ಸತ್ಕಾರ್ಯಗಳಿಂದ ಜೀವನ ಪಾವನ: ಶ್ರೀ ಸತ್ಯಾತ್ಮತೀರ್ಥರು
ಸವಣೂರು: ಯಥೋಚಿತ್ತವಾದ ಸತ್ಕಾರ್ಯಗಳನ್ನು ಆಚರಿಸುವ ಶುಭ ಸಂಕಲ್ಪವನ್ನು ನಾವು ಕೈಗೊಂಡಲ್ಲಿ ಅದು ಸತ್ಯ ಸಂಕಲ್ಪವಾಗಿ ಪರಿಣಮಿಸುತ್ತದೆ ಎಂದು ಶ್ರೀಮದ್ ಉತ್ತರಾಧಿಮಠಾಧೀಶ ಶ್ರೀ ಸತ್ಯಾತ್ಮತೀರ್ಥರು ತಿಳಿಸಿದರು.
ಸವಣೂರಿನ ಶ್ರೀ ಸತ್ಯಬೋಧ ಸ್ವಾಮೀಗಳ ಮೂಲವೃಂದಾವನ ಸನ್ನಿಧಿಗೆ ಇತ್ತೀಚೆಗೆ ಭೇಟಿ ನೀಡಿದ್ದ ಶ್ರೀಗಳು, ಮೂಲವೃಂದಾವನ, ಅಹೋಬಲ ಲಕ್ಷ್ಮಿ ನರಸಿಂಹ ಸನ್ನಿಧಿ ಹಾಗೂ ಸತ್ಯಧರ್ಮರ ಮೃತ್ತಿಕಾ ವೃಂದಾವನದ ಧರ್ಮ ಪಡೆದುಕೊಂಡು ಅನುಗ್ರಹ ಸಂದೇಶ ನೀಡಿದರು.
ಉತ್ತರಾಧಿಮಠದ ಪರಂಪರೆಯ ಯತಿಗಳಾಗಿದ್ದ ಶ್ರೀ ಸತ್ಯಸಂಕಲ್ಪತೀರ್ಥರ ಆರಾಧನಾ ಪ್ರಯುಕ್ತ ಅವರ ಸ್ಮರಣೆ ಕೈಗೊಂಡ ಶ್ರೀಸತ್ಯಾತ್ಮತೀರ್ಥರು, ತೀವ್ರ ಬರಗಾಲದ ಸಂಕಷ್ಟದ ಅವಧಿಯಲ್ಲಿಯೂ ಗುರುಗಳು ಕೈಗೊಂಡಿದ್ದ ನಿರಂತರ ಅನ್ನದಾನದ ಹಿರಿಮೆ ವಿವರಿಸಿದರು. ಶ್ರೀಗಳ ಆರಾಧನಾ ಮಹೋತ್ಸವದ ಸಂದರ್ಭ ಶುಭ ಸಂಕಲ್ಪಗಳನ್ನು ಕೈಗೊಳ್ಳುವ ಮೂಲಕ ಗುರುಗಳ ಅನುಗ್ರಹಕ್ಕೆ ಪಾತ್ರರಾಗುವಂತೆ ಸೂಚಿಸಿದರು.
ಶ್ರೀಮಠದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಜಲಶುದ್ಧೀಕರಣ ಘಟಕ ಹಾಗೂ ಭದ್ರತಾ ಕೊಠಡಿಗಳನ್ನು ಶ್ರೀಗಳು ಉದ್ಘಾಟಿಸಿದರು. ಶ್ರೀಮಠದ ಸದ್ಭಕ್ತರಿಗೆ ಫಲಮಂತ್ರಾಕ್ಷತೆಗಳನ್ನು ವಿತರಿಸಿದರು.
ಈ ಸಂದರ್ಭ ದಿ. ರಾಮಾಚಾರ್ಯ ಹ. ರಾಯಚೂರು ಹಾಗೂ ದಿ. ಸೀತಾಬಾಯಿ ರಾ. ರಾಯಚೂರು ಅವರ ಸ್ಮರಣಾರ್ಥ ಶ್ರೀಮಠದಲ್ಲಿ ಜಲಶುದ್ದೀಕರಣ ಘಟಕ ಹಾಗೂ ಭದ್ರತಾ ಕೊಠಡಿಗಳನ್ನು (ಲಾಕರ್)ಕೊಡುಗೆಯಾಗಿ ನೀಡಿದ ಸತ್ಯಬೋಧಾಚಾರ್ಯ, ಮುಕುಂದಾಚಾರ್ಯ, ಅನಂತಾಚಾರ್ಯ, ಆನಂದಾಚಾರ್ಯ ರಾಯಚೂರು ಹಾಗೂ ಆಧ್ಯ ಯದುಪತಿ ಆಚಾರ್ಯ ಅವರ ಸೇವೆಯನ್ನು ಶ್ರೀಮಠದ ಪರ್ಯಾಯಸ್ಥರು ಸ್ಮರಿಸಿಕೊಂಡರು. ಪೂಜಾ ಪರ್ಯಾಯಸ್ಥರಾದ ನರಸಿಂಹಾಚಾರ್ಯ ರಾಯಚೂರು, ಮಾಧವಾಚಾರ್ಯ ರಾಯಚೂರು, ಅರ್ಚಕರಾದ ರಂಗಾಚಾರ್ಯ ರಾಯಚೂರು, ಗುರುರಾಜಾಚಾರ್ಯ ರಾಯಚೂರು, ಮುಕುಂದಾಚಾರ್ಯ ರಾಯಚೂರು ಇತರರಿದ್ದರು.