ಬೆಳೆ ಹಾನಿಗೆ ಪರಿಹಾರ ಒದಗಿಸಿ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಜು. 25
ಹಾವೇರಿ ಜಿಲ್ಲೆಯ ಹಿರೇಕೆರೂರು, ರಾಣಿಬೆನ್ನೂರು ತಾಲೂಕಿನಲ್ಲಿ ಕಾಡಿನಿಂದ ಬಂದ ಜಿಂಕೆಗಳು ರೈತರ ಅಪಾರ ಪ್ರಮಾಣದ ಬೆಳೆ ಹಾನಿಗೊಳಿಸಿವೆ. ಅವುಗಳಿಂದ ಹಾನಿ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಹಿರೇಕೆರೂರು ತಾಲೂಕು ಘಟಕ ಅಧ್ಯಕ್ಷ ರಾಜಶೇಖರ ದೂದಿಹಳ್ಳಿ ಅರಣ್ಯ ಸಚಿವ ರಮಾನಾಥ ರೈ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಸಚಿವರೊಂದಿಗೆ ಮಾತನಾಡಿದ ರೈತರು, ತಾಲೂಕಿನ ಗುಡ್ಡದ ಭಾಗಗಳಲ್ಲಿ ಹಾಗೂ ಹಾವೇರಿ ಜಿಲ್ಲೆಯ ಹಿರೇಕೆರೂರು ಹಾಗೂ ರಾಣಿಬೆನ್ನೂರು ತಾಲೂಕುಗಳಲ್ಲಿ ವಿಪರಿತವಾಗಿ ಜಿಂಕೆಗಳು ಕಾಣಿಕೊಂಡಿದ್ದು, ಸುಮಾರು 30 ಹಿಂಡುಗಳ ಜಿಂಕೆಗಳು ಅಪಾರ ಬೆಳೆಯನ್ನು ಹಾನಿ ಮಾಡಿವೆ ಎಂದರು.
ವಾಣಿಜ್ಯ ಬೆಳೆಗಳಾದ ಹತ್ತಿ, ಶೇಂಗಾ, ಅಲಸಂದಿ, ಹೆಸರು ಇತರ ಬೆಳೆಗಳನ್ನು ಜಿಂಕೆಗಳು ಹಾನಿ ಮಾಡಿವೆ.
ರೈತರು ಚಿಂತಾಕ್ರಾಂತ: ಕಳೆದೆರಡು ವರ್ಷ ಬರಗಾಲಕ್ಕೆ ತುತ್ತಾದ ರೈತರು ಇದೀಗ ಸಾಲ ಶೂಲ ಮಾಡಿ ಸಾವಿರಾರು ರುಪಾಯಿ ಮೊತ್ತದಲ್ಲಿ ಬಿತ್ತನೆ ಬೀಜ ಖರೀದಿಸಿ ಬಿತ್ತನೆ ಮಾಡಿದ್ದಾರೆ. ಪ್ರಸಕ್ತ ವರ್ಷ ಉತ್ತಮ ಮಳೆಯಾಗಿದ್ದರಿಂದ ಬೆಳೆಗಳು ಹಸನಾಗಿ ಬೆಳೆಯುತ್ತಿರುವಾಗ ವನ್ಯಜೀವಿಗಳು ಹಾಳು ಮಾಡುತ್ತಿರುವುದರಿಂದ ಬಡ ರೈತರು ಚಿಂತಾಕ್ರಾಂತರಾಗಿದ್ದಾರೆ ಎಂದರು. ಈ ಕುರಿತು ಪ್ರತಿಭಟನೆ ಮುಖಾಂತರ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದಾಗ ಅಧಿಕಾರಿಗಳು ವನ್ಯ ಜೀವಿಗಳನ್ನು ಅರಣ್ಯಕ್ಕೆ ಅಟ್ಟದೆ ಬರಿ ಎಕರೆಯೊಂದಕ್ಕೆ ರು. 200ದಿಂದ ರು. 300 ಪರಿಹಾರ ನೀಡಿ ಕೈತೊಳೆದುಕೊಂಡಿದ್ದಾರೆ. ಅಪಾರ ಹಣ ತೆತ್ತು ಬಿತ್ತನೆ ಮಾಡಿ ಗೊಬ್ಬರ ಹಾಕಿ ಬೆಳೆಸಿದ ರೈತರ ಬೆಳೆಹಾನಿ ಎಕರೆಯೊಂದಕ್ಕೆ ಕನಿಷ್ಠ ರು. 25 ಸಾವಿರ ಪರಿಹಾರ ನೀಡುವ ಮೂಲಕ ಹಾನಿ ಅನುಭವಿಸಿದ ರೈತರ ಹಿತ ಕಾಪಾಡಲು ಮುಂದಾಗಬೇಕು ಹಾಗೂ ವನ್ಯ ಜೀವಿಗಳನ್ನು ಕಾಡಿಗೆ ಸಾಗಿಸಲು ಮುಂದಾಗಬೇಕು ಎಂದು ತಿಳಿಸಿದರು. ಈ ಕುರಿತ ಮನವಿಯನ್ನು ಅರಣ್ಯ ಸಚಿವ ರಮಾನಾಥ ರೈ ಅವರಿಗೆ ಸಲ್ಲಿಸಿದ್ದಾರೆ.
ಈ ಸಂದರ್ಭ ರೈತ ಸಂಘದ ತಾಲೂಕು ಕಾರ್ಯದರ್ಶಿ ಮಲ್ಲನಗೌಡ ಸೊರಟೂರು, ಉಪಾಧ್ಯಕ್ಷ ರಪೀರಪ್ಪ ಪೂಜಾರ, ತ್ಯಾವರೆಪ್ಪ ಮೂಡಿ, ಸೋಮಶೇಕರಪ್ಪ ಬಡಿಗೇರ ಮೊದಲಾದವರು ಇದ್ದರು.