ಅಕ್ಷರ ದಾಸೋಹ ಸ್ಥಗಿತ ಇಲ್ಲ
ರಾಣಿಬೆನ್ನೂರು: ತಾಲೂಕು ಅಕ್ಷರ ದಾಸೋಹ ಕಾರ್ಯಕ್ರಮದ ಯೋಜನಾ ವ್ಯಾಪ್ತಿಯಲ್ಲಿ ಬರುವ 252 ಕೇಂದ್ರಗಳಲ್ಲಿ ಯಾವುದೇ ಕೇಂದ್ರಗಳಲ್ಲಿಯೂ ಅಕ್ಷರ ದಾಸೋಹ ಕಾರ್ಯಕ್ರಮ ಸ್ಥಗಿತಗೊಂಡಿಲ್ಲವೆಂದು ತಾಲೂಕು ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕ ಹೋಬಾ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶ ಸೇರಿದಂತೆ 191 ಸರ್ಕಾರಿ ಹಿರಿಯ-ಕಿರಿಯ ಪ್ರಾರ್ಥಮಿಕ ಶಾಲೆಗಳು, 16 ಅನುದಾನಿತ ಪ್ರಾರ್ಥಮಿಕ ಶಾಲೆಗಳು, 16 ಸರ್ಕಾರಿ ಹೈಸ್ಕೂಲ್, 28 ಅನುದಾನಿತ ಹೈಸ್ಕೂಲ್ಗಳು ಹಾಗೂ 1 ಮದರಸಾ ಸೇರಿದಂತೆ ಒಟ್ಟು 252 ಕೇಂದ್ರಗಳಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮ ಚಾಲ್ತಿಯಲ್ಲಿದ್ದು, ಮೇಲೆ ತಿಳಿಸಿರುವ ಯಾವುದೇ ಕೇಂದ್ರಗಳಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮ ಸ್ಥಗಿತಗೊಂಡಿರುವುದಿಲ್ಲ. ಸ್ದಗಿತಗೊಂಡಿರುವ ಕುರಿತು 252 ಕೇಂದ್ರಗಳ ಜವಾಬ್ದಾರಿ ಹೊಂದಿರುವ ಸ್ಥಳೀಯ ಶಾಲೆಗಳಿಂದಲು ಯಾವುದೇ ಮಾಹಿತಿ ತಾಲೂಕು ಕಾರ್ಯಾಲಯಕ್ಕೆ ಬಂದಿರುವುದಿಲ್ಲ.
ಈಗಾಗಲೆ 252 ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವವ ಅಕ್ಷರ ದಾಸೋಹ ಸಿಬ್ಬಂದಿ ಮತ್ತು ಮೇಲ್ವಿಚಾರಕರ ಸಮಗ್ರ ಮಾಹಿತಿ ಪಡೆದಿದ್ದು, ನಿತ್ಯ ಎಲ್ಲಾ ಕೇಂದ್ರಗಳಿಂದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಕ್ರಮದ ಎಲ್ಲಾ ಸಿಬ್ಬಂದಿಗೆ ತರಬೇತಿ ಕೊಡಿಸುವ ಕಾರ್ಯಕ್ರಮ ಏರ್ಪಡಿಸಲು ತಯಾರಿ ನಡೆಸಿರುವುದಾಗಿ ಸಹಾಯಕ ನಿರ್ದೇಶಕ ಹೋಬಾ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.