ಹರನಗಿರಿ ಗ್ರಾಪಂಗೆ ಮುತ್ತಿಗೆ
ರಾಣಿಬೆನ್ನೂರು: ತಾಲೂಕಿನ ಚಿಕ್ಕಕುರುವತ್ತಿ ಗ್ರಾಮದಲ್ಲಿ ಸಂಪೂರ್ಣ ಹಾಳಾಗಿರುವ ರಸ್ತೆಗಳನ್ನು ಸರಿಪಡಿಸಬೇಕು ಹಾಗೂ ಗ್ರಾಮದ ಸುತ್ತಲು ಹಾಕಿರುವ ತಿಪ್ಪೆಗುಂಡಿಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಗ್ರಾಮದಲ್ಲಿ ಸ್ವಚ್ಚತೆ ಕಾಪಾಡಬೇಕೆಂದು ಆಗ್ರಹಿಸಿ ಚಿಕ್ಕಕುರುವತ್ತಿ ಗ್ರಾಮಸ್ಥರು ಹರನಗಿರಿ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟಿಸಿದರು.
ಚಿಕ್ಕಕುರುವತ್ತಿ ಗ್ರಾಮದಿಂದ ನೇರವಾಗಿ ಹರನಗಿರಿ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಆಗಮಿಸಿದ್ದ ಗ್ರಾಮಸ್ಥರು ಹರನಗಿರಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗುತ್ತ ಗ್ರಾಮ ಪಂಚಾಯಿತಿ ಒಳಗೆ ಪ್ರವೇಶಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತರಾಟೆಗೆ ತಗೆದುಕೊಂಡರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಚಿಕ್ಕಕುರುವತ್ತಿ ಗ್ರಾಮದ ಮುಖಂಡ ಜಯಪ್ಪ ಚನ್ನಗೌಡ್ರ ಮಾತನಾಡಿ, ಚಿಕ್ಕಕುರುವತ್ತಿ ಗ್ರಾಮದಿಂದ ಹರನಗಿರಿ ಗ್ರಾಮಕ್ಕೆ ತೆರಳುವ ರಸ್ತೆ ಮತ್ತು ಚಿಕ್ಕಕುರುವತ್ತಿ ಗ್ರಾಮದ ಸುತ್ತಮುತ್ತಲಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ಗ್ರಾಮದ ಹರಿಜನರ ಓಣಿಯಲ್ಲಿನ ರಸ್ತೆಗಳು ಹಾಳಾಗಿದ್ದು, ರಿಪೇರಿ ಮಾಡಿಸುವಂತೆ ಹಲವಾರು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರೂ ಸಹ ಸಮಯಕ್ಕೆ ಸರಿಯಾಗಿ ರಿಪೇರಿ ಮಾಡಿಸದಿರುವ ಕಾರಣ ರಸ್ತೆಗಳ ಮಧ್ಯೆ ಗುಂಡಿ ಉಂಟಾಗಿ ರಸ್ತೆ ಸಂಪೂರ್ಣ ಹಾಳಾಗಿದೆ ಎಂದರು.
ಸ್ಥಳಕ್ಕಾಗಮಿಸಿದ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಕೆ. ವೀರಣ್ಣ, ಹರನಗಿರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಿ.ಬಿ. ಹರಿಜನ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಶೋಕ ಬಣಕಾರ ಮತ್ತು ಸದಸ್ಯರಾದ ಶಿವನಗೌಡ ಕುರುವತ್ತಿಗೌಡ್ರ ಸಮಗ್ರ ಮಾಹಿತಿ ಪಡೆದ ನಂತರ ಪತ್ರಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಆದಷ್ಟು ಬೇಗ ರಸ್ತೆಯ ಮೇಲೆ ನಿಂತಿರುವ ನೀರನ್ನು ಬೇರೆಕಡೆಗೆ ಹರಿದು ಹೋಗುವಂತಹ ವ್ಯವಸ್ಥೆ ಕೈಗೊಂಡು ಗ್ರಾಮದ ಸುತ್ತಮುತ್ತಲಿನ ತಿಪ್ಪೆಗುಂಡಿಗಳನ್ನು ಬೇರೆಕಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಬಳಿಕ ಪ್ರತಿಭಟನಾಕಾರರು ಪ್ರತಿಭಟನೆಯಿಂದ ಹಿಂದಕ್ಕೆ ಸರಿದರು.
ಹೊನ್ನಪ್ಪ ಮಡಿವಾಳರ, ಅಣ್ಣಪ್ಪ ಹೊನ್ನತ್ತಿ, ಗಿರೀಶ ಬಾರ್ಕಿ, ಸ್ವಾಮಿಲಿಂಗಪ್ಪ ಹಾಂವಶಿ ಪ್ರತಿಭಟನೆಯಲ್ಲಿದ್ದರು.