ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸತತ ಓದು, ಬರವಣಿಗೆಯಿಂದ ಕವನ ಸೃಷ್ಟಿ

Mainashree
Updated On : 24 Jul 2013, 11:15 am

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಜು. 23
ಕವನಗಳನ್ನು ಬರೆಯುವುದು, ಓದುವುದು ಸುಲಭವಲ್ಲ. ಬರೆಯುವ ಮತ್ತು ಓದುವ ಆಸಕ್ತಿ ಮೊದಲಿನಿಂದಲೂ ಯಾರಲ್ಲಿ ಮನೆ ಮಾಡಿಕೊಳ್ಳುತ್ತದೆಯೋ ಅವರು ಕವನಗಳನ್ನು ಬರೆಯುವವರಾಗುತ್ತಾರೆ ಎಂದು ಜನಪದ ತಜ್ಞ ಶ್ರೀರಾಮ ಇಟ್ಟಣ್ಣನವರ ಹೇಳಿದರು.
ನಗರದ ಸ್ಟೇಶನ್ ರಸ್ತೆಯಲ್ಲಿರುವ ಕರ್ನಾಟಕ ಸಂಘದ ಆಲೂರು ವೆಂಕಟರಾವ್ ರಂಗಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಆಂಗ್ಲ ಭಾಷಾ ವಿದ್ಯಾರ್ಥಿನಿ ಸ್ಥಳೀಯ ಉಮಾಶಂಕರ ನಗರದ ವಿದ್ಯಾಸ್ಪತ್ರೆ ವೈದ್ಯರ ಮಗಳಾದ ಅಕ್ಷುಭಿತಾ ಎಸ್.ವಿ. ಕನ್ನಡದಲ್ಲಿ ಬರೆದ 51 ಕವನಗಳ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.
ವೈದ್ಯ ದಂಪತಿಗಳ ಮಗಳಾಗಿ ಹುಟ್ಟಿ ಪ್ರಾಥಮಿಕ ಶಿಕ್ಷಣದಿಂದ ಕಾಲೇಜು ಶಿಕ್ಷಣದವರೆಗೂ ಆಂಗ್ಲ ಭಾಷೆಯಲ್ಲಿ ಓದುತ್ತಿರುವ ಅಕ್ಷುಭಿತಾ, ತಂದೆ-ತಾಯಿಯರಿಂದ ದೂರ ಉಳಿದು ಹಾಸ್ಟೆಲ್‌ನಲ್ಲಿ ತನ್ನ ಗೆಳತಿಯರೊಂದಿಗೆ ಕಾಲ ಕಳೆಯುವ ಸಮಯ ಅನಾವಶ್ಯಕ ವಿಷಯಗಳ ಕುರಿತು ಚರ್ಚಿಸುವ ಬದಲು, ಕನ್ನಡ ಸಾಹಿತ್ಯ ಲೋಕದ ಸಾರ-ಸತ್ವದ ಬಗ್ಗೆ ಚಿಂತನೆ ನಡೆಸಿ, ಕನ್ನಡದಲ್ಲಿ ಕವನಗಳನ್ನು ಬರೆಯಲು ಅಕ್ಷುಭಿತಾಳ ಸಹಪಾಠಿಗಳ ಮತ್ತು ಶಾಲೆಯ ವಾತಾವರಣ ಅವಳನ್ನು ಕವನ ಬರೆಯುವ ಮಟ್ಟಕ್ಕೇರಿಸಿದೆ.
ಕವನ ಬರೆಯುವುದು-ಓದುವುದು ಸುಲಭದ ಮಾತಲ್ಲ, ಕನ್ನಡ ಸಾಹಿತ್ಯ ಶ್ರೀಮಂತಗೊಳಿಸುವುದಕ್ಕಾಗಿ ಅಕ್ಷುಭಿತಾ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ವಸತಿ ನಿಲಯಗಳಲ್ಲಿ ತನ್ನ ಮನಸ್ಸಿನಲ್ಲಿದ್ದ ವಿಚಾರ ಧಾರೆಗಳಿಗೆ ಜೀವಕಳೆ ತುಂಬಿ ಕವನಗಳನ್ನಾಗಿ ಬರೆಯುವ ಆಸಕ್ತಿಗೆ ಪ್ರೋತ್ಸಾಹವೆಂಬ ನೀರನ್ನೆರೆದು ಸಹಕರಿಸಿರುವ ಎಲ್ಲರಿಗೂ ಸಾಹಿತ್ಯಾಸಕ್ತರ ಪರ ಧನ್ಯವಾದಗಳನ್ನು ಹೇಳಲಿಚ್ಛಿಸುತ್ತೇನೆ.
ಇದುವರೆಗೂ ನಾನು ಸುಮಾರು ಸಾವಿರಾರು ಕವನ ಸಂಕಲನಗಳನ್ನು ತಿದ್ದಿದ್ದು, ಅವುಗಳಲ್ಲಿ ಒಂದು ಕವನವನ್ನು ಸಹ ತಿದ್ದಿಸಿಕೊಳ್ಳಲಾರದ ಕವನ ಸಂಕಲನವೆಂದರೆ ಅಕ್ಷುಭಿತಾಳು ಬರೆದಿರುವ 'ಭಾವ ತುಂಬಿದ ಮೇಲೆ' ಕವನ ಸಂಕಲನ. ಕಾರಣ ಬೆಳೆಯುವ ಸಿರಿಯಾಗಿರುವ ಬಾಲ ಕವಯತ್ರಿ ಅಕ್ಷುಭಿತಾಳಿಗೆ ಸಾಹಿತ್ಯಾಸಕ್ತರು ಸಹಕರಿಸಿ ಪ್ರೋತ್ಸಾಹಿಸಿದಲ್ಲಿ ಅಕ್ಷುಭಿತಾ ಹಿರಿಯ ಸಾಹಿತಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಇಟ್ಟಣ್ಣವರ ಅಭಿಪ್ರಾಯ ಪಟ್ಟರು.
 ಸಾಹಿತಿ ನಾ. ಡಿಸೋಜಾ ಮಾತನಾಡಿ, ಕವಿತೆ ಎಂಬುದು ಅಂತರಾಳದ ಜೀವಾಳವಾಗಿರಬೇಕು, ಕವಿತೆ ಭಾವನಾತ್ಮಕತೆ ಹೊಂದಿರಬೇಕು, ಸತ್ವಯುತ ಸಾಹಿತ್ಯ ರಸತುಂಬಿರುವ ಕವಿತೆಗಳನ್ನು ಬರೆಯಲು ಕವಿಗಳು ಮುಂದಾಗಬೇಕೆಂದು ಅಭಿಪ್ರಾಯಿಸಿದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಅ.ಸಿ. ಹಿರೇಮಠ ಮಾತನಾಡಿ, ಕವಯತ್ರಿ ಅಕ್ಷುಭಿತಾಳ ಅನಿಸಿಕೆಗಳ ಕುರಿತು ಮಾತನಾಡಿದರು. ಸಾಹಿತಿ ಗಿರಿಜಾದೇವಿ ದುರ್ಗದಮಠ ಕವಯತ್ರಿ ಪರಿಚಯಿಸಿದರು. ಧಾರವಾಡದ ಸಾಹಿತಿ ವಿಜಯಶ್ರೀ ಇಟ್ಟಣ್ಣನವರ 'ಭಾವ ತುಂಬಿದ ಮೇಲೆ' ಕವನ ಸಂಕಲನ ಕುರಿತು ಮಾತನಾಡಿದರು. ಕವಯತ್ರಿ ಅಕ್ಷುಭಿತಾ ಎಸ್.ವಿ, ಡಾ೤ ವಾಸುದೇವಮೂರ್ತಿ, ಡಾ೤ ವಿದ್ಯಾ ವಾಸುದೇವಮೂರ್ತಿ, ಪ್ರೊ೤ ರವಿ ವೈದ್ಯ, ಬಸವರಾಜ ಕುಂಬಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement