ಅಪಘಾತ: ಇಬ್ಬರ ಸಾವು
ಹಾವೇರಿ: ಇಂಡಿಕಾ ಕಾರ್ ಮತ್ತು ಕ್ರೂಸರ್ ಮಧ್ಯೆ ಅಪಘಾತ ಸಂಭವಿಸಿ ಹುಬ್ಬಳ್ಳಿ ಉಪನಗರ ಠಾಣೆಯ ಪೇದೆ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಪೇದೆ ಸೇರಿದಂತೆ ಮೂವರು ಗಾಯಗೊಂಡ ಘಟನೆ ಬುಧವಾರ ಬೆಳಗಿನ ಜಾವ ಹಾನಗಲ್ ಬೈಪಾಸ್‌ನಲ್ಲಿ ನಡೆದಿದೆ.
ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ಪೇದೆಯಾಗಿರುವ ಗುರುರಾಜ ಗಿರಿಯಣ್ಣವರ(33) ಹಾಗೂ ಇಂಡಿಕಾ ಕಾರ್ ಚಾಲಕ ಮಂಜುನಾಥ ಮುಕ್ತಿಕಾರ ಎಂಬಿಬ್ಬರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಉಪನಗರ ಠಾಣೆಯ ಮತ್ತೊಬ್ಬ ಪೇದೆ ಶಿವಪ್ಪ ಕಲ್ಲೂರ, ಮಂಜುನಾಥ ಪಾಟೀಲ ಹಾಗೂ ವಿಜಯ ಬನ್ನಿಕೊಪ್ಪ ಎಂಬುವರು ಗಾಯಗೊಂಡಿದ್ದಾರೆ.
ಬೆಂಗಳೂರಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಇಂಡಿಕಾ ಕಾರ್ ಹಾಗೂ ಹಾವೇರಿಯಿಂದ ರಾಣಿಬೆನ್ನೂರು ಕಡೆಗೆ ಹೊರಟಿದ್ದ ಕ್ರೂಸರ್ ಮಧ್ಯೆ ರಾ.ಹೆ. 4ರ ಹಾನಗಲ್ ಬೈಪಾಸ್ ಬಳಿ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಎಸ್ಪಿ ಎನ್. ಶಶಿಕುಮಾರ, ಹೆಚ್ಚುವರಿ ಎಸ್ಪಿ ಜಗಮಯ್ಯನವರ, ಇನ್ ಸ್ಪೆಕ್ಟರ್ ಪಂಪಾಪತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.