ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸುಟ್ಟ ಟಿಸಿ, ಶಿಥಿಲಗೊಂಡ ವಿದ್ಯುತ್ ಕಂಬ: ನಿರ್ಲಕ್ಷ್ಯ

Mainashree
Updated On : 25 Jul 2013, 11:13 am

ಹಾನಗಲ್ಲ: ತಾಲೂಕಿನ ಕಂಚಿನೆಗಳೂರು ಗ್ರಾಮದಲ್ಲಿ ಹಲವು ದಿನಗಳಿಂದ ಪದೇ ಪದೇ ವಿದ್ಯುತ್ ಟಿ.ಸಿ. ಸುಡುತ್ತಿದ್ದು, ಇದರ ಕಂಬಗಳು ಶಿಥಿಲಗೊಂಡಿದ್ದು, ಗ್ರಾಮಸ್ಥರು ಪ್ರಾಣ ಭೀತಿ ಎದುರಿಸುತ್ತಿದ್ದರೂ ಅಧಿಕಾರಿಗಳು ಇತ್ತ ನೋಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ತಾಲೂಕಿನ ಕಂಚಿನೆಗಳೂರು ಗ್ರಾಮದಲ್ಲಿ 110 ಕೆವಿ ಹಾಗೂ 25 ಕೆವಿ ಎರಡು ವಿದ್ಯುತ್ ಪರಿವರ್ತಕಗಳಿದ್ದು(ಟಿಸಿ), ವಿದ್ಯುತ್ ಒತ್ತಡದ ಕಾರಣದಿಂದಾಗಿ ಮೇಲಿಂದ ಮೇಲೆ ಹಾಳಾಗುತ್ತಿವೆ. ಈ ಕುರಿತು ಗ್ರಾಮಸ್ಥರು ಹೆಸ್ಕಾಂ ಇಲಾಖೆಗೆ ಹಲವು ಬಾರಿ ದೂರು ಸಲ್ಲಿಸಿದ್ದರೂ ಕಾರಣಗಳನ್ನು ನೀಡಿ ಇವುಗಳನ್ನು ಬದಲಿಸದೆ ಸಮಯ ನೂಕುತ್ತಿದ್ದಾರೆ. ಟಿಸಿ ಕಳಪೆ ಗುಣಮಟ್ಟದ್ದಾಗಿರುವುದರಿಂದ ಮತ್ತೆ-ಮತ್ತೆ ಸಮಸ್ಯೆ ಎದುರಿಸುವಂತಾಗಿದೆ ಎಂಬುದು ಗ್ರಾಮಸ್ಥರ ಆರೋಪ. ಇದರೊಂದಿಗೆ ಟಿಸಿಗಳನ್ನು ಹೊತ್ತು ನಿಂತಿರುವ ಕಂಬಗಳು ಶಿಥಿಲಗೊಂಡಿದ್ದು, ಇಲಾಖೆ ಸಿಬ್ಬಂದಿ ಈ ಕಂಬಗಳನ್ನು ಹತ್ತಲು ಭಯಪಡುತ್ತಿದ್ದಾರೆ. ಆದಾಗ್ಯೂ ಇವುಗಳನ್ನು ಬದಲಿಸುವ ಚಿಂತನೆಗೆ ಇಲಾಖೆ ಮುಂದಾಗದಿರುವುದು ಗ್ರಾಮಸ್ಥರಲ್ಲಿ ಆಕ್ರೋಶವನ್ನುಂಟು ಮಾಡಿದೆ. ಈ ಟಿಸಿಗಳಿಂದ ಬೀದಿದೀಪ, ಕುಡಿವ ನೀರಿನ ವ್ಯವಸ್ಥೆ ಹಾಗೂ ಮನೆಗಳ ವಿದ್ಯುತ್ ಸಂಪರ್ಕಗಳೂ ಇರುವುದರಿಂದ ಸಹಜವಾಗಿ ಹೆಚ್ಚು ಒತ್ತಡ ಬೀಳುತ್ತಿದೆ. ಆದರೂ ಹೆಚ್ಚುವರಿಯಾಗಿ ಟಿ.ಸಿ.ಗಳನ್ನು ಹಾಕದಿರುವುದು, ಇದ್ದ ಟಿಸಿ ಬದಲಿಸದಿರುವುದು, ಕೊನೆ ಪಕ್ಷ ಕಂಬಗಳನ್ನಾದರೂ ಬದಲಿಸದಿರುವುದು ಇಲಾಖೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಗ್ರಾಮ ಪಂಚಾಯಿತಿ ಹಾಗೂ ಹೆಸ್ಕಾಂ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ತಕ್ಷಣ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು.
ಇಲ್ಲದಿದ್ದರೆ ಗ್ರಾಮಸ್ಥರು ಪ್ರತಿಭಟನೆ ನಡೆಸುವದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement