ಇಂದು ಕಾರ್ಯಾಗಾರ
ಬ್ಯಾಡಗಿ: ಪ್ರೌಢಶಾಲೆಗಳ ವಿಜ್ಞಾನ ಮತ್ತು ಗಣಿತ ಶಿಕ್ಷಕರ ಕಾರ್ಯಾಗಾರ ಜು. 30ರ ಬೆಳಗ್ಗೆ 9.30ಕ್ಕೆ ಸ್ಥಳೀಯ ಎಸ್ಜೆಜೆಎಂ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ತಾಲೂಕು ಗಣಿತ ಹಾಗೂ ವಿಜ್ಞಾನ ಶಿಕ್ಷಕರ ಸಂಘದ ಆಶ್ರಯದಲ್ಲಿ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ನಿರಂತರ ಮೌಲ್ಯಮಾಪನ ಮತ್ತು ವ್ಯಾಪಕ ಮೌಲ್ಯಮಾಪನ ವಿಷಯದ ಬಗ್ಗೆ ಚರ್ಚಿಸಲಾಗುವುದು. ತಾಲೂಕಿನ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಎಲ್ಲ ಪ್ರೌಢಶಾಲೆಗಳ ವಿಜ್ಞಾನ ಹಾಗೂ ಗಣಿತ ಶಿಕ್ಷಕರು ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.
ಚುನಾವಣೆ: ಅಭಿನಂದನೆ
ರಾಣಿಬೆನ್ನೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರತಿನಿಧಿಗಳಾಗಿ ಆಯ್ಕೆ ಆಗಿರುವ ತಾಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರಾದ ಶಂಭುಲಿಂಗಪ್ಪ ಕಾರಗಿ, ಅಶೋಕರೆಡ್ಡಿ ಶಿವರೆಡ್ಡಿಯವರನ್ನು ತಾಲೂಕು ವಿವಿಧ ಇಲಾಖೆಯ ನೌಕರರು ಮತ್ತು ಅಧಿಕಾರಿಗಳು ಅಭಿನಂದಿಸಿದರು.
ಆ. 1ರಂದು ಸಂಘದ ಸಭೆ
ಗದಗ: ರಾಜ್ಯ ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಸಭೆ ಆ. 1ರ ಬೆಳಗ್ಗೆ 11ಕ್ಕೆ ನಗರದ ಹುಡ್ಕೋ ಕಾಲೋನಿಯಲ್ಲಿರುವ ಸಚ್ಚಿದಾನಂದ ಮಠದ ಸಭಾಂಗಣದಲ್ಲಿ ಕರೆಯಲಾಗಿದೆ. ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಸಿ. ಗಾಣಿಗೇರ ಸಭೆಯ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಹಿರಿಯ ನಾಗರಿಕರ ಉಪಸಮಿತಿ ಅಧ್ಯಕ್ಷ ಜಿ.ಎಸ್. ಹಿರೇಮಠ ಉಪಸ್ಥಿತರಿರುವರು. ನಿವೃತ್ತರ ಹಾಗೂ ಹಿರಿಯ ನಾಗರಿಕರ ಕುಂದು ಕೊರತೆಗಳ ಕುರಿತು ಹಾಗೂ ಸಂಘಕ್ಕೆ ಸಂಘದ ಕಟ್ಟಡ ಕಾಮಗಾರಿಯ ಉದ್ಘಾಟನೆ ಹಾಗೂ 6ನೇ ವಾರ್ಷಿಕೋತ್ಸವ ಆಚರಿಸುವ ಬಗ್ಗೆ ಹಾಗೂ ಇನ್ನಿತರ ಮಹತ್ವದ ವಿಷಯಗಳನ್ನು ಚರ್ಚಿಸಲಾಗುವುದು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಬಿ. ಹೂಗಾರ ಹಾಗೂ ಹೆಚ್ಚುವರಿ ಕಾರ್ಯದರ್ಶಿ ರಾಜಶೇಖರ ಕರಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಸಕ ಪಾಟೀಲರಿಗೆ ಸನ್ಮಾನ
ರೋಣ: ರೋಣ ತಾಲೂಕು ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶಾಸಕ ಜಿ.ಎಸ್. ಪಾಟೀಲ ಅವರನ್ನು ಭಾನುವಾರ ಸನ್ಮಾನಿಸಲಾಯಿತು. ಸಂಘದ ಮಾಜಿ ಅಧ್ಯಕ್ಷ ಸಿ.ಎಸ್. ಗ್ರಾಮಪುರೋಹಿತ, ರೋಣ ತಾಲೂಕು ಗ್ರಾಮೀಣ ಪ್ರದೇಶದ ಅಂಗವಿಕಲರ ಕ್ಷೇಮಾಭಿವೃದ್ಧಿ ಸೇವಾ ಸಂಸ್ಥೆಯ ಅಧ್ಯಕ್ಷ ಸಿ.ಎಸ್. ಅಣಗೌಡ್ರ ಸೇರಿದಂತೆ ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಸಾರ್ವಜನಿಕರು ಹಾಜರಿದ್ದರು.
ಲೋಕ ಗ್ರಹಿಸುವ ಪ್ರಾಮಾಣಿಕ ಯತ್ನವೇ ಸಂಶೋಧನೆ: ಪ್ರೊ. ಶಿವರಾಮ ಶೆಟ್ಟಿ
ಗೊಟಗೋಡಿ/ಶಿಗ್ಗಾಂವಿ: ವಾಸ್ತವ ಇಲ್ಲವೆ ಲೋಕವನ್ನು ಗ್ರಹಿಸಿಕೊಳ್ಳುವ ಒಂದು ಪ್ರಾಮಾಣಿಕ ಪ್ರಯತ್ನವೇ ನಿಜವಾದ ಸಂಶೋಧನೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಸಹಪ್ರಾಧ್ಯಾಪಕ ಪ್ರೊ.ಬಿ. ಶಿವರಾಮಶೆಟ್ಟಿ ಅಭಿಪ್ರಾಯಪಟ್ಟರು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಡುಮನೆ ಸಭಾಂಗಣದಲ್ಲಿ ಶನಿವಾರದಿಂದ ಆರಂಭವಾಗಿರುವ 5 ದಿನಗಳ ಪಿಎಚ್ಡಿ 4ನೇ ಸಂಶೋಧನಾ ಕಮ್ಮಟದ 3ನೇ ದಿನದ ಗೋಷ್ಠಿಯಲ್ಲಿ ಅವರು ಮಾತನಾಡಿ, ಆಧುನಿಕ ಶಿಕ್ಷಣ ವಿವಿಧ ಬಗೆಯ ವರ್ಗೀಕರಣಕ್ಕೆ ಒಳಪಟ್ಟಿದೆ. ಸಂಶೋಧನಾ ಸಿದ್ಧಾಂತಗಳ ಬಗೆಗೂ ಸಾಕಷ್ಟು ತೊಡಕುಗಳು ಇವೆ.
ಸಂಶೋಧಕನಿಗೆ ತಾನು ಆಯ್ಕೆ ಮಾಡಿಕೊಂಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಅನುಸರಿಸುವ ವಿಷಯಗಳನ್ನು ಹೇಗೆ ಗ್ರಹಿಸಬೇಕು ಎಂಬ ಮೂಲಭೂತ ಸಮಸ್ಯೆ ಇದೆ. ಸಂಶೋಧಕನಿಗೆ ಅನುಮಾನ, ಗೊಂದಲ, ಸಂದೇಹಗಳು ಇರಬೇಕು. ಆಗ ಮಾತ್ರ ಸಂಶೋಧನಾ ಪ್ರಕ್ರಿಯೆ ನಿರಂತರವಾಗಿ ಮುಂದುವರೆಯುತ್ತವೆ. ಅಲ್ಲದೇ ಉತ್ತಮ ಫಲಿತಗಳನ್ನು ಕಾಣಲು ಸಾಧ್ಯ ಎಂದು ತಿಳಿಸಿದರು. ಕರ್ನಾಟಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಹರೀಶ್ ರಾಮಸ್ವಾಮಿ ಮಾತನಾಡಿ, ಜ್ಞಾನವನ್ನು ಕಟ್ಟಿಕೊಳ್ಳುವುದೇ ಭಾಷೆಯ ಮೂಲಕ. ಆದ್ದರಿಂದ ಸಂಶೋಧಕರಿಗೆ ಭಾಷೆಯ ಬಗೆಗೆ ಮೂಲ ತಿಳಿವಳಿಕೆ ಅತ್ಯಾವಶ್ಯಕ. ಎಲ್ಲ ಬಗೆಯ ಸಾಹಿತ್ಯವನ್ನು ಓದುವ ಮೂಲಕ ಸಂಶೋಧನೆಗೆ ತೊಡಗಬೇಕು. ಸಂಶೋಧನೆಯ ಫಲಿತವೇ ಒಂದು ಹೊಸ ಸಿದ್ಧಾಂತವನ್ನು ರೂಪಿಸುವ ಹಾಗಿರಬೇಕು ಎಂದು ಸಂಶೋಧನಾರ್ಥಿಗಳಿಗೆ ಸಲಹೆ ನೀಡಿದರು. ಜಾನಪದ ವಿವಿ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ, ಕುಲಸಚಿವ ಡಾ. ಸಿ.ಎ. ಸೋಮಶೇಖರಪ್ಪ, ಮೌಲ್ಯಮಾಪನ ಕುಲಸಚಿವ ಪ್ರೊ. ಸ.ಚಿ. ರಮೇಶ, ಡಾ.ಕೆ. ಪ್ರೇಮಕುಮಾರ, ಪ್ರೊ. ಎಂ. ಚಂದ್ರ ಪೂಜಾರಿ ಇದ್ದರು. ಸಂಗಮೇಶ ಗಣಿ ಕಾರ್ಯಕ್ರಮ ನಿರೂಪಿಸಿದರು.