ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬೆಳೆಗೆ ರೋಗ ಪರಿಹಾರ ಕಾರ್ಯಕ್ಕೆ ಮುಂದಾಗಿ

Mainashree
Updated On : 27 Jul 2013, 11:35 am

ಹಾವೇರಿ:  ಜಿಲ್ಲೆಯ ಹಿರೇಕೆರೂರು, ಬ್ಯಾಡಗಿ, ರಾಣಿಬೆನ್ನೂರು, ಹಾನಗಲ್ ಹಾಗೂ ಶಿಗ್ಗಾಂವಿ ತಾಲೂಕಿನ ಗೋವಿನ ಜೋಳ ಬೆಳೆಯಲ್ಲಿ ಅಲ್ಲಲ್ಲಿ ಬೆಳೆಯು ಹಳದಿ ಬಣ್ಣಕ್ಕೆ ತಿರುಗಿದ್ದು ಕಂಡು ಬಂದಿದ್ದು, ಪರಿಹಾರೋಪಾಯ ಕೈಗೊಳ್ಳುವಂತೆ ಹಾವೇರಿ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು ರೈತರಿಗೆ ತಿಳಿಸಿದ್ದಾರೆ.
ವಿವಿಧ ಬೆಳೆ ವೀಕ್ಷಣೆಯನ್ನು ಕೃಷಿ ಮಹಾವಿದ್ಯಾಲಯ, ಹನುಮನಮಟ್ಟಿ ಮತ್ತು ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ವಿಜ್ಞಾನಿಗಳ ತಂಡ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಜಂಟಿಯಾಗಿ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ.
ಬೆಳೆಯಲ್ಲಿ ಅಲಲ್ಲಿ ಕಾಂಡ ಕೊರಕ ಕೀಟದ ಬಾಧೆ ಕಂಡು ಬಂದಿದ್ದು, ಈ ಬಾಧೆಯಿಂದ ಬೆಳೆಗೆ ಪೋಷಕಾಂಶಗಳ ಪೂರೈಕೆ ಕಡಿಮೆಯಾಗಿ ಬೆಳೆ ಹಳದಿಯಾಗಿರುವುದಕ್ಕೆ ಕಾರಣವಾಗಿದೆ. ಬೆಳೆ ಈ ರೀತಿ ಹಳದಿಯಾಗಿರುವದಕ್ಕೆ ವಿಜ್ಞಾನಿಗಳು ಕ್ರಮ ಕೈಗೊಳ್ಳಲು ಸಲಹೆ ನೀಡಿದ್ದಾರೆ. ಬೆಳೆ ಅಲ್ಲಲ್ಲಿ ಹಳದಿಯಾಗಿರುವುದಕ್ಕೆ ಪ್ರತಿ ಲೀಟರ್‌ಗೆ 5ರಿಂದ 10 ಗ್ರಾಂ ಸತುವಿನ ಸಲ್ಪೇಟ್ ಹಾಗೂ ಕಾಂಡ ಕೊರಕ ಕೀಟ ಹತೋಟಿಗಾಗಿ ಪ್ರತಿ ಲೀಟರ್‌ಗೆ 2 ಮೀ.ಲಿ. ಕ್ಲೋರೋಪೈರಿಫಾಸ್ ಬೆರೆಸಿ ಸಿಂಪಡಿಸಲು ಸಲಹೆ ನೀಡಲಾಗಿದ್ದು, ರೈತರು ಸಕಾಲಕ್ಕೆ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ವಿನಂತಿಸಲಾಗಿದೆ. ರೈತರು ಭೂ ಚೇತನ ಯೋಜನೆಡಿಯಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸುವ ಲಘು ಪೋಷಕಾಂಶಗಳನ್ನು ಬಳಸಿ ಬೆಳೆಗಳಿಗೆ ಲಘು ಪೋಶಕಾಂಶಗಳ ಕೊರತೆಯಾಗದಂತೆ ಕ್ರಮ ವಹಿಸಲು ಮತ್ತೊಮ್ಮೆ ವಿನಂತಿಸಲಾಗಿದೆ.
ರೋಗದ ಬಾಧೆ ನಿಯತ್ರಣ ಕ್ರಮಗಳು
ಹತ್ತಿ: ಹಾವೇರಿ, ಬ್ಯಾಡಗಿ, ಹಾನಗಲ್, ಹಿರೇಕೆರೂರು, ರಾಣಿಬೆನ್ನೂರು, ಸವಣೂರು ಮತ್ತು ಶಿಗ್ಗಾಂವಿ
1) ಜಿಗಿಹುಳು ಹಾಗೂ ಥ್ರಿಪ್ಸುಲ್‌ನಶಿ: ಶೇ. 5ರ ಬೇವಿನ ಕೀಟನಾಶಕ ಅಥವಾ ಆಕ್ಸಿಡೆಮೆಟಾನ್ ಮಿಥೈಲ್ 1.5 ಮೀ.ಲಿ ಅಥವಾ ಡೈಮೀಥೋಯೇಟ್ 2.0 ಮಿ.ಲಿ ಅಥವಾ ಮೊನೋಕ್ರೋಟೋಫಾಸ್ 1.5 ಮಿ ಲಿ ಅಥವಾ ಇಮಿಡಾಕ್ಲೋಪ್ರಿಡ್ 0.8 ಮಿ ಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
2) ಬಿಳೆನೊಣ: ಹತೋಟಿಗಾಗಿ ಶೇ. 5ರ ಬೇವಿನ ಬೀಜದ ಕಷಾಯ ಅಥವಾ ಟ್ರೈಜೋಫಾಸ್ 1.5 ಮಿಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಮೈಟ್ನುಶಿ: ನಿಯಂತ್ರಣಕ್ಕಾಗಿ ಡೈಕೋಫಾಲ್ 2.5 ಮಿಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
3) ಮಿರಿಡ್ಬಗ್: 0.25 ಮಿ.ಲೀ ಇಮಿಡಾಕ್ಲೋಪ್ರಿಡ್ ಅಥವಾ 2 ಎಂ.ಎಲ್ ಪ್ರೊಫೆನೋಪಾಸ್‌ನ್ನು ಪ್ರತಿ ಲೀಟರ್ ನೀರಿಗೆ 1 ಗ್ರಾಂ ಸಾಬೂನಿನ ಪುಡಿಯೊಂದಿಗೆ ಬೆರೆಸಿ ಸಿಂಪಡಿಸುವುದು.
4) ಕಾಂಡ ಕೊರಕ ಮೂತಿ ಹುಳು: ಬೆಳೆಯ ಪ್ರಾರಂಭದಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ದುಂಬಿ ಹುಳುಗಳನ್ನು ಬೆಳಗಿನ ಜಾವ ಕೈಯಿಂದ ಆರಿಸಿ ತೆಗೆಯಬೇಕು. ಬೆಂಡಿ ಗಿಡಗಳನ್ನು ಆಶ್ರಯ ಬೆಳೆಯಾಗಿ ಬೆಳೆದು ಈ ಕೀಟಗಳನ್ನು ಹತೋಟಿ ಮಾಡಬಹುದು. ಕ್ಲೋರೋಪೈರಿಫಾಸ್ 2 ಮಿ.ಲಿ ಮತ್ತು ಡೈಕ್ಲೋರೋವಾಸ್ 2 ಮಿ.ಲಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಭತ್ತ: ಹಾನಗಲ್ ಮತ್ತು ಶಿಗ್ಗಾಂವಿ ತಾಲೂಕು
1) ಕಾಂಡ ಕೊರೆಯುವ ಹುಳು: ಬದು ಮತ್ತು ನೀರುಗಾಲುವೆ ಮೇಲೆ ಬೆಳೆಯುತ್ತಿರುವ ಹುಲ್ಲು ಮತ್ತು ಇತರೆ ಕಳೆಗಳನ್ನು ತೆಗೆದು ಸ್ವಚ್ಛವಾಗಿಡುವುದರಿಂದ ಈ ಕೀಟದ ವೃದ್ಧಿಯನ್ನು ತಡೆಗಟ್ಟಬಹುದು. ಕೀಟವು ಎಲೆಯ ತುದಿಯಲ್ಲಿ ಮೊಟ್ಟೆಗಳನ್ನು ಇಡುವುದರಿಂದ ನಾಟಿ ಮಾಡುವ ಸಮಯದಲ್ಲಿ ಪೈರಿನ ಎಲೆ ತುದಿಯನ್ನು ಕತ್ತರಿಸಿ ನಾಟಿ ಮಾಡುವುದು. ಎಕರೆಗೆ 8ರಂತೆ ಲಿಂಗಾಕಕ್ಷಕ ಬಲೆಗಳನ್ನು ಬಳಸಿ ಗಂಡು ಪತಂಗಗಳನ್ನು ಆಕರ್ಷಿಸಿ ನಾಶಪಡಿಸುವುದು. ಇದರ ಹತೋಟಿಗಾಗಿ 2 ಮಿಲೀ ಕ್ಲೋರೊಪೈರಿಫಾಸ್ 20 ಇ.ಸಿ ಒಂದು ಲೀಟರ್ ನೀರಿನಲ್ಲಿ ಸೇರಿಸಿ ಸಿಂಪಡಿಸುವುದು.
2) ಬೆಂಕಿರೋಗ: ಬೆಂಕಿ ರೋಗ ಹತೋಟಿಗಾಗಿ, ಟ್ರೈಸೈಕ್ಲೋಜೋಲ್ 0.6 ಗ್ರಾಂ ಅಥವಾ ಕೀಟಾಜಿನ್ 1 ಮಿ.ಲಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಪ್ರತಿ ಹದಿನೈದು ದಿವಸದ ಅಂತರದಲ್ಲಿ ಒಟ್ಟು ಎರಡು ಸಿಂಪರಣೆ ಮಾಡಬೇಕು.
3) ಎಲೆ ಸುರುಳಿಹುಳು, ಮುಳ್ಳುಚಿಪ್ಪಿನ ಹುಳು: 1 ಮಿಲಿ ಮಿಥೈಲ್ ಪ್ಯಾರಾಥಿಯಾನ್ ಅಥವಾ 0.5 ಮಿಲಿ ಪೆನಿಟಟೊ ಮಿಯಾಸ್ ಅಥವಾ 1.5 ಮಿಲಿ ಮೊನೋಕ್ರೋಟೊಫಾಸ್ ಅಥವಾ 2 ಮಿಲಿ ಕ್ಲೋರೋಪೈರಿಪಾಸ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಶೇಂಗಾ: ಹಾವೇರಿ, ಸವಣೂರು, ಶಿಗ್ಗಾಂವಿ
1) ಸುರುಳಿಪೂಚಿ(ಎಲೆ ಸುರಂಗ ಕೀಟ): ಎಲೆ ತಿನ್ನುವ ಕೀಟಗಳ ಹತೋಟಿಗಾಗಿ 1 ಮಿಲಿ ಮೊನೋಕ್ರೋಟೋಫಾಸ್ ಅಥವಾ 2 ಮಿಲಿ ಕ್ವಿನಾಲ್ಫಾಸ್ ಅಥವಾ 0.5 ಮಿಲಿ ಲ್ಯಾಂಬ್‌ಡಾ ಸೈಯಲೋಥ್ರಿನ್ ಪ್ರತಿ ಲೀಟರ್ ನೀರಿಗೆ ಬೆರೆಸಿ  ಸಿಂಪಡಿಸಬೇಕು.
2) ಎಲೆ ತಿನ್ನುವ ಕೀಟ: ಎಲೆಗಳ ಮೇಲ್ಭಾಗದಲ್ಲಿ ಕೀಟ ತತ್ತಿಯ ಗುಂಪನ್ನು ಆರಿಸಿ ನಾಶಪಡಿಸುವುದು ಹೆಚ್ಚಿಸುತ್ತಾ 2 ಮಿಲಿ ಕ್ವಿನಾಲ್ಫಾಸ್ 25 ಇ.ಸಿ ಅಥವಾ 0.5 ಮಿ.ಲಿ. ಲ್ಯಾಂಬ್‌ಡಾ ಸೈಯಲೋಥ್ರಿನ್ 5 ಇಸಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.
ಸೋಯಾ ಅವರೆ: ಹಾವೇರಿ, ಸವಣೂರು, ಶಿಗ್ಗಾಂವಿ
1) ಎಲೆ ತಿನ್ನುವ ಕೀಡೆ: ಹತೋಟಿಗಾಗಿ 1.7 ಮಿಲಿ ಡೈಮಿಥೋಮೇಟ್ ಅಥವಾ 2.0 ಮಿಲಿ ಕ್ವಿನಾಲ್ಫಾಸ್ ಅಥವಾ 2 ಮಿ.ಲಿ. ಕ್ಲೋರೋಫೈರಿಫಾಸ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ.
ದ್ವಿದಳ ಧಾನ್ಯಗಳು: ಜಿಲ್ಲೆಯ ಹಾವೇರಿ, ಸವಣೂರು, ಹಾನಗಲ್ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿದ್ದು, ರಸಹೀರುವ ಕೀಟ, ಎಲೆ ತಿನ್ನುವ ಹುಳುಬಾಧೆ ಹೆಚ್ಚಾಗಿದ್ದು, ಇವುಗಳ ನಿಯಂತ್ರಣಕ್ಕಾಗಿ ಮೊನೋಕ್ರೋಟೊಫಾಸ್ 1.3 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಸಂಪರ್ಕಿಸುವಂತೆ ಹಾವೇರಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಪರಿಹಾರ ಕ್ರಮಕ್ಕಾಗಿ ಉಪ ಕೃಷಿ ನಿರ್ದೇಶಕರು(ಸಸ್ಯ ಸಂರಕ್ಷಣೆ ವಿಭಾಗ), ಕೃಷಿ ನಿರ್ದೇಶನಾಲಯ, ಶೇಷಾದ್ರಿ ರಸ್ತೆ ಬೆಂಗಳೂರು ಇವರಿಗೆ ಮಾಹಿತಿಗಾಗಿ ರವಾನಿಸಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಹಾವೇರಿ ಇವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement