗೂ ಕೂಡ ಜರ್ಮನಿಯಲ್ಲೇ ವಿರೋಧವಿತ್ತು, ಹೀಗಾಗಿ ಜನರ ಅಭಿಪ್ರಾಯ ಮತ್ತು ಆಶೋತ್ತರಗಳನ್ನು ಕ್ರೋಡೀಕರಿಸಿ ಆಡಳಿತ ನಡೆಸಿದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಮುಂದುವರೆಯಲು ಸಾಧ್ಯ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.
ಮೋಟೆಬೆನ್ನೂರಿನ ನವೋದಯ ವಿದ್ಯಾಸಂಸ್ಥೆಯಲ್ಲಿ ನೂತನ ಶಾಲಾ ಸಂಸತ್ತು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಪ್ರಜಾಪ್ರಭುತ್ವ ವಿಶ್ವಕ್ಕೆ ಮಾದರಿ: ಬ್ರಿಟಿಷರು ನಡೆಸಿದ ಕುತಂತ್ರದಿಂದ ದೇಶದಲ್ಲಿ ರಾಜಪ್ರಭುತ್ವಕ್ಕೆ ಕೊನೆ ಹಾಡಲಾಯಿತು. ಬಳಿಕ ಬ್ರಿಟಿಷರು ನಡೆಸಿದ ದಬ್ಬಾಳಿಕೆಯಿಂದ ಜನ ನರಳುವಂತಾಯಿತು. ಸಾಕಷ್ಟು ಜನರ ಪ್ರಾಣ, ಬಲಿದಾನಗಳಿಂದ ಸ್ವಾತಂತ್ರ್ಯ ಪಡೆದು ಪ್ರಜಾತಂತ್ರ ವ್ಯವಸ್ಥೆ ಜಾರಿಗೊಳಿಸಿದ್ದು, ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದರು.
ಕಾನೂನು, ಸುವ್ಯವಸ್ಥೆ ಮುಖ್ಯ: ಪಾರದರ್ಶಕ ಆಡಳಿತದಿಂದ ಮಾತ್ರ ಜನರ ವಿಶ್ವಾಸ ಗಳಿಸಲು ಸಾಧ್ಯ. ಸುಳ್ಳು ಭರವಸೆಗಳ ಮೇಲೆ ರಾಜಕಾರಣ ಮಾಡುವ ಜನರಿಂದ ಪ್ರಜಾಪ್ರಭುತ್ವ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ದೇಶದ ಆಡಳಿತ ಹಾಗೂ ಕಾನೂನು ವ್ಯವಸ್ಥೆ ಮೇಲೆ ಜನರು ನಂಬಿಕೆಯನ್ನಿಡಬೇಕು. ಅಂದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಮುಂದುವರಿಯಲು ಸಾಧ್ಯವೆಂದರು.
ಸಮರ್ಪಕ ಸೌಲಭ್ಯಕ್ಕೆ ಯತ್ನ: ಅಧಿಕಾರ, ಹಣ, ಹುದ್ದೆ ಇವುಗಳು ರಾಜಕಾರಣದಲ್ಲಿ ಶಾಶ್ವತವಲ್ಲ. ಎಲ್ಲದಕ್ಕೂ ಜನತಾ ಜನಾರ್ದನ ತೀರ್ಮಾನವೇ ಅಂತಿಮ. ಪೊಳ್ಳು ಭರವಸೆಗಳಿಂದ ಜನರನ್ನು ತಪ್ಪು ದಾರಿಗೆಳೆಯುವ ಕೆಲಸವನ್ನು ರಾಜಕಾರಣಿಗಳು ಬಿಡಬೇಕೆಂದು ಸಲಹೆ ನೀಡಿದ ಅವರು, ತಾಲೂಕಿನ ಜನತೆಗೆ ಸಮರ್ಪಕ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಹೇಳಿದರು.
ಇದೇ ಸಂದರ್ಭ ನೂತನ ಶಾಸಕ ಬಸವರಾಜ ಶಿವಣ್ಣನವರ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಡಾ ಪ್ರೇಮಾನಂದ ಲಕ್ಕಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಪುಟ್ಟನಗೌಡ ಪಾಟೀಲ, ಮಲ್ಲಿಕಾರ್ಜುನ ಬಳ್ಳಾರಿ, ಎಸ್.ಎಂ. ಪಾಟೀಲ ಇನ್ನಿತರರು ವೇದಿಕೆಯಲ್ಲಿದ್ದರು. ಪ್ರಶಾಂತ್ ಗೋರವರ ಸ್ವಾಗತಿಸಿದರು. ಮಲ್ಲಿಕಾರ್ಜುನ ನಿರೂಪಿಸಿದರು. ನಿಂಗಪ್ಪ ಯಲಿಮಣ್ಣವರ ವಂದಿಸಿದರು.